ಕಟ್ಟಡ ನೆಲಸಮ ಪ್ರಕರಣ: ಚಾಮರಾಜನಗರ ಡಿಸಿ ಬಿ.ಬಿ.ಕಾವೇರಿ ಹೈಕೋರ್ಟ್‌ಗೆ ಖುದ್ದು ಹಾಜರು

Update: 2018-10-25 16:37 GMT

ಬೆಂಗಳೂರು, ಅ.25: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಮುಖ್ಯ ರಸ್ತೆಯಲ್ಲಿ ಕಟ್ಟಡ ನೆಲಸಮ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜನಗರ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಗುರುವಾರ ಹೈಕೋರ್ಟ್‌ಗೆ ಖುದ್ದು ಹಾಜರಾಗಿದ್ದರು.

ಕೊಳ್ಳೇಗಾಲ ನಿವಾಸಿ ಎನ್.ಎಸ್. ವಿಶ್ವನಾಥ ಶೆಟ್ಟಿ ಎಂಬುವರು ದಾಖಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾ. ರಾಘವೇಂದ್ರ ಚೌಹಾಣ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಎದುರು ಜಿಲ್ಲಾಧಿಕಾರಿಗಳು ಹಾಜರಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಡ್ವೋಕೇಟ್ ಜನರಲ್ ಅವರು ವಿಚಾರಣೆಗೆ ಹಾಜರಾಗಿ ವಿವರಣೆ ನೀಡಬೇಕು ಮತ್ತು ವಾದ ಮಂಡಿಸಬೇಕು ಎಂದು ನಿರ್ದೇಶನ ನೀಡಿದ ನ್ಯಾಯಪೀಠ ವಿಚಾರಣೆಯನ್ನು ನ.16ಕ್ಕೆ ಮುಂದೂಡಿತು.

ಹೆದ್ದಾರಿ ರಸ್ತೆ ಅಗಲೀಕರಣಕ್ಕೆ ಕೊಳ್ಳೇಗಾಲ ಹಾಗೂ ಯಳ್ಳಂದೂರು ಪಟ್ಟಣದ ಮುಖ್ಯ ರಸ್ತೆಯ ಕಟ್ಟಡಗಳ ತೆರವಿಗೆ ಜಿಲ್ಲಾಧಿಕಾರಿಗಳು ನೋಟಿಸ್ ಜಾರಿಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ 25ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಜಿಲ್ಲಾಧಿಕಾರಿಗಳ ಮುಂದಿರುವ ಅರ್ಜಿಗಳ ವಿಚಾರಣೆ ಪೂರ್ಣಗೊಳ್ಳುವವರೆಗೆ ಕಟ್ಟಡಗಳನ್ನು ತೆರವುಗೊಳಿಸದಂತೆ ಹೈಕೋರ್ಟ್ ನ್ಯಾಯಪೀಠ ಆದೇಶ ನೀಡಿತ್ತು.

ಅಲ್ಲದೆ, ಪೀಠದ ಆದೇಶವಿದ್ದರೂ ವಿಶ್ವನಾಥ ಶೆಟ್ಟಿಯವರಿಗೆ ಸೇರಿದ ಕೊಳ್ಳೇಗಾಲದ ಮುಖ್ಯ ರಸ್ತೆಯಲ್ಲಿರುವ ವಾಣಿಜ್ಯ ಕಟ್ಟಡವನ್ನು ಜಿಲ್ಲಾಧಿಕಾರಿಗಳು ನೆಲಸಮಗೊಳಿಸಿದ್ದರು. ಹೀಗಾಗಿ, ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿತ್ತು. ಈ ಹಿಂದಿನ ವಿಚಾರಣೆ ವೇಳೆ ಜಿಲ್ಲಾಧಿಕಾರಿಗಳು ಖುದ್ದು ಹಾಜರಾಗುವಂತೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಅದರಂತೆ ಜಿಲ್ಲಾಧಿಕಾರಿಗಳು ಹಾಜರಾಗಿದ್ದರು. ವಿಚಾರಣೆ ನಡೆಸಿದ ವಿಭಾಗೀಯಪೀಠ, ಮುಂದಿನ ವಿಚಾರಣೆಗೆ ಹಾಜರಾಗುವುದರಿಂದ ಜಿಲ್ಲಾಧಿಕಾರಿಗಳಿಗೆ ವಿನಾಯಿತಿ ನೀಡಿ, ಅಡ್ವೋಕೇಟ್ ಜನರಲ್ ಅವರು ಈ ಸಂಬಂಧ ವಿವರಣೆ ನೀಡುವಂತೆ ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News