ಶಾಸಕ ಸ್ಥಾನದ ಆಯ್ಕೆಯನ್ನು ಅಸಿಂಧುಗೊಳಿಸುವ ವಿಚಾರ: ಈಶ್ವರ್ ಖಂಡ್ರೆಗೆ ಹೈಕೋರ್ಟ್ ಸಮನ್ಸ್
ಬೆಂಗಳೂರು, ಅ.25: ಬೀದರ್ ಜಿಲ್ಲೆಯ ಭಾಲ್ಕಿ ವಿಧಾನಸಭಾ ಕ್ಷೇತ್ರದ ಶಾಸಕ ಈಶ್ವರ ಖಂಡ್ರೆ ಅವರ ಆಯ್ಕೆಯನ್ನು ಅಸಿಂಧು ಎಂದು ಘೋಷಿಸುವಂತೆ ಕೋರಿರುವ ಚುನಾವಣಾ ತಕರಾರು ಅರ್ಜಿಗೆ ಸಂಬಂಧಿಸಿದಂತೆ ಈಶ್ವರ ಖಂಡ್ರೆ ಅವರಿಗೆ ಹೈಕೋರ್ಟ್ ಸಮನ್ಸ್ ಜಾರಿಗೊಳಿಸಲು ಆದೇಶಿಸಿದೆ.
ಈ ಸಂಬಂಧ ಬಿಜೆಪಿಯಿಂದ ಸ್ಪರ್ಧಿಸಿ ಸೋಲನುಭವಿಸಿರುವ ಡಿ.ಕೆ.ಸಿದ್ರಾಮ ಅವರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಎನ್.ಸತ್ಯನಾರಾಯಣ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಈಶ್ವರ ಖಂಡ್ರೆ ಚುನಾವಣೆಯಲ್ಲಿ ಭಾರಿ ಅಕ್ರಮಗಳನ್ನು ಎಸಗಿದ್ದಾರೆ. ಹೀಗಾಗಿ, ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಕಲಂ 123ರ ಅನುಸಾರ ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ನನ್ನನ್ನು ವಿಜೇತ ಎಂದು ಘೋಷಿಸಬೇಕು ಎಂಬುದು ಅರ್ಜಿದಾರರ ಮನವಿ.
2018ರ ಮೇ 12ರಂದು ಚುನಾವಣೆ ಹಾಗೂ ಮೇ 15ರಂದು ಮತ ಎಣಿಕೆ ನಡೆದಿತ್ತು. ಚುನಾವಣೆಗೆ ಸ್ಪರ್ಧಿಸಿದ್ದ ಎಲ್ಲ ಅಭ್ಯರ್ಥಿಗಳನ್ನು ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ವಿವೇಕ ರೆಡ್ಡಿ ಅವರು, ಈಶ್ವರ ಖಂಡ್ರೆ ಅವರು ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಅಕ್ರಮವಾಗಿ ಮತ್ತು 40 ಸಾವಿರಕ್ಕೂ ಹೆಚ್ಚು ಗೋಡೆ ಗಡಿಯಾರ ಸೇರಿದಂತೆ ಇನ್ನಿತರ ಅಕ್ರಮಗಳನ್ನು ನಡೆಸಿದ್ದಾರೆ. ಹೀಗಾಗಿ, ಅವರ ಆಯ್ಕೆಯನ್ನು ಅಸಿಂಧು ಎಂದು ಘೋಷಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು.