×
Ad

ಬಡತನ ದೇವರು ಕೊಟ್ಟ ಸೌಭಾಗ್ಯ: ನಿರ್ಭಯಾನಂದ ಸ್ವಾಮೀಜಿ

Update: 2018-10-24 22:46 IST

ಬೆಂಗಳೂರು, ಅ.24: ಬಡತನ ದೇವರು ಕೊಟ್ಟ ಸೌಭಾಗ್ಯ. ಅವಮಾನ ದೇವರು ಕೊಟ್ಟ ವರ. ಇವರೆಡನ್ನು ಅನುಭವಿಸುವ ವ್ಯಕ್ತಿಗಳು ಸಾಧಕರಾಗುತ್ತಾರೆ ಎಂದು ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.

ಆರ್‌ಡಿಸಿ ಪಬ್ಲಿಕೇಷನ್ಸ್ ನಗರದ ಗಂಗಮ್ಮ ತಿಮ್ಮಯ್ಯ ಕನ್‌ವೆನ್‌ಷನ್ ಸೆಂಟರ್‌ನಲ್ಲಿ ಲೇಖಕ ಎರ್ರೆಪ್ಪಗೌಡ ಚಾನಾಳ್‌ರವರ ‘ನಮ್ಮೆಳಗೊಬ್ಬ ರವಿ ಡಿ ಚನ್ನಣ್ಣನವರ್’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮನುಷ್ಯನಿಗೆ ಬಡತನ ಹಾಗೂ ಅವಮಾನಗಳು ಹೆಜ್ಜೆ ಹೆಜ್ಜೆಗೂ ಕಾಡಬೇಕು. ಆಗ ಮಾತ್ರ ವ್ಯಕ್ತಿಯಲ್ಲಿ ಏನಾದರು ಸಾಧಿಸಬೇಕೆಂದು ಛಲ ಹುಟ್ಟುತ್ತದೆ ಎಂದು ತಿಳಿಸಿದರು.

ನಮ್ಮ ಸರಕಾರ, ಬುದ್ಧಿಜೀವಿಗಳು ಹಾಗೂ ಮಠಾಧೀಶರು ದಲಿತರು ಹಾಗೂ ಹಿಂದುಳಿದ ಸಮುದಾಯದವರನ್ನು ದಾರಿ ತಪ್ಪಿಸುವ ಕೆಲಸದಲ್ಲಿ ತೊಡಗಿದ್ದಾರೆ. ದಲಿತ ವ್ಯಕ್ತಿಯನ್ನು ನೀನು ಹಿಂದುಳಿದವನು, ನಿನಗೆ ಸಮಸ್ಯೆಗಳಿವೆ ಎಂಬುದನ್ನು ಪದೇ ಪದೇ ಹೇಳುವ ಮೂಲಕ, ಆ ವ್ಯಕ್ತಿಯನ್ನು ನಿಸ್ಸಾಯಕನನ್ನಾಗಿ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಸಾಧಕನಾಗಬೇಕಾದವನು ಓದಲೇ ಬೇಕೆಂದಿಲ್ಲ. ಕನ್ನಡ ಓದಲು, ಬರೆಯಲು ಬಾರದವರು ಆರ್ಥಿಕವಾಗಿ ಸಬಲರಾಗಬಲ್ಲರು. ನನ್ನ ಆಶ್ರಮದಲ್ಲಿ ಓದಲು, ಬರೆಯಲು ಬಾರದ ವ್ಯಕ್ತಿಯಿದ್ದ. ಆದರೆ, ಆತನಿಗೆ ಅಡುಗೆ ಚೆನ್ನಾಗಿ ಮಾಡಲು ಬರುತ್ತಿತ್ತು. ಈಗ ಆತ ದೇಶದ 20ಕಡೆಗಳಲ್ಲಿ ಬೃಹತ್ ಹೊಟೇಲ್‌ಗಳನ್ನು ತೆರೆದಿದ್ದಾನೆ. ಹೀಗಾಗಿ ಓದುವವರು ಮಾತ್ರ ಸಾಧಕರಾಗುತ್ತಾರೆಂಬುದು ತಪ್ಪು ಎಂದು ಅವರು ಹೇಳಿದರು.

ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ರವಿ ಡಿ ಚನ್ನಣ್ಣನವರ್ ಮಾತನಾಡಿ, ಐಪಿಎಸ್ ಪರೀಕ್ಷೆಗೆ ತಯಾರಾಗುತ್ತಿದ್ದ ವೇಳೆ ಗಂಟೆಗಟ್ಟಲೆ ಕೂತು ಎಲ್ಲ ಪುಸ್ತಕಗಳನ್ನು ಓದಿದವನಲ್ಲ. ರಾಮಕೃಷ್ಣ ಪರಮಹಂಸ, ವಿವೇಕಾನಂದರ ತತ್ವಗಳು ನನ್ನೊಳಗೆ ಏನಾದರು ಸಾಧಿಸಬೇಕೆಂಬ ಛಲ ಮೂಡುವಂತೆ ಮಾಡಿದ್ದವು ಎಂದು ತಿಳಿಸಿದರು.

ನಾನು ಶಾಲಾ ದಿನಗಳಲ್ಲಿ ಉಡಾಫೆ ಹುಡುಗನಾಗಿದ್ದೆ. ಜಗಳ, ತಿರುಗಾಟ ಸರ್ವೆ ಸಾಮಾನ್ಯವಾಗಿತ್ತು ಹಾಗೂ ಅಗತ್ಯಕ್ಕಿಂತ ಹೆಚ್ಚು ತಿನ್ನುವುದು ರೂಢಿಯಾಗಿತ್ತು. ಆದರೆ, ವಿವೇಕಾನಂದರ ವಿಚಾರಗಳನ್ನು ತಿಳಿಯುತ್ತಿದ್ದಂತೆ ನನ್ನ ಬದುಕನ್ನು ನಿರ್ದಿಷ್ಟ ದಿಕ್ಕಿನಲ್ಲಿ ರೂಪಿಸಿಕೊಳ್ಳಲು ತೊಡಗಿದೆ. ಅದರ ಕಾರಣದಿಂದಾಗಿ ಐಪಿಎಸ್ ಅಧಿಕಾರಿಯಾಗಲು ಸಾಧ್ಯವಾಯಿತು ಎಂದು ಅವರು ಹೇಳಿದರು.

ನಮ್ಮಳಗೊಬ್ಬ ರವಿ ಡಿ ಚನ್ನಣ್ಣನವರ್ ಕೃತಿಯನ್ನು ಮುಖ್ಯ ಪೊಲೀಸ್ ಪೇದೆ ಎನ್.ಚಂದ್ರು ಬಿಡುಗಡೆ ಮಾಡಿದರು. ಈ ವೇಳೆ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಮನು ಬಳಿಗಾರ್, ಲೇಖಕ ಎರ್ರೆಪ್ಪಗೌಡ ಚಾನಾಳ್, ಸ್ವಾನ್ ಪ್ರಿಂಟರ್ಸ್‌ನ ಕೃಷ್ಣಮೂರ್ತಿ ಮತ್ತಿತರರಿದ್ದರು.

ನಾಗರಪಂಚಮಿಯೆಂದು ಹುತ್ತಕ್ಕೆ ಹಾಲು ಹಾಕುವುದನ್ನು ಬುದ್ಧಿ ಜೀವಿಗಳು ವಿರೋಧಿಸುತ್ತಾರೆ. ಆ ಮೂಲಕ ಭಾರತೀಯ ಸಂಸ್ಕೃತಿಯನ್ನು ಅವಮಾನ ಮಾಡುತ್ತಿದ್ದಾರೆ. ಕೇವಲ ಹುತ್ತಕ್ಕೆ ಎರಡು ಮೂರು ಲೀಟರ್ ಹಾಲು ಹಾಕಿದರೆ, ದೇಶಕ್ಕೆ ದೊಡ್ಡ ನಷ್ಟವಾದಂತೆ ನಟಿಸುತ್ತಿದ್ದಾರೆ.

-ನಿರ್ಭಯಾನಂದ ಸರಸ್ವತಿ ಸ್ವಾಮೀಜಿ, ರಾಮಕೃಷ್ಣ ಆಶ್ರಮ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News