ನಾನೀಗ ಎರಡು ಮಕ್ಕಳ ತಾಯಿಯಾದರೂ ಆ ಮಗುವಿನ ನೆನಪು ಕಾಡುತ್ತಲೇ ಇದೆ

Update: 2018-10-27 10:45 GMT

ಮಾನವ ತನ್ನ ಸಂಬಂಧಗಳನ್ನು ಮಾನವೀಯ ದೃಷ್ಟಿಯಿಂದ ಕಾಣಬೇಕು. ಆಗ ಮಾತ್ರ ಸಂಬಂಧಗಳಿಗೆ ಸೂಕ್ತ ಅರ್ಥ ದೊರೆಯುತ್ತದೆ. ಒಂದು ಮಗು ತನ್ನ ಉಸಿರನ್ನು ತಾಯಿಯ ಗರ್ಭದಿಂದಲೇ ಉಸಿರಾಡಲು ಪ್ರಾರಂಭಿಸುತ್ತದೆ. ತಾಯಿಯ ಒಂದೊಂದು ಹೃದಯಬಡಿತವನ್ನು ಅರ್ಥೈಸಿಕೊಂಡು ತಾಯಿಯೊಂದಿಗೆ ಜನ್ಮ ನಂಟು ಅಲ್ಲಿಂದ ಬೆಳೆಸಿಕೊಳ್ಳುತ್ತದೆ. ಅಲ್ಲಿಂದಲೇ ಸಂಬಂಧದ ಪಯಣ ಆರಂಭಿಸಿ ಪ್ರಪಂಚದ ಪ್ರತಿಯೊಂದರಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಸಂಬಂಧಗಳಿಗೆ ಸಾಕ್ಷಿಯಾಗುತ್ತದೆ. ಹೀಗೆ ಮಾನವ ಉಸಿರಾಡಲು ಆರಂಭಿಸಿ ಉಸಿರು ನಿಂತು ಹೋಗುವ ಕ್ಷಣಗಳವರೆಗೂ ಪಯಣದ ಅವಧಿ ಏನಿದೆಯೋ ಸಂಬಂಧಗಳ ನಂಟನ್ನು ಅರ್ಥಗರ್ಭಿತವಾಗಿ ಪೋಣಿಸುತ್ತಾ ಹೋಗುವನು.

ಇಲ್ಲಿ ಪ್ರೀತಿ ,ವಾತ್ಸಲ್ಯ ,ಸ್ನೇಹ, ವಿಶ್ವಾಸ, ಸಂತೋಷ, ಬಾಂಧವ್ಯ ಅನ್ನುವ ಸಕಾರಾತ್ಮಕ ಸಂಬಂಧಗಳೊಂದಿಗೆ ಅದಕ್ಕೆ ಪರ್ಯಾಯವಾದ ನಕಾರಾತ್ಮಕ ಸಂಬಂಧಗಳ ಆಕಸ್ಮಿಕ ನಂಟು ಜೀವನದುದ್ದಕ್ಕೂ ಮಾನವ ಅಳವಡಿಸಿಕೊಳ್ಳುತ್ತಾನೆ. ಇದರ ಮಧ್ಯೆ ಬದುಕಿನ ಪಯಣಗಳಲ್ಲಿ ನಮಗೆ ಸೂಕ್ತವಾಗುವ ಕೆಲವೊಂದು ವೃತ್ತಿಗಳನ್ನು ಆರಿಸಿಕೊಳ್ಳಬೇಕಾಗುತ್ತದೆ. ಬದುಕಿನಲ್ಲಿ ನಾನು ಆರಿಸಿಕೊಂಡ ವೃತ್ತಿಯೇ ಶುಶ್ರೂಷಕಿ.

ನನಗೆ ನಾನು ಹೆಮ್ಮೆಯಿಂದ ಗೌರವದಿಂದ ಆದರಿಸುವ ವೃತ್ತಿಯಾಗಿದೆ ಇದು. ಪ್ರಪಂಚಕ್ಕೆ ಪರಿಚಯವಾಗುವ ಮಗುವಿನ ಕಣ್ಣನ್ನು ತೆರೆಯುವುದರಿಂದ ಹಿಡಿದು ಪ್ರಪಂಚದಿಂದ ಅಸ್ತಂಗತವಾಗುವ ವ್ಯಕ್ತಿಯ ಕಣ್ಣ ರೆಪ್ಪೆಯನ್ನು ಮುಚ್ಚುವ ನಮ್ಮ ಕೈಗಳು ಈ ಆರಂಭ ಮತ್ತು ಅಂತ್ಯ ಎನ್ನುವ ಜೀವನಕ್ಕೆ ಅತ್ಯಂತ ಅನುಗ್ರಹಿತವಾದ ಮೊದಲ ಮತ್ತು ಕೊನೆಯ ಸಾಕ್ಷಿಯಾಗುವುದು. ಸಂಬಂಧಗಳಿಗಿಂತ ಮಿಗಿಲಾಗಿ ಒಬ್ಬ ವ್ಯಕ್ತಿ , ಅದು ರೋಗಿಯಾಗಿರಲಿ ಅಥವಾ ರೋಗಿಯ ಹಿತೈಷಿಯಾಗಿರಲಿ ಶುಶ್ರೂಷಕಿಯನ್ನು ಗೌರವಪೂರ್ವಕವಾಗಿ ಕಾಣುತ್ತಾರೆ. ಅವರ ನಿರೀಕ್ಷೆಗಳಿಗೆ ಆರೈಕೆಯಾಗಿರುವುದು ಮಾತ್ರವಲ್ಲ ಅವರ ನೋವಿಗೆ ಸಾಂತ್ವನವಾಗಿರುವುದು ನಮ್ಮ ಧರ್ಮ ಮತ್ತು ಕರ್ತವ್ಯ. ರೋಗಿಯು ನಮ್ಮ ಹೆಸರನ್ನು ಮರೆಯಬಹುದು ಆದರೆ ನಾವು ಅವರೊಂದಿಗೆ ಉತ್ತಮವಾಗಿ ಸ್ಪಂದಿಸಿದ ಆ ಕ್ಷಣವನ್ನು ಮರೆಯಲಾರರು. ರೋಗಿಯ ಮನ, ಆತ್ಮ, ಹೃದಯ, ದೇಹ ಈ ನಾಲ್ಕನ್ನು ಗಮನಿಸುವ ವೃತ್ತಿ ಶುಶ್ರೂಷಕಿ. ನನ್ನ ಪ್ರಕಾರ ಶುಶ್ರೂಷಕಿ ಅಂದರೆ ರೋಗಿಯ ಸೇವಕಿ. ನೋವು ಶಮನಗೊಳಿಸುವ ಪರಿಚಾರಕಿ.

ನನ್ನ ವೃತ್ತಿಯನ್ನು ಪ್ರಾಮಾಣಿಕತೆಯಿಂದ ಅಪಾರ ಗೌರವದಿಂದ ಗೌರವಿಸುವೆನು. ಗೌರವಿಸುತ್ತಾ ಇರುವೆನು. ಸರಿಸಮಾರು 17 ವರುಷಗಳ ಹಿಂದೆ ನನ್ನ ವೃತ್ತಿಬದುಕಿನಲ್ಲಿ ನಡೆದ, ಸದಾ ನನ್ನನ್ನು ಕಾಡುವ ಹಾಗೂ ನನ್ನ ಸ್ಮೃತಿಪಟಲದಲ್ಲಿ ಅಳಿಯದೇ ಉಳಿದ ನೆನಪನ್ನು  ಅನಾವರಣಗೊಳಿಸುತ್ತೇನೆ.

ಅಂದು ನಾನು ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಮಕ್ಕಳ ವಿಭಾಗದಲ್ಲಿ ಶುಶ್ರೂಷಕಿಯಾಗಿ ಸೇವೆ ಸಲ್ಲಿಸುತ್ತಿದ್ದೆ. ಮಕ್ಕಳ ವಿಭಾಗ ಅಂದ ಮೇಲೆ ಪ್ರಪಂಚಕ್ಕೆ ಪರಿಚಯವಾಗುವ ಮುದ್ದಾದ ಮುಗ್ಧ ಕಂದಮ್ಮಗಳ ಮೊಗವನ್ನು ನೋಡುವುದರಲ್ಲಿ ಅದೇನೋ ತೃಪ್ತಿ. ನನ್ನ ಮನಸ್ಸನ್ನು ಶುಭ್ರವಾಗಿರಿಸುವಂತಹ ಅಮೃತಘಳಿಗೆ. ಮಕ್ಕಳ ಅಳುವಿನ ಜೊತೆಗೆ ನನ್ನ ಹೃದಯ ಮಿಡಿತದ ಗಣಿತವನ್ನು ಗಣೀಕರಿಸುವ ಸನ್ನಿವೇಶ. ವೃತ್ತಿ ಬದುಕಿನಲ್ಲಿ ತೃಪ್ತಿ ಸಿಕ್ಕಿದಂತಹ ಮಧುರ ಕ್ಷಣ. ಮುಗ್ದ ಕಂದಮ್ಮಗಳ ಮುಗುಳ್ನಗೆಗಾಗಿ ಹಂಬಲಿಸುತ್ತಿದ್ದ ದಿನ.

ಅದೊಂದು ದಿನ ಆಕಸ್ಮಿಕವಾಗಿ ನನ್ನ ಸಹೋದ್ಯೋಗಿಯೊಬ್ಬಳು ಗಾಬರಿಯಿಂದ ಒಂದು ಮಗುವನ್ನು ಎತ್ತಿಕೊಂಡು ಬಂದು ನನ್ನ ಕೈಗೆ ನೀಡಿ “ಈ ಮಗುವಿನ ಹೆತ್ತ ತಾಯಿ ಮಗುವನ್ನು ತೊಟ್ಟಿಲಲ್ಲೇ ಬಿಟ್ಟು ಹೋಗಿದ್ದಾಳೆ” ಎಂದಳು. ನಂತರ ಹಿನ್ನೆಲೆ ಅರಿತಾಗ ಮಗು ಹೆಣ್ಣಾದ ಕಾರಣಕ್ಕೆ ತಬ್ಬಲಿಯಾಗಿಸಿ ಹೆತ್ತವ್ವ ಪರಾರಿಯಾದ ವಿಷಯ ತಿಳಿದು ಕರುಳು ಕಿತ್ತು ಬಂದಂತಾಯಿತು. ಮಗ್ಧತೆಯ ಪ್ರತೀಕವಾದಂತಿದ್ದ ಆ ಹೆಣ್ಣು ಕೂಸಿನ ಮೊಗದ ಮಂದಹಾಸ ತನಗಾರೂ ಇಲ್ಲವೆನ್ನುವ ಕೊರಗನ್ನೂ ಮಾಸಿದಂತಿತ್ತು. ಆ ಬಾಲೆಯ ತುಂಟಾಟ ನಮ್ಮ ಶುಶ್ರೂಷಕಿ ಸಮೂಹವನ್ನೇ ತನ್ನತ್ತ ಸೆಳೆಯುತ್ತಿತ್ತು. ಹಡೆದವಳು ಹತ್ತಿರ ಮಾಡದಿದ್ದರೇನಂತೆ?.. ನಾವು ಹಡೆದವಳಿಗಿಂತ ಮಿಗಿಲಾಗಿ ಆರೈಕೆ ಮಾಡಲು ಅಸಾಧ್ಯವಾದರೂ ತೊರೆದು ಹೋದ ಹೆತ್ತವಳಿಗಿಂತ ಒಂದು ಕೈ ಮೇಲು ಎಂಬಂತೆ ಪೋಷಿಸಲು ಸಾಧ್ಯ ಎಂಬ ಭಾವನೆ ನಮ್ಮಲ್ಲಿ ಮೂಡಿತು. ಆ ಮಗುವಿಗೆ ಆಸರೆಯಾದೆವು.. ಮುದ್ದಾಡಿದೆವು. ಮಗುವಿನ ಹಸಿವಿನ ಬೇಗೆ ನೀಗಿಸಿದೆವು. ದಿನದಿಂದ ದಿನಕ್ಕೆ ಮಗುವಿನ ಬೇಕು ಬೇಡಗಳನ್ನು ಅರಿತೆವು. ಹೀಗೆ ನಾವು ಸಹೋದ್ಯೋಗಿಗಳು ಪರಸ್ಪರ ಉತ್ತಮ ರೀತಿಯಲ್ಲಿ ಸ್ಪಂದಿಸಿ ಮಗುವಿಗೋಸ್ಕರ ನಮ್ಮ ಸಮಯವನ್ನು ಮೀಸಲಿಟ್ಟೆವು.

ಹೀಗೆ ನಮ್ಮ ಮಗುವಾಗಿ ಆ ಬಾಲೆಯ ಆರೈಕೆ ಮುಂದುವರಿಯುತ್ತಾ ದಿನಗಳು ಉರುಳಿ ವಾರಗಳಾಗಿ, ವಾರಗಳು ಸೇರಿ ತಿಂಗಳುಗಳಾಗಿ ವರುಷವಾದವು. ಒಂದಲ್ಲ ಒಂದು ದಿನ ಆ ಹೆತ್ತ ಕರುಳು ತನ್ನ ಮಗುವಿಗಾಗಿ ಪರಿತಪಿಸಿ ಪಶ್ಚಾತ್ತಾಪ ಪಟ್ಟು ಮರಳಿ ಆಸ್ಪತ್ರೆಗೆ ಬಂದು ವಿಚಾರಿಸುವಳು ಎನ್ನುವಂತಹ ನಿರೀಕ್ಷೆ ನಮ್ಮಲ್ಲಿತ್ತು. ಆ ನಿರೀಕ್ಷೆ ನಿರೀಕ್ಷೆಯಾಗಿಯೇ ಉಳಿಯಿತು. ನಂತರ ಮಗುವಿಗೆ ಎರಡು ವರುಷ ತುಂಬುವಷ್ಟರಲ್ಲಿ ಅನಿವಾರ್ಯ ಕಾರಣಗಳಿಂದ ನಾನು ನನ್ನ ಕೆಲಸ ಬಿಡಬೇಕಾದ ಪ್ರಸಂಗ ಬಂತು. ಕೆಲಸ ಬಿಟ್ಟಾಯಿತು. ಕೆಲಸ ಬಿಟ್ಟ ಮೇಲೂ ಆ ಮಗುವಿನ ನಗು.. ತುಂಟಾಟಿಕೆ.. ಪುಟ್ಟ ಪುಟ್ಟ ಹೆಜ್ಜೆಯನ್ನಿಟ್ಟು ನಡೆಯಲಾರಂಭಿಸಿದ ಆ ಕ್ಷಣ.. ಆ ದಿನವನ್ನು ನೆನೆಸುತ್ತಾ ನಿರಾಸೆ ಮನೋಭಾವನೆಯಿಂದ ದಿನಕಳೆಯುತ್ತಿದ್ದೆ. ಮುಂದೊಂದು ದಿನ ಆ ಮಗುವಿನ ನೆನಪು ಬಹಳವಾಗಿ ಕಾಡಿದಾಗ ಮಗುವನ್ನು ನೋಡಬೇಕೆಂದು ಹಂಬಲಿಸಿದಾಗ ಮನಸ್ಸಿನಲ್ಲಿ ಏನೇನೋ ಆಸೆ ಕಲ್ಪಿಸಿ ಆಸ್ಪತ್ರೆ ಕಡೆ ಧಾವಿಸಿದಾಗ ನನ್ನನ್ನೇ ನಾನು ನಂಬಲಾರದಂತಾದೆ. ದಿಗ್ಭ್ರಮೆಗೊಂಡೆ.

ನಾನು ಕೆಲಸ ಬಿಟ್ಟ ಅವಧಿಯಲ್ಲಿ ಯಾರೋ ಬೆಂಗಳೂರಿನ ಮಕ್ಕಳಿಲ್ಲದೆ ಕೊರಗುತ್ತಿದ್ದ ದಂಪತಿ ಕಾನೂನು ಪ್ರಕಾರವಾಗಿ ಆ ಮಗುವನ್ನು ದತ್ತು ಸ್ವೀಕರಿಸಿದ್ದಾರೆ ಎಂಬ ಮಾಹಿತಿ ದೊರೆಯಿತು. ಒಂದು ಕಡೆ ಮಗುವನ್ನು ನೋಡಲಾಗಲಿಲ್ಲವಲ್ಲ ಎನ್ನುವ ನೋವು ನನಗಾದರೂ ಆ ಮುಂದಿನ ಭವಿಷ್ಯ ಒಳ್ಳೆಯದಾಗಲಿ ಎಂದು ಹರಸಿ ಹಾರೈಸಿದ ದಿನ ನೆನಪಾಗಿ ಸರ್ವಶಕ್ತನ ಅನುಗ್ರಹದಿಂದ ಆ ಹಾರೈಕೆ ಫಲಿಸಿತಲ್ಲ ಅನ್ನುವ ಸಂತೃಪ್ತಿ ನನಗಾಯಿತು. ಮನಸ್ಸಿನಲ್ಲಿಯೇ “ಆ ಮಗು ಎಲ್ಲೇ ಇದ್ದರೂ ಚೆನ್ನಾಗಿರಲೆಂದು” ಪ್ರಾರ್ಥಿಸಿದೆ.

ಅನುದಿನ ಅನುಕ್ಷಣವೂ ಆ ಮಗುವಿನ ನೆನಪು ನನ್ನ ಸ್ಮೃತಿಪಟಲದಲ್ಲಿ ಮರುಕಳಿಸುತ್ತಾ ಇತ್ತು. ಇಂದು ನಾನು ಎರಡು ಹೆಣ್ಣು ಮಕ್ಕಳ ತಾಯಿಯಾದರೂ ನಾನು ಆರೈಕೆ ಮಾಡಿದ ಆ ಪುಟ್ಟ ಮಗುವಿನ ನೆನಪು ಎಡೆಬಿಡದೆ ಕಾಡುತ್ತಲೇ ಇದೆ. 17 ವರುಷ ಕಳೆದರೂ ಆ ಮಗುವಿನ ನೆನಪು ಹುಸಿಯಾಗದೆ ಇಂದಿಗೂ ಹಸಿಯಾಗಿಯೇ ಇದೆ. ಮರೆಯಲಾಗದೆ ಎಂದೆಂದೂ ಆ ಮಗುವಿಗೆ ನಾನು ಶುಭ ಹಾರೈಸುತ್ತಾ ಇರುವೆನು. “ ಪುಟ್ಟಿ... ನೀನು ಎಲ್ಲೇ ಇರು ಸುಖವಾಗಿರು. ಸರ್ವಶಕ್ತ ಅನುಗ್ರಹಿಸಿದ ಎಲ್ಲಾ ನಿಷ್ಕಳಂಕ ಪ್ರೀತಿ ನಿನಗೆ ಸಿಗಲಿ. ನಿನ್ನ ಉಜ್ವಲ ಭವಿಷ್ಯಕ್ಕಾಗಿ ನನ್ನ ಆಶೀರ್ವಾದ ಹಾರೈಕೆ ಸದಾ ಇರುವುದು.” ಒಂದಲ್ಲ ಒಂದು ದಿನ ನಮ್ಮ ಭೇಟಿಯಾಗುವ ನಿರೀಕ್ಷೆ ನನ್ನೊಳಗೆ ಸದಾ ಜೀವಂತವಾಗಿರುವುದು. ಸರ್ವಶಕ್ತನು ಅನುಗ್ರಹಿಸಲಿ.”

Writer - ಸುಜಾತಾ ಡಿಸೋಜ

contributor

Editor - ಸುಜಾತಾ ಡಿಸೋಜ

contributor

Similar News