ಭಾರತದಲ್ಲಿ ನಿರ್ಮಾಣಗೊಳ್ಳಲಿದೆ ವಿಶ್ವದ ಅತ್ಯಂತ ಎತ್ತರದ ರೈಲುಮಾರ್ಗ

Update: 2018-10-26 10:24 GMT

ಭಾರತೀಯ ರೈಲ್ವೆಯು ವಿಶ್ವದ ಅತ್ಯಂತ ಎತ್ತರದ ರೈಲುಮಾರ್ಗದ ಮೂಲಕ ದಿಲ್ಲಿಯನ್ನು ಜಮ್ಮು-ಕಾಶ್ಮೀರದ ಲಡಾಖ್ ಪ್ರದೇಶದೊಂದಿಗೆ ಸಂಪರ್ಕಿಸಲಿದೆ. ವ್ಯೆಹಾತ್ಮಕವಾಗಿ ಮಹತ್ವದ್ದಾಗಿರಲಿರುವ ಬಿಲಾಸಪುರ-ಮನಾಲಿ-ಲೇಹ್ ರೈಲುಮಾರ್ಗವು ಭಾರತ-ಚೀನಾ ಗಡಿಯುದ್ದಕ್ಕೆ ನಿರ್ಮಾಣಗೊಳ್ಳಲಿದೆ.

 ಯೋಜಿತ ರೈಲುಮಾರ್ಗದ ಮೊದಲ ಹಂತದ ಸ್ಥಳ ಸಮೀಕ್ಷೆ ಈಗಾಗಲೇ ಪೂರ್ಣಗೊಂಡಿದೆ. ಪ್ರತಿಕೂಲ ಹವಾಮಾನಗಳಲ್ಲಿಯೂ ಸಶಸ್ತ್ರ ಪಡೆಗಳಿಗೆ ಸುಲಭ ಸಂಪರ್ಕಕ್ಕೆ ಲಭ್ಯವಾಗಲಿರುವ ಈ ರೈಲುಮಾರ್ಗವು ನಯನ ಮನೋಹರ ಲಡಾಖ್ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಿದೆ. ಲಡಾಖ್ ಪ್ರದೇಶವು ಸದ್ಯ ರಸ್ತೆ ಮತ್ತು ವಾಯು ಮಾರ್ಗದ ಮೂಲಕ ಹೊರಜಗತ್ತಿನ ಸಂಪರ್ಕ ಹೊಂದಿದೆ. ಲಡಾಖ್-ಹಿಮಾಚಲ ಪ್ರದೇಶಗಳಲ್ಲಿ ಆಗಾಗ್ಗೆ ಭಾರೀ ಹಿಮಪಾತವಾಗುತ್ತಿರುತ್ತದೆ ಮತ್ತು ಪ್ರತಿಕೂಲ ಹವಾಮಾನದಿಂದಾಗಿ ರಸ್ತೆ ಹಾಗೂ ವಾಯು ಸಂಪರ್ಕಕ್ಕೆ ವ್ಯತ್ಯಯವಾಗುತ್ತಿರುತ್ತದೆ.

ರೈಲುಮಾರ್ಗದ ಅತ್ಯಂತ ಎತ್ತರದ ಬಿಂದು ಸಮುದ್ರಮಟ್ಟದಿಂದ 5,360 ಮೀಟರ್ ಮೇಲಕ್ಕೆ ಇರಲಿದೆ. ಈ ರೈಲ್ವೆ ಮಾರ್ಗವನ್ನು ಚೀನಾದಲ್ಲಿ ಸಮುದ್ರಮಟ್ಟದಿಂದ ಸುಮಾರು 2,000 ಮೀ.ಎತ್ತರದಲ್ಲಿರುವ ಕಿಂಘಾಯಿ-ಟಿಬೆಟ್ ರೈಲುಮಾರ್ಗ ದೊಂದಿಗೆ ಮಾತ್ರ ಹೋಲಿಸಬಹುದಾಗಿದೆ.

465 ಕಿ.ಮೀ.ಉದ್ದದ ಈ ರೈಲುಮಾರ್ಗವು ಅಂದಾಜು 83,360 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ. ಮೊದಲ ಹಂತದ ಸರ್ವೆಯಂತೆ ಈ ಮಾರ್ಗವು 74 ಸುರಂಗಗಳು,124 ದೊಡ್ಡ ಸೇತುವೆಗಳು ಮತ್ತು 396 ಕಿರು ಸೇತುವೆಗಳನ್ನು ಒಳಗೊಂಡಿರಲಿದೆ. ಮಾರ್ಗದುದ್ದಕ್ಕೂ 30 ನಿಲ್ದಾಣಗಳನ್ನು ಸ್ಥಾಪಿಸಲಾಗುವುದು.

ಕೀಲಾಂಗ್ ನಿಲ್ದಾಣವು 3,000 ಮೀ.ಎತ್ತರದಲ್ಲಿ ಸುರಂಗದಲ್ಲಿ ನಿರ್ಮಾಣಗೊಳ್ಳಲಿದ್ದು, ಇದು ದೇಶದ ಇಂತಹ ಮೊದಲ ರೈಲುನಿಲ್ದ್ದಾಣವಾಗಲಿದೆ. ರೈಲುಮಾರ್ಗದ ಅರ್ಧಕ್ಕೂ ಹೆಚ್ಚಿನ ಉದ್ದವನ್ನು ಸುರಂಗಗಳು ಆವರಿಸಿಕೊಳ್ಳಲಿವೆ ಮತ್ತು ಅತ್ಯಂತ ಉದ್ದ ಸುರಂಗವು 27 ಕಿ.ಮೀ.ಗಳಾಗಿರುತ್ತದೆ. ಸುರಂಗಗಳ ಒಟ್ಟೂ ಉದ್ದ 244 ಕಿ.ಮೀ.ಆಗಿರುತ್ತದೆ.

ಈ ರೈಲುಮಾರ್ಗವು ಸುಂದರನಗರ,ಮಂಡಿ,ಮನಾಲಿಯಂತಹ ಪ್ರಮುಖ ನಗರಗಳು,ಹಿಮಾಚಲ ಪ್ರದೇಶ ಮತ್ತು ಜಮ್ಮು-ಕಾಶ್ಮೀರದ ಪ್ರಮುಖ ಪಟ್ಟಣಗಳನ್ನು ಜೋಡಿಸಲಿದೆ.

ಈ ರೈಲುಮಾರ್ಗವು ಪೂರ್ಣಗೊಂಡ ನಂತರ ದಿಲ್ಲಿ ಮತ್ತು ಲೇಹ್ ನಡುವಿನ ಈಗಿನ ಪ್ರಯಾಣದ ಅವಧಿಯು 40 ಗಂಟೆಗಳಿಂದ 20 ಗಂಟೆಗಳಿಗೆ ತಗ್ಗಲಿದೆ. ಅಂತಿಮ ಸ್ಥಳ ಸಮೀಕ್ಷೆಯು 30 ತಿಂಗಳುಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು,ಅದರ ನಂತರ ವಿವರವಾದ ಯೋಜನಾ ವರದಿಯು ಅಂತಿಮಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News