×
Ad

ವೈದ್ಯೆಯೊಂದಿಗೆ ಅನುಚಿತ ವರ್ತನೆ: ಗಿರಿನಗರ ಪೊಲೀಸ್ ಪೇದೆ ಅಮಾನತು

Update: 2018-10-24 22:43 IST

ಬೆಂಗಳೂರು, ಅ.24: ದಂತ ವೈದ್ಯೆಯೊಂದಿಗೆ ಅನುಚಿತವಾಗಿ ವರ್ತಿಸಿ ಪ್ರಾಣ ಬೆದರಿಕೆ ಹಾಕಿರುವ ಆರೋಪದ ಮೇಲೆ ಗಿರಿನಗರ ಪೊಲೀಸ್ ಠಾಣೆಯ ಪೇದೆಯೋರ್ವನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ತಿಳಿಸಿದ್ದಾರೆ.

ತನ್ನೊಂದಿಗೆ ಆಪ್ತವಾಗಿ ನಡೆದುಕೊಳ್ಳದಿದ್ದರೆ ಗುಂಡಿಟ್ಟು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದಂತ ವೈದ್ಯೆಯೊಬ್ಬರು ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಡಿಸಿಪಿ ಅಣ್ಣಾಮಲೈ ಅವರು ಪೇದೆ ಸುದರ್ಶನ್ ನನ್ನು ಸೇವೆಯಿಂದ ಅಮಾನತು ಮಾಡಿದ್ದಾರೆ.

ದೂರಿನಲ್ಲಿ ಏನಿದೆ?: ಹೊಸಕೆರೆಯಲ್ಲಿ ಡೆಂಟಲ್ ಕ್ಲಿನಿಕ್ ನಡೆಸುತ್ತಿದ್ದಾಗ 2013ರಲ್ಲಿ ಹಲ್ಲು ಚಿಕಿತ್ಸೆಗೆ ಆಗಮಿಸಿದ್ದ ಪೇದೆ ಸುದರ್ಶನ್ ತನ್ನ ಮೊಬೈಲ್ ಸಂಖ್ಯೆ ಪಡೆದುಕೊಂಡಿದ್ದ. ಬಳಿಕ ಪದೇ ಪದೇ ಚಿಕಿತ್ಸೆ ಸಲುವಾಗಿ ಕರೆ ಮಾಡುತ್ತಿದ್ದರು. ಕೆಲವು ದಿನಗಳ ಬಳಿಕ ರಾತ್ರಿ ವೇಳೆ ಕರೆ ಮಾಡಲು ಆರಂಭಿಸಿದ್ದ. ಇದಕ್ಕೆ ನಾನು ಪ್ರತಿಕ್ರಿಯಿಸುತ್ತಿರಲಿಲ್ಲ. ಇದರಿಂದ ಕೋಪಗೊಂಡ ಸುದರ್ಶನ್ ಕ್ಲಿನಿಕ್‌ಗೆ ಬಂದು ಗಲಾಟೆ ಮಾಡುತ್ತಿದ್ದರು. ನಂತರ ನಾಗದೇವನಹಳ್ಳಿಗೆ ಹೋಗಿ ವಾಸವಾಗಿದ್ದರೂ ವಿಳಾಸ ಪತ್ತೆ ಹಚ್ಚಿ ಕಿರುಕುಳ ನೀಡುತ್ತಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಬೆಳಗಾವಿ ಜಿಲ್ಲೆಯ ಸುದರ್ಶನ್ 2012ರಲ್ಲಿ ಸೇವೆಗೆ ಸೇರಿದ್ದು, ವಿವಿಧ ಠಾಣೆಗಳಲ್ಲಿ ಸೇವೆ ಸಲ್ಲಿಸಿರುವ ಈತ ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ನಗರದಲ್ಲಿ ನೆಲೆಸಿದ್ದಾನೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News