×
Ad

ಅಮ್ಮ ಭಗವಾನ್ ದೇವಸ್ಥಾನದ ಮುಂದೆ ಕಸದ ತೊಟ್ಟಿ ನಿರ್ಮಾಣ: ಬಿಬಿಎಂಪಿ ವಿರುದ್ಧ ಕಿಡಿಕಾರಿದ ಹೈಕೋರ್ಟ್

Update: 2018-10-25 21:06 IST

ಬೆಂಗಳೂರು, ಅ.25: ದೊಮ್ಮಲೂರಿನ ಅಮ್ಮ ಭಗವಾನ್ ದೇವಸ್ಥಾನದ ಮುಂದೆ ಕಸದ ತೊಟ್ಟಿ ನಿರ್ಮಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿತು.

ಪಾಲಿಕೆಯು ಕಸದ ತೊಟ್ಟಿ ನಿರ್ಮಿಸಿರುವುದನ್ನು ಆಕ್ಷೇಪಿಸಿ ದೇವಸ್ಥಾನದ ಭಕ್ತ ನರಸಿಂಹಮೂರ್ತಿ ಹಾಗೂ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಅವರಿದ್ದ ವಿಭಾಗೀಯ ನ್ಯಾಯಪೀಠ ನಡೆಸಿತು.

ವಿಚಾರಣೆ ವೇಳೆ ನ್ಯಾಯಾಲಯದ ಸೂಚನೆಯಂತೆ ಕ್ರಮ ಕೈಗೊಳ್ಳಲು ಒಂದಿಷ್ಟು ಕಾಲಾವಕಾಶ ಬೇಕು ಎಂದು ಬಿಬಿಎಂಪಿ ಪರ ವಕೀಲರು ನ್ಯಾಯಪೀಠಕ್ಕೆ ಮನವಿ ಮಾಡಿಕೊಂಡರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಕಾಲಾವಕಾಶ ನೀಡುತ್ತೇವೆ. ಆದರೆ, ಮುಂದಿನ ವಿಚಾರಣೆ ವೇಳೆಗೆ ಇಡೀ ಬೆಂಗಳೂರಿನ ಸ್ವಚ್ಛತೆಯ ಕುರಿತು ವಸ್ತುನಿಷ್ಠ ಹಾಗೂ ಸಮರ್ಥನೀಯ ಕ್ರಮಗಳನ್ನು ಬಿಬಿಎಂಪಿ ಕೈಗೊಳ್ಳಲಿದೆ ಎಂದು ನಿರೀಕ್ಷಿಸುತ್ತೇವೆ ಎಂದು ಹೇಳಿ ವಿಚಾರಣೆಯನ್ನು ಅ.31ಕ್ಕೆ ಮುಂದೂಡಿತು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ 1997ರಲ್ಲಿ ಹಂಚಿಕೆಯಾದ ಸಿಎ ನಿವೇಶನದಲ್ಲಿ ನಿರ್ಮಾಣಗೊಂಡಿರುವ ಅಮ್ಮ ಭಗವಾನ್ ದೇವಸ್ಥಾನವು ಕರ್ನಾಟಕ ಸ್ಪಿರಿಚುಯಲ್ ವೆಲ್‌ಫೇರ್ ಟ್ರಸ್ಟ್ ಅಧೀನದಲ್ಲಿ ನಡೆಯುತ್ತಿದೆ. ಪೂಜೆ, ಪ್ರಸಾದ್ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ಇಲ್ಲಿಗೆ ಪ್ರತಿ ದಿನ ಸಾವಿರಾರು ಭಕ್ತರು ಬರುತ್ತಾರೆ. ಆದರೆ, ದೇವಸ್ಥಾನದ ಆಡಳಿತ ಮಂಡಳಿಗೆ ಯಾವುದೇ ನೋಟಿಸ್ ನೀಡದೆ ಬಿಬಿಎಂಪಿ ದೇವಸ್ಥಾನದ ಪ್ರವೇಶ ದ್ವಾರದ ಹತ್ತಿರವೇ ಕಸದ ತೊಟ್ಟಿ ನಿರ್ಮಿಸಿದೆ. ಇದರಿಂದ ದೇವಸ್ಥಾನಕ್ಕೆ ಬರುವ ಭಕ್ತರಿಗೆ ತೊಂದರೆ ಆಗುತ್ತಿದೆ. ಈ ಬಗ್ಗೆ ಬಿಬಿಎಂಪಿಗೆ ಮನವಿ ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ, ದೇವಸ್ಥಾನದ ಬಳಿ ನಿರ್ಮಿಸಿರುವ ಕಸದ ತೊಟ್ಟಿಯನ್ನು ಬೇರೆ ಕಡೆ ಸ್ಥಳಾಂತರಿಸಲು ಬಿಬಿಎಂಪಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News