ಸೇನಾ ವಾಹನದ ಮೇಲೆ ಕಲ್ಲೆಸೆತ: ಯೋಧ ಮೃತ್ಯು

Update: 2018-10-26 17:20 GMT

ಶ್ರೀನಗರ, ಅ.26: ಸೇನಾ ವಾಹನದತ್ತ ಪ್ರತಿಭಟನಾಕಾರರು ಕಲ್ಲೆಸೆದ ಕಾರಣ ತೀವ್ರ ಗಾಯಗೊಂಡು ಓರ್ವ ಯೋಧ ಮೃತಪಟ್ಟಿರುವ ಘಟನೆ ಜಮ್ಮು ಕಾಶ್ಮೀರದ ಅನಂತ್‌ನಾಗ್ ಬೈಪಾಸ್ ರಸ್ತೆಯ ಬಳಿ ನಡೆದಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಗುರುವಾರ ಸಂಜೆ ಆರು ಗಂಟೆಗೆ ಈ ಘಟನೆ ನಡೆದಿದೆ. ಕಲ್ಲೆಸೆತದಿಂದ ತೀವ್ರ ಗಾಯಗೊಂಡಿದ್ದ ರಾಜೇಂದ್ರ ಸಿಂಗ್ (22 ವರ್ಷ)ಗೆ ಪ್ರಥಮ ಚಿಕಿತ್ಸೆ ಒದಗಿಸಿ ಹೆಚ್ಚಿನ ಚಿಕಿತ್ಸೆಗಾಗಿ ಸೇನಾ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿ ವರದಿ ತಿಳಿಸಿದೆ. 2016ರಲ್ಲಿ ಸೇನಾಪಡೆಗೆ ಸೇರಿಕೊಂಡಿದ್ದ ರಾಜೇಂದ್ರ ಸಿಂಗ್ ಉತ್ತರಾಖಂಡ ನಿವಾಸಿಯಾಗಿದ್ದು ಇವರ ತಂದೆ ತಾಯಿಗೆ ಏಕೈಕ ಪುತ್ರನಾಗಿದ್ದ. ಕಳೆದ ಮೂರು ದಿನಗಳಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಯೋಧರು ಮೃತಪಟ್ಟಿದ್ದಾರೆ.

ಗುರುವಾರ ಟ್ರಾಲ್‌ನ ಲುರಾಗ್ರಾಮ್ ಗ್ರಾಮದಲ್ಲಿ ಸೇನಾ ಶಿಬಿರದ ಮೇಲೆ ಉಗ್ರರು ನಡೆಸಿದ್ದ ದಾಳಿಯಲ್ಲಿ ಓರ್ವ ಯೋಧ ಮೃತಪಟ್ಟಿದ್ದರೆ, ಶುಕ್ರವಾರ ಸೋಪೋರ್ ವಲಯದಲ್ಲಿ ನಡೆದ ಎನ್‌ಕೌಂಟರ್ ಸಂದರ್ಭ ಓರ್ವ ಯೋಧ ಮೃತಪಟ್ಟಿದ್ದಾರೆ. ಮೂವರು ಯೋಧರಿಗೆ ಸೇನಾಪಡೆಯಿಂದ ಅಂತಿಮ ಗೌರವ ಸಲ್ಲಿಸುವ ಕಾರ್ಯಕ್ರಮ ಶುಕ್ರವಾರ ನಡೆದಿದ್ದು ಜಮ್ಮು ಕಾಶ್ಮೀರ ಡಿಜಿಪಿ ದಿಲ್‌ಬಾಗ್ ಸಿಂಗ್ ಹಾಗೂ ಭದ್ರತಾ ಪಡೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News