ಕನ್ನಡ ನುಡಿ ಬದುಕುವುದು ಸಂಸ್ಕೃತ, ಇಂಗ್ಲಿಷ್ ಗಳನೆರಳಿನಲ್ಲಿ ಮಾತ್ರವೇ?

Update: 2018-10-27 13:03 GMT

ಒಂದು ನಾಡಿನ ಚೌಕಟ್ಟಿನಲ್ಲಿ ಅತೀ ಹೆಚ್ಚು ಜನರಾಡುವ ‘ಮನೆಮಾತು’ ಆ ನಾಡಿನ ಜನ ಬದುಕಿನ ನುಡಿಯೆಂದು ಗುರುತಿಸಿಕೊಂಡಿರುವುದರಿಂದ, ಅದರ ಏಳಿಗೆಯೊಂದಿಗೆ ನಡೆಯುವುದೇ ಸರಿಯಾದ ದಾರಿ. ಈ ನಿಟ್ಟಿನಲ್ಲಿ, ಅಸ್ಸಾಮಿ, ಒರಿಯಾ, ಪಂಜಾಬಿ, ತೆಲುಗು, ತಮಿಳು, ಮಲೆಯಾಳಿ, ಮರಾಠಿ, ಗುಜರಾತಿ, ಬೋಡೊ ಮೊದಲಾದ ನುಡಿಗಳು ಒಂದೊಂದು ನುಡಿಯಾಡುವ ಜನ ಬದುಕಿನ ಗುರುತಿನ ಪ್ರದೇಶಗಳನ್ನೇ ಸಾರಿಸಾರಿ ಹೇಳುತ್ತಿವೆ. ದೇಶದ ಒಕ್ಕೂಟದಲ್ಲಿದ್ದೂ ಆಯಾ ನುಡಿಯಾಡುಗ ಕಲ್ಚರಿನ ಮೂಲಕವೇ ತಮ್ಮ ಹೆಚ್ಚುಗಾರಿಕೆಯನ್ನು ಗುರುತಿಸಿಕೊಂಡಿವೆ. ಇದನ್ನೇ ಇಂಡಿಯಾದ ‘ಒಕ್ಕೂಟ ತಿಳಿವು’ ಎಂದು ಕೂಡ ತಿಳಿದು ಬೆಂಬಲಿಸುತ್ತಾ ಬರುತ್ತಿರುವುದು. ಕನ್ನಡ- ಕರ್ನಾಟಕದ ಮಟ್ಟಿಗೆ ಕೂಡಾ ಇದು ದಿಟದ ಸಂಗತಿ. ಒಂದು ನುಡಿಯ ಹೆಗ್ಗಳಿಕೆಯು ಆ ನುಡಿಯನ್ನು ಯಾವ ಯಾವ ವಲಯದಲ್ಲಿ ಹೇಗೆ ಬಳಸುತ್ತಿದ್ದೇವೆ ಎನ್ನುವುದರ ಮೇಲೆಯೇ ನಿಂತಿರುತ್ತದೆ. ಈ ನಿಟ್ಟಿನಲ್ಲಿ, ಸರಕಾರ ಕೂಡ ಕನ್ನಡಕ್ಕೆ ಮನ್ನಣೆ ಎಂದರೆ ಮಾತ್ರ ಸಾಲದು.

ನಾಡು ಮತ್ತು ನುಡಿಯ ನಂಟುಗಳು ಜಗತ್ತಿನ ಯಾವುದೇ ಜನಾಂಗದ ಗುರುತಿನ ಬೇರು. ಒಂದು ಜನಾಂಗ ಕಿರಿದಾದ ನೆಲದಗಲದಲ್ಲಿ ವಾಸಿಸುತ್ತಿದ್ದರೂ ಅಂತಹ ಜನ ಬದುಕಿನ ಸಣ್ಣ ಗುಂಪು ಕೂಡ ಗುರುತಿಸಲ್ಪಡುವುದು ಅವರಾಡುವ ನುಡಿಯ ಮೂಲಕವೇ. ಕಾಡು ಮೇಡುಗಳನ್ನೇ ತಮ್ಮ ಬದುಕಿನ ನೆಲವಾಗಿ ಮಾಡಿಕೊಂಡು ವಾಸಿಸುತ್ತಿರುವ ಸಣ್ಣಪುಟ್ಟ ಕಾಡುವಾಸಿ ಬುಡಕಟ್ಟು ಜನ ಗುಂಪುಗಳಿಂದ ಹಿಡಿದು ಜಗತ್ತಿನ ದೊಡ್ಡದೊಡ್ಡ ಜನ ಬದುಕಿನ ಗುರುತುಗಳು ಇವತ್ತಿಗೂ ಕಾಣುತ್ತಿರುವುದು ತಾವಾಡುವ ನುಡಿಯ ನಂಟಿನಲ್ಲಿಯೇ.

ನಾಡಿನ ಜನ ಬದುಕು ಮತ್ತು ಅವರಾಡುವ ನುಡಿಯಲ್ಲಿ ಬೆರೆತು ನಡೆವ ಬೆಳವಣಿಗೆಯೊಂದು ಇರುತ್ತದೆ. ಇದನ್ನು ಕಲ್ಚರ್ ಎನ್ನುತ್ತೇವೆ. ಹಾಗೆ, ನುಡಿ ಮತ್ತು ಬದುಕು ಒಂದಾಗದೇ ಇರುವ ಯಾವ ನಾಡಿನ ಕಲ್ಚರನ್ನೂ ಅರಿತು ಕಟ್ಟಿರುವ ಗುರುತುಗಳು ಇಲ್ಲ. ನಾಡೇ ಒಂದು, ನುಡಿಯೇ ಇನ್ನೊಂದು ಆಗಲು ಶುರುವಾದರೆ ಜನ ಬದುಕಿನ ಸನ್ನಿವೇಶದಲ್ಲಿ ಬಿರುಕುಗಳು, ತಳಮಳಗಳು ತಾನೇ ತಾನಾಗಿ ಹುಟ್ಟಿಕೊಳ್ಳುತ್ತವೆ.

ಇವತ್ತು ಕನ್ನಡದ ಸನ್ನಿವೇಶ ಏನಾಗಿದೆ?

ಎರಡು ಸಾವಿರ ವರುಶ ಕಳೆದು, ಮೂರನೇ ಸಾವಿರ ವರ್ಷದ ಮೊದಲಿಗೆ ಹೆಜ್ಜೆಯಿಟ್ಟಿದ್ದೇವೆ ನಾವು. ಕನ್ನಡ ನುಡಿಗೂ ಎರಡು ಸಾವಿರ ವರ್ಷಗಳ ಚರಿತ್ರೆಯಿದೆ. ಆದರೆ, ದೇಶದ ಜನ ಬದುಕಿನ ನುಡಿ-ನಡೆಗಳನ್ನು ಉಳಿಸಿಕೊಳ್ಳಲು ಕಟ್ಟಿಕೊಂಡಿರುವ ನಾಡಿನ ಗುರಿಯಾದ ‘ಮಂದಿಯಾಳ್ವಿಕೆ(ಡೆಮಾಕ್ರಸಿ) ‘ಸಂವಿಧಾನ(ಕಾನ್‌ಸ್ಟಿಟ್ಯೂಶನ್)’ ತೋರಿಸಿಕೊಟ್ಟ ದಾರಿಯಲ್ಲಿ ಇವತ್ತು ಕನ್ನಡನಾಡು ಮತ್ತು ಕನ್ನಡ ನುಡಿಯ ನಂಟಿನಲ್ಲಿ ಜನ ಬದುಕುಗಳು ಎದುರಿಸುತ್ತಿರುವ ಇಕ್ಕಟ್ಟುಗಳು ಯಾಕೆ ದಿನೇದಿನೇ ದೊಡ್ಡವಾಗುತ್ತಿವೆ?

ತಾಯಿ ನುಡಿಯಲ್ಲಿ ಕಲಿಯುವುದನ್ನು ಜಗತ್ತಿನ ದೊಡ್ಡದೊಡ್ಡ ಚಿಂತಕರು ಬೆಂಬಲಿಸಿದ್ದಾರೆ ಎನ್ನುವುದು ದಿಟ. ಈ ತಾಯಿ ನುಡಿ ಎನ್ನುವುದು ಏನು? ಹೇಗೆ? ಎಂದೆಲ್ಲಾ ಚಿಂತಿಸುವಾಗ, ಹುಟ್ಟಿದ ಮಕ್ಕಳು ಮೊದಲಿಗೆ ತಾಯಿಯೊಂದಿಗೆ ಇರುತ್ತವೆ, ಆದ್ದರಿಂದ ತಾಯಿಯಾಡುವ ಮಾತು ಮೊದಲು ಮಗುವಿನ ಕಿವಿಯ ಮೇಲೆ ಬೀಳುತ್ತದೆ. ಆ ಮಾತಿನ ಮೂಲಕವೇ ಒಂದು ನುಡಿಯನ್ನು ಮೊದಲಿಗೆ ಕಲಿಯುವ ಕೆಲಸ ಶುರುವಾಗುತ್ತದೆ, ಅದು ಮಕ್ಕಳು ಕಲಿಯುವ ಮೊದಲ ನುಡಿಯಾಗಿರುತ್ತದೆ. ಯಾರು ಈ ಮೊದಲು ಕಲಿತ ನುಡಿಯಲ್ಲಿ ಶಾಲೆ-ಕಾಲೇಜುಗಳ ಕಲಿಕೆಯನ್ನೂ ಮಾಡಬಲ್ಲರೋ ಆ ನುಡಿಯ ಮೂಲಕ ಅರಿವನ್ನು ಬೇಗ ದಕ್ಕಿಸಿಕೊಳ್ಳಲು ಬರುತ್ತದೆ ಎನ್ನುವುದು ಇದರ ಬೆನ್ನಿಗಿರುವ ತಿಳುವಳಿಕೆ.

ಇದನ್ನು ಇನ್ನೊಂದು ನಿಟ್ಟಿನಿಂದ ನೋಡುವಾಗ, ಕೇವಲ ತಾಯಿ ಮಾತ್ರವೇ ಅಲ್ಲ, ಆ ಕುಟುಂಬ, ಪರಿಸರದಲ್ಲಿ ಬದುಕುತ್ತಿರುವ ಅನೇಕರ ಮಾತು ಮಗುವಿನ ಕಿವಿಯ ಮೇಲೆ ಬೀಳುತ್ತಿರುತ್ತದೆ. ಮನೆಮಾತು, ನೆರೆಹೊರೆಯ ಮಾತು ಎರಡನ್ನೂ ಮಗು ತಾನು ಹುಟ್ಟಿದ ಗಳಿಗೆಯಿಂದಲೂ ಕೇಳಿಸಿಕೊಳ್ಳುವ ಅವಕಾಶಗಳು ಇದ್ದೇ ಇವೆ. ಹೀಗಾಗಿ ನನ್ನಂತಹವರನೇಕರು ಈ ದೇಶದಲ್ಲಿ ಒಂದಕ್ಕಿಂತ ಹೆಚ್ಚು ನುಡಿಗಳನ್ನು ಹುಟ್ಟಿದ ಗಳಿಗೆಯಿಂದಲೂ ಕೇಳಿಸಿಕೊಂಡು, ಮಾತನಾಡಲು ಕಲಿತವರೇ ಆಗಿದ್ದಾರೆ. ಯಾವ ಶಾಲೆ, ಕಾಲೇಜಿಗೆ ಹೋಗಿ ಕಲಿಯದೆಯೇ ಹುಟ್ಟಿನಿಂದ ಬೆಳೆದ ಪರಿಸರದಿಂದಾಗಿ ಒಂದೆರಡಕ್ಕಿಂತ ಹೆಚ್ಚು ಜನ ಬದುಕಿನ ನುಡಿಗಳನ್ನು ಆಡುತ್ತಿರುವವರೂ ಇದ್ದಾರೆ. ಇಂತಹ ಸನ್ನಿವೇಶ ಇರುವಾಗಲೂ ಕೂಡ ‘ತಾಯಿನುಡಿ-ಮಾತೃಭಾಷೆ’ ಎಂದು ಹೇಳುತ್ತಿರುವುದು ಒಂದು ‘ನಾಡಿನ ಜನ ಬದುಕಿನ ನುಡಿ’ಯನ್ನೇ ಅಲ್ಲವೇ. ನಮ್ಮ ನಾಡಿನ ಗುರುತನ್ನು ಕಟ್ಟಿಕೊಂಡಿರುವ, ಇಲ್ಲಿನ ಬಹು ಜನರಾಡುವ ನುಡಿಯನ್ನೇ ತಾನೇ. ಹೀಗಾಗಿ ‘ಮನೆಮಾತು’ ಯಾವುದೇ ಆಗಿರಲಿ ನಾವು ಬದುಕುತ್ತಿರುವ ಪ್ರದೇಶದ ಜನಬದುಕಿನ ಮಾತು ಯಾವುದು ಎನ್ನುವುದೇ ಏಳ್ಗೆಯ ಸಂಗತಿಯಾಗಿರುತ್ತದೆ. ಇದೇ ಸರಿ ಎನ್ನುವ ನಿಲುವನ್ನು ನುಡಿಯರಿಗರು (ಭಾಷಾಶಾಸ್ತ್ರಜ್ಞ) ಕೂಡ ಹೇಳುತ್ತಿದ್ದಾರೆ. ಕನ್ನಡ ನುಡಿಯರಿಗರಾದ ಕೆ.ವಿ.ನಾರಾಯಣ ಅವರು ಹೇಳುವಂತೆ-ಮೊದಲಿಗೆ ಮಗು ತಾಯಿಯೊಂದಿಗೆ ಮಾತನಾಡುವ ನುಡಿ ತಾಯಿನುಡಿ ಎನಿಸಿದರೆ, ಆಮೇಲೆ ವಿವರಣೆಯನ್ನ ಸ್ವಲ್ಪ ಬದಲಾಯಿಸಿದಾರೆ; ತಾಯಿ ಇಲ್ಲದೇ ಇದ್ರೆ ಯಾರು ಮಗುವನ್ನ ಸಾಕ್ತಾ ಇರ್ತಾರೆ ಅವರಾಡುವ ನುಡಿ ಅಂತಾಯಿತು. ಆದರೆ, ಕೋಟ್ಯಂತರ ಜನಕ್ಕೆ ಈ ದೇಶದಲ್ಲಿ ಮನೇನೇ ಇಲ್ಲ. ಎಲ್ಲೋ ಒಂದ್ಕಡೆ ವಾಸಾ ಮಾಡ್ತಾ ಇದಾರೆ. ಬೇರೆ ಬೇರೆ ಕಡೆಯಿಂದ ಬಂದಿರ್ತಾರೆ. ಇದರಿಂದಾಗಿ ‘ಮಾತೃಭಾಷೆ’ ಕಲ್ಪನೆಯನ್ನೇ ಅಡ್ಮಿನಿಸ್ಟ್ರೇಟಿವ್ ಆಗಿ ವಿವರಿಸಿ ಹೇಳೋಕೆ ಇವತ್ತಿನವರೆಗೂ ಆಗಿಲ್ಲ. ಇಲ್ಲಿ ಕನ್ನಡ ನುಡಿಯಾಡುಗರು 66 ಪರ್ಸೆಂಟಿದ್ದಾರೆ. ಉಳಿದ 34 ಪರ್ಸೆಂಟ್ ಅವರ ‘ಮಾತೃಭಾಷೆ’ಯಲ್ಲಿ ಕಲಿಕೆಯನ್ನು ಮಾಡ್ತಾನೂ ಇರಲ್ಲ, ಕೊಡ್ತಾನೂ ಇರಲ್ಲ. ಆದ್ದರಿಂದಾಗಿ ನಾವು ತಪ್ಪು ಕಲ್ಪನೆಗಳಲ್ಲಿ ಕಲಿಸ್ತಾ ಇದೀವಿ. ‘ಮಾತೃಭಾಷೆ’ಯ ಪರಿಕಲ್ಪನೆಯನ್ನೇ ಸರಿಯಾಗಿ ಹೇಳದೆ ಇರುವುದರಿಂದಾಗಿಯೆ ಹೀಗಾಗುತ್ತಿದೆ. 34 ಪರ್ಸೆಂಟಿನಲ್ಲಿ ಬರುವವರು ಆಲ್ಟರ್ನೇಟಿವ್ ಆಗಿ ಇಂಗ್ಲಿಷ್‌ನಲ್ಲಿ ಕಲೀತೀವಿ ಅಂತಾರೆ. ಕೊಟಾರಿ ಕಮಿಶನ್ ಕಲ್ಪಿಸಿಕೊಂಡಿದ್ದ ಇಂಡಿಯಾನೆ ಬೇರೆ ಆಗಿತ್ತು. ಅದರ ವರದಿಯಲ್ಲಿ ‘ಮಾತೃಭಾಷೆ’ ಅನ್ನೋದು ಅಡ್ಮಿನಿಸ್ಟ್ರೇಟಿವ್ ನಿರ್ಧಾರ ಅಷ್ಟೇ ಅದು. ಅದನ್ನು ಜಾರಿ ಮಾಡಲು ಆಗದ ರೀತಿಯಲ್ಲಿ ಇಂಡಿಯಾ ತನ್ನ ಆಕಾರವನ್ನ ಬದಲಿಸಿಕೊಂಡಿದೆ.

ಒಂದು ನಾಡಿನ ಚೌಕಟ್ಟಿನಲ್ಲಿ ಅತೀ ಹೆಚ್ಚು ಜನರಾಡುವ ‘ಮನೆಮಾತು ’ಆ ನಾಡಿನ ಜನ ಬದುಕಿನ ನುಡಿಯೆಂದು ಗುರುತಿಸಿಕೊಂಡಿರುವುದರಿಂದ, ಅದರ ಏಳಿಗೆಯೊಂದಿಗೆ ನಡೆಯುವುದೇ ಸರಿಯಾದ ದಾರಿ. ಈ ನಿಟ್ಟಿನಲ್ಲಿ, ಅಸ್ಸಾಮಿ, ಒರಿಯಾ, ಪಂಜಾಬಿ, ತೆಲುಗು, ತಮಿಳು, ಮಲೆಯಾಳಿ, ಮರಾಠಿ, ಗುಜರಾತಿ, ಬೋಡೊ ಮೊದಲಾದ ನುಡಿಗಳು ಒಂದೊಂದು ನುಡಿಯಾಡುವ ಜನ ಬದುಕಿನ ಗುರುತಿನ ಪ್ರದೇಶಗಳನ್ನೇ ಸಾರಿಸಾರಿ ಹೇಳುತ್ತಿವೆ. ದೇಶದ ಒಕ್ಕೂಟದಲ್ಲಿದ್ದೂ ಆಯಾ ನುಡಿಯಾಡುಗ ಕಲ್ಚರಿನ ಮೂಲಕವೇ ತಮ್ಮ ಹೆಚ್ಚುಗಾರಿಕೆಯನ್ನು ಗುರುತಿಸಿಕೊಂಡಿವೆ. ಇದನ್ನೇ ಇಂಡಿಯಾದ ‘ಒಕ್ಕೂಟ ತಿಳಿವು’ ಎಂದು ಕೂಡ ತಿಳಿದು ಬೆಂಬಲಿಸುತ್ತಾ ಬರುತ್ತಿರುವುದು. ಕನ್ನಡ-ಕರ್ನಾಟಕದ ಮಟ್ಟಿಗೆ ಕೂಡಾ ಇದು ದಿಟದ ಸಂಗತಿ. ಒಂದು ನುಡಿಯ ಹೆಗ್ಗಳಿಕೆಯು ಆ ನುಡಿಯನ್ನು ಯಾವ ಯಾವ ವಲಯದಲ್ಲಿ ಹೇಗೆ ಬಳಸುತ್ತಿದ್ದೇವೆ ಎನ್ನುವುದರ ಮೇಲೆಯೇ ನಿಂತಿರುತ್ತದೆ. ಈ ನಿಟ್ಟಿನಲ್ಲಿ, ಸರಕಾರ ಕೂಡ ಕನ್ನಡಕ್ಕೆ ಮನ್ನಣೆ ಎಂದರೆ ಮಾತ್ರ ಸಾಲದು.

ಆಡಳಿತದಲ್ಲಿ ಕನ್ನಡದ ಸಂಗತಿಯನ್ನು ನೋಡಿದರೆ; ‘1963 ರಿಂದ 1982 ರವರೆಗೆ ವಿಧಾನಮಂಡಲದಲ್ಲಿ ಕನ್ನಡವನ್ನು ಬಳಸಬೇಕೇ, ಬಳಸಿದರೆ ಅದಕ್ಕೆ ಮನ್ನಣೆ ನೀಡಬೇಕೇ’ ಎನ್ನುವ ವಿಚಾರವಾಗಿ ಅನುಮಾನಿಸುವಂತೆ ನಡೆದುಕೊಳ್ಳಲಾಗಿದೆ. ಕನ್ನಡ ಮತ್ತು ಹಿಂದಿಯ ಜೊತೆಗೆ ಇಂಗ್ಲಿಷನ್ನು ಮುಂದುವರಿಸಬಹುದು ಅಂತಲೇ ಸರಕಾರಿ ಆದೇಶ ಇದೆ. ಅಂದರೆ, ಕನ್ನಡವನ್ನೂ ಬಳಸಬಹುದು ಅಂತಾ ಹೇಳುತ್ತವೆಯೇ ಹೊರತಾಗಿ ಕನ್ನಡವನ್ನೇ ಬಳಸಬೇಕು ಎಂದು ಆಗಿಲ್ಲ. ಕನ್ನಡ ಬಳಕೆಯೇ ಮೊದಲಾಗಬೇಕು ಎನ್ನುವಂತೆ ನಡೆದುಕೊಂಡಿರುವುದು ಕಾಣುವುದಿಲ್ಲ.

ಕಲಿಕೆಯಲ್ಲೂ ಕೂಡ, ಕನ್ನಡದಲ್ಲಿ ಕಲಿಯುವ, ಕನ್ನಡವನ್ನು ಕಲಿಯುವ ಸಂಗತಿಗಳೂ ಕೂಡ ಎಡಬಿಡಂಗಿಯಾಗಿಯೇ ಉಳಿದಿವೆ. ಕಲಿಕೆಯ ಸನ್ನಿವೇಶದ ಕೇಳ್ವಿಯನ್ನು ಎದುರಿಗಿರಿಸಿಕೊಂಡ ಕೂಡಲೇ ಕಾಣುವ ಸಂಗತಿಗಳೆಂದರೆ; ನಾಡಿನಲ್ಲಿ ಬದುಕುತ್ತಿರುವ ಒಟ್ಟು ಜನರಲ್ಲಿ ಬೇರೆ ಬೇರೆ ಮನೆ ಮಾತನ್ನು ಹೊಂದಿರುವ ಸಣ್ಣಸಣ್ಣ ಗುಂಪುಗಳವರು ಇದ್ದಾರೆ ಎನ್ನುವುದು. ಅವರು, 1. ಅವರವರ ಮನೆಮಾತಿನಲ್ಲಿಯೇ ಕಲಿಯಬೇಕಾಗುತ್ತದೆಯೇ? 2. ಈ ಸಣ್ಣ ಸಣ್ಣ ಗುಂಪುಗಳ (ಅಲ್ಪಸಂಖ್ಯಾತರು)ವರು ನಡೆಸುವ ಶಾಲೆ ಕಾಲೇಜುಗಳಲ್ಲಿ ಆ ಗುಂಪುಗಳಾಡುವ ಮನೆ ಮಾತನ್ನೇ ಕಲಿಕೆಯ ನುಡಿಯನ್ನಾಗಿ ಮಾಡಿ ಕೊಡಲಾಗುತ್ತದೆಯೇ? ಇವು ಕೇಳ್ವಿಗಳು.

ಮೊದಲನೆಯ ಸಂಗತಿಯನ್ನು ಸರಿಯಾಗಿ ಗ್ರಹಿಸಿದರೆ, ತೆಲುಗು, ತಮಿಳು, ಉರ್ದು, ಮಲೆಯಾಳಿ, ಮರಾಠಿ ಮೊದಲಾಗಿ 170ಕ್ಕೂ ಹೆಚ್ಚು ಬೇರೆಬೇರೆ ನುಡಿಗಳು ಕನ್ನಡನಾಡಿನಲ್ಲಿ ಸಣ್ಣಸಣ್ಣ ಗುಂಪುಗಳ ಮನೆ ಮಾತಾಗಿ ಬಳಕೆಯಲ್ಲಿವೆ. ಇವರೆಲ್ಲರೂ ಬಹಳ ಕಾಲದಿಂದ ಕನ್ನಡನಾಡಿನಲ್ಲಿ ಬದುಕನ್ನು ನಡೆಸುತ್ತಿರುವವರೂ ಆಗಿದ್ದಾರೆ. ಹೀಗೆ ತಮ್ಮ ನುಡಿಗಳನ್ನು ಮನೆಮಾತಾಗಿ ಬಳಸುತ್ತಿರುವವರು ಬೀದಿಗೆ ಬಂದ ಕೂಡಲೇ-ಹಲವೊಮ್ಮೆ ಮನೆಯಲ್ಲಿಯೂ-ಕನ್ನಡ ನುಡಿಯಾಡುಗರೇ ಆಗಿದ್ದಾರೆ. ತಮ್ಮ ಮನೆಮಾತಿನ ಜೊತೆಯಲ್ಲಿಯೇ ಕನ್ನಡವನ್ನೂ ಶಾಲೆಗಳಿಗೆ ಬರುವ ಮೊದಲೇ ತಮ್ಮ ಬದುಕಿನ ನಾಡ ನುಡಿಯಾಗಿಸಿಕೊಂಡಿದ್ದಾರೆ. ಇದು ನಮ್ಮೆದುರಿಗೆ ಕಾಣುತ್ತಿರುವ ದಿಟ.

ಎರಡನೆಯ ಸಂಗತಿಗೆ ಬಂದರೆ, ಈ ‘ಅಲ್ಪಸಂಖ್ಯಾತ’ರೆಂದು ಗುರುತಿಸಲ್ಪಡುತ್ತಿರುವವರು ತಾವು ನಡೆಸುವ ಶಾಲೆ-ಕಾಲೇಜುಗಳು ತಮ್ಮ ಜಾತಿ ಇಲ್ಲವೇ ಮತದವರಿಗೆ ಮಾತ್ರವೇ ನಡೆಸುತ್ತಿರುವಂತಹವುಗಳಲ್ಲ. ಜೊತೆಗೆ ಒಂದು ಜಾತಿ ಇಲ್ಲವೇ ಮತದವರು ಒಂದೇ ನುಡಿಯಾಡುಗರಾಗಿದ್ದಾರೆ ಎನ್ನುವುದೂ ಕೂಡ ಸುಳ್ಳಿನ ಕಂತೆಯೇ ಸರಿ. ಕೆಲವೊಮ್ಮೆ ಮಾತ್ರವೇ ಈ ಸಂಗತಿಗಳು ಮುನ್ನೆಲೆಗೆ ಬರುತ್ತವೆ. ಕಲಿಕೆಯ ಸನ್ನಿವೇಶದಲ್ಲಂತೂ ಇದು ಇಲ್ಲವೇ ಇಲ್ಲ ಎಂದರೂ ತಪ್ಪಾಗುವುದಿಲ್ಲ. ಆದರೆ, ತಮ್ಮ ಗುಂಪಿನ ಗುರುತುಗಳು ಕಾಣುವಂತೆ ತಾವು ನಡೆಸುವ ಶಾಲೆ-ಕಾಲೇಜುಗಳನ್ನು ಆಗು ಮಾಡಿಕೊಂಡಿರುವುದು ಮಾತ್ರವೇ ಎದ್ದು ಕಾಣುವ ಸಂಗತಿ. ಹೆಚ್ಚೆಂದರೆ ತಮ್ಮ ಗುಂಪಿನವರಿಗೇ ಹೆಚ್ಚು ಅವಕಾಶಗಳು ಸಿಗುವಂತೆ ನೋಡಿಕೊಳ್ಳಬಹುದು. ಆದರೆ, ಹಣ ಹೂಡಿದವರು ಹಣ ಮಾಡಲು ತಮ್ಮ ಗುರುತಿನ ಗುಂಪುಗಳನ್ನು ಮಾತ್ರವೇ ಗುರಿಯಾಗಿಸಿ ಕೊಂಡಿರುವುದಿಲ್ಲ. ಅಂದರೆ, ಅಲ್ಲೂ ಕೂಡ ಕನ್ನಡ ಜನ ಬದುಕುಗಳೊಂದಿಗೆ ಬದುಕನ್ನು ಕಟ್ಟಿಕೊಳ್ಳ ಬಯಸುವವರು ಕಲಿಯಲು ಬರುತ್ತಾರೆ ಎನ್ನುವುದೇ ದಿಟ.

ಈ ನಾಡಿನ ಆಡಳಿತದ ಕಟ್ಟುಕಟ್ಟಳೆ, ಕಾನೂನು, ಜನಬದುಕಿನ ನಂಬಿಕೆ, ನುಡಿ, ನಡಾವಳಿ ಯಾವುದಕ್ಕೂ ಧಕ್ಕೆ ಬರದಂತೆಯೇ ನಡೆದು ಕೊಳ್ಳಬೇಕಾಗಿರುವುದರಿಂದ ‘ಅನುದಾನ ರಹಿತ’ ಅನ್ನುವುದೂ ಕೂಡ ಒಂದು ಅವಕಾಶ ಎಂದೇ ತಿಳಿಯಬೇಕಾಗುತ್ತದೆ. 1995ರಲ್ಲಿ ಇಂಡಿಯಾದ ‘ಪ್ರೆಸಿಡೆಂಟ್’ರಿಂದ ಸಹಿಯನ್ನು ಪಡೆದ 1983ರ ‘ಕರ್ನಾಟಕ ಎಜುಕೇಶನ್ ಆಕ್ಟ್’ನ ಮೊದಲ ಚಾಪ್ಟರಿನ 7ನೇ ಪ್ರಸಂಗದ ‘ಸಿ’ ಗುರುತಿನ ಸಂಗತಿಯು ‘ಶಿಕ್ಷಣ ಮಾಧ್ಯಮ’ದ ಬಗೆಗೆ ರಾಜ್ಯ ಸರಕಾರದ ಹೊಣೆಯನ್ನೇ ಹೇಳಲಾಗಿದೆ. ಹೀಗಾಗಿ ಕಲಿಕೆಯ ವಲಯದಲ್ಲಿ ಹಣ ಹೂಡಲು ಮಾಡಿಕೊಟ್ಟಿರುವ ಅವಕಾಶವನ್ನೇ ನಾಡು-ನುಡಿಯ ಎದುರಾಳಿಯಾಗಿಸಲಾಗದು.

ಚುನಾವಣೆಗಳ ಮೂಲಕ ಜನ ಬದುಕಿನ ಸೇವೆಗಾಗಿ ಜನವೇ ಆರಿಸಿದ ಅನೇಕರು ‘ಖಾಸಗಿ’ ಅನ್ನುವ ಹೆಸರಿನಲ್ಲಿ ಶಾಲಾ ಕಾಲೇಜುಗಳನ್ನೂ ನಡೆಸುತ್ತಿದ್ದಾರೆ. ಕೆಲವರು ತಮ್ಮವರ ಮೂಲಕ ನಡೆಸುತ್ತಿದ್ದಾರೆ. ಸರಕಾರದ ಒಳಗಿನದು-ಹೊರಗಿನದು ಎರಡೂ ಆಗಿದ್ದಾರೆ. ಆಡಳಿತದೊಳಗೊಂದು ಮೋರೆ, ಹೊರಕ್ಕೊಂದು ಮೋರೆ ಇಟ್ಟುಕೊಂಡಿ ರುವವರೇ ಕಟ್ಟು ಕಟ್ಟಳೆಗಳನ್ನು ಮಾಡುವವರೂ, ಸರಕಾರವೇ ತಾವಾಗಿದ್ದೂ ‘ಖಾಸಗಿ’ ಯಾದವರ ಈ ಹೊಣೆಯನ್ನು ಹೇಗೆ ಗುರುತಿಸಬೇಕು? ಕೋರ್ಟ್, ಕಾನೂನಿನ ತೊಡಕು ಎದುರಾದಾಗ ಇಂತಹವರು ಯಾವ ನಿಲುವಿನ ಪರವಾಗಿ ಕೆಲಸ ಮಾಡಬಲ್ಲರು?

2014ರ ಫೆಬ್ರವರಿಯ ಸುಪ್ರೀಂ ಕೋರ್ಟಿನ ತೀರ್ಪು ಕರ್ನಾಟಕ ಸರಕಾರದ ಮೇಲ್ಮನವಿಯ ಸರಿ ತಪ್ಪುಗಳ ಲೆಕ್ಕಾಚಾರವನ್ನು ಕುರಿತು; 1994ರ ‘ಕನ್ನಡದಲ್ಲಿ ಕಲಿಕೆಯ ಅದೇಶವನ್ನು ಸರಕಾರಿ ಶಾಲೆಗಳು ಮತ್ತು ಅನುದಾನಿತ ಶಾಲೆಗಳಿಗೆ ಜಾರಿ ಮಾಡಬಹುದು ಎಂದಿತು. ‘ಅನುದಾನ ರಹಿತ’ ಖಾಸಗಿ ಶಾಲೆಗಳಿಗೆ ಇದು ಒಳಪಡುವಂತಹುದಲ್ಲ ಎಂದು ಹೇಳಿತು. ಸಂವಿಧಾನದ ಕಲಂ 350(ಎ) ಪ್ರಕಾರ ರಾಜ್ಯ ಸರಕಾರಕ್ಕೆ ‘ಕಲಿಕೆ’ಯ ಮೀಡಿಯಂ ಅನ್ನು ತೀರ್ಮಾನಿಸುವ ಅಧಿಕಾರವಿದೆ ಎನ್ನುವ ಮಂಡನೆಯು ಬಿದ್ದು ಹೋಯಿತು.

ಕನ್ನಡ ನಾಡಿನ ಮಕ್ಕಳು ‘ಯಾವ ನುಡಿಯನ್ನು ಬಳಸಿ (ಮೀಡಿಯಂ) ಓದು-ಬರಹ ಕಲಿಯಬೇಕು’ ಎನ್ನುವ ಕುರಿತಾಗಿ ರಾಜ್ಯ ಸರಕಾರ ಕರ್ನಾಟಕ ಜನತೆಗೆ ನುಡಿ ನ್ಯಾಯ ಒದಗಿಸಲಾಗದ ಇಕ್ಕಟ್ಟಿಗೆ ಸಿಲುಕಿಕೊಂಡಿದೆ ಇವತ್ತು. ಕನ್ನಡ-ಕರ್ನಾಟಕಗಳನ್ನು ಕಾಪಾಡುವ ನುಡಿ ನ್ಯಾಯವನ್ನು ಹಣವಿರುವವರಿಗೆ ವಹಿಸಿಕೊಟ್ಟಂತಾಗಿದೆ. ‘ತಾಯಿನುಡಿ- ಮನೆಮಾತಿ’ನಲ್ಲಿ ಕಲಿಯುವ ಕಲಿಕೆಯ ಫಿಲಾಸಪಿಗಳನ್ನು ಸುಪ್ರೀಂಕೋರ್ಟಿಗೆ ಅರಿವು ಮಾಡಿಕೊಡಲು ಹೋಗಿ ಮುಗ್ಗುರಿಸಿದೆ ಕರ್ನಾಟಕದ ಆಡಳಿತ. ಇದನ್ನು ಹತ್ತು ಹಲವು ಬಗೆಗಳಲ್ಲಿ ‘ಖಾಸಗೀಕರಣ’ದಲ್ಲೂ ಪಾಲು ಹೊತ್ತಿರುವ ಸರಕಾರಿ ಆಡಳಿತಗಾರರ ಬಗೆಯೆಂದು ತಿಳಿಯಬೇಕೇ?. ಬಲು ದೊಡ್ಡ ಅಣಕ ಇದು.

‘ಕನ್ನಡ ಆಡಳಿತ ಭಾಷಾ ಸಮಿತಿ, ಕನ್ನಡ ಆಡಳಿತ ಭಾಷಾ ಕಾವಲು ಸಮಿತಿ, ಕನ್ನಡ ಕಾವಲು ಮತ್ತು ಗಡಿ ಸಲಹಾ ಸಮಿತಿ, ಅಧಿಕಾರಿ ಮಟ್ಟದ ಸಮಿತಿ, ಕನ್ನಡ ಅಭಿವೃದ್ಧಿ ಮಂಡಳಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಮೊದಲಾದವುಗಳ ಮೂಲಕ ಕರ್ನಾಟಕದ ಆಡಳಿತವನ್ನು ಕನ್ನಡವಾಗಿಸಲು ಪ್ರಯತ್ನಿಸಲಾಗಿದೆ ದಿಟ. ಆಡಳಿತದ ಅನುಕೂಲಕ್ಕೆಂದು ಆಡಳಿತ ಪಾರಿಭಾಷಿಕ ಪದಕೋಶ, ಇಲಾಖಾ ಕೈಪಿಡಿ, ಕಚೇರಿ ಕೈಪಿಡಿ, ಆಡಳಿತ ಸಂಹಿತೆ, ಮೊದಲಾದವುಗಳನ್ನೂ ಪ್ರಕಟಿಸಿದೆ. ಇವೆಲ್ಲವನ್ನೂ ಕರ್ನಾಟಕ ಸರಕಾರ ತನ್ನ ‘ನುಡಿನೀತಿ’ ಎನ್ನುವಂತೆ ಮಾಡುತ್ತಲೇ ಬರುತ್ತಿದೆ. ಅದನ್ನು ಜಾರಿಗೆ ತರಲು 1963ರಿಂದ ಈವರೆಗೆ ಸರಿ ಸುಮಾರು 300ಕ್ಕೂ ಹೆಚ್ಚು ಆದೇಶಗಳನ್ನು ಹೊರಡಿಸಿದೆ. ಆದರೆ, ನವೆಂಬರ್ ತಿಂಗಳಲ್ಲಿ ನೆನಪಾಗುವ ಇವೆಲ್ಲವೂ ಇಂಗ್ಲಿಷ್ ಉಪಯೋಗದ ಆದೇಶದ ಎದುರು ಮೂಲೆ ಗುಂಪಾಗುತ್ತಲೇ ಇರುತ್ತವೆ. ಕರ್ನಾಟಕದಲ್ಲಿ ಕನ್ನಡ ಬಳಕೆಯು ಆಡಳಿತದಲ್ಲಿ, ಕಲಿಕೆಯಲ್ಲಿ, ಕನ್ನಡ ಬದುಕುಗಳಿಗೆ ಬೇಕಾದ ಹಕ್ಕಾಗಿ ಯಾಕೆ ಉಳಿದಿಲ್ಲ ಎನ್ನುವ ಕೇಳ್ವಿಯು ದಿನೇದಿನೇ ದೊಡ್ಡದಾಗುತ್ತಲೇ ಇರುತ್ತದೆ.

ಹೀಗೆ ಚರ್ಚಿಸುವಾಗ, ಆಳುತ್ತಿದ್ದವರು ಮತ್ತು ಆಡಳಿತದಲ್ಲಿದ್ದವರು ಕನ್ನಡ ನುಡಿಯನ್ನು ದೂರವಿಡುವ ಗುರಿಯನ್ನು ಇಟ್ಟುಕೊಂಡವರಾಗಿದ್ದರೇ? ಎನ್ನುವ ಕೇಳ್ವಿ ಎದ್ದು ನಿಲ್ಲುತ್ತದೆ. ನುಡಿಯಾಡುಗರ ನೆಪದಲ್ಲಿ ರಾಜ್ಯವನ್ನು, ರಾಜ್ಯದ ಆಡಳಿತವನ್ನು ಕಟ್ಟಲು ಹೊರಟವರಿಗೆ ಅಂತಹ ಗುರಿಗಳಿದ್ದವು ಎಂದು ಹೇಳಲು ಬರುವುದಿಲ್ಲ. ಆದರೆ, ಸರಕಾರಿ ಆಡಳಿತದ ಜನಬಳಕೆಯ ನೆಪದಲ್ಲಿ: ಆಯುಕ್ತ, ಅಧೀಕ್ಷಕ, ಆರಕ್ಷಕ, ಅಭಿಯಂತರ, ವಿದ್ಯುಚ್ಛಕ್ತಿ, ಕ್ಷೇತ್ರಾಧಿಕಾರಿ, ಅಧಿಸೂಚನೆ, ನಿರೀಕ್ಷಣಾಧಿಕಾರಿ, ಮಹಾ ನಿರೀಕ್ಷಕ, ಅನುಸೂಚಿತ, ಕ್ರಮಾಧಿಕಾರ, ವಿಮೋಚನಾಧಿಕಾರ, ಸ್ವಾಮ್ಯಾಧಿಕಾರ, ವಿಕ್ರಯಪತ್ರ, ಪರಿಚ್ಛೇದ, ಶಾಖಾಧಿಕಾರಿ, ಸಚಿವಾಲಯ, ಸೇವಾವರ್ಗ, ಸ್ವಾಯುತ್ತ, ಜೇಷ್ಠತಮ, ಅಧಿವೇಶನ, ಋಣಪರಿಹಾರ ನಿಧಿ, ಅಧಿನಿಯಮ, ಸ್ಥಾಯಿ ನಿಯಮ, ಪರಿನಿಯಮ, ಪ್ರಾಧಿಕಾರ, ದಂಡಾಧಿಕಾರಿ, ಸಂತಾನಶಕ್ತಿಹರಣ, ಉಪಪ್ರಧಾನ, ಉಪಪ್ರಕರಣ, ಪ್ರಧಾನಮುಖ್ಯ, ಉತ್ತರಜೀವಿತಾಧಿಕಾರ, ಅನುಷ್ಠಾನ, ಅಭಿವೃದ್ಧಿ, ಪ್ರಾಧಿಕಾರ, ಪ್ರಾಧಿಕಾರಿ, ಅಧಿಕಾರಿ, ಅಧಿನಿಯಮ, ಅಧಿ ನಿಯಮಿಸು, ಅಧಿವೇಶನ, ವಿಧೇಯಕ, ಅನುಮೋದನೆ, ಪ್ರಖ್ಯಾಪಿಸಲಾದ, ನಿಯಮ, ವಿನಿಯಮ, ಅಧ್ಯಾದೇಶ, ಅನ್ಯಥಾ, ಅನುಚ್ಛೇದ, ಅನುಸೂಚಿ, ರಾಜಭಾಷಾ, ಉಪಬಂಧ, ವಿಧಿ, ಉಪವಿಧಿ, ವಿಧಿಮಾನ್ಯತೆ, ಅಧಿಕೃತ, ಕಾರ್ಯದರ್ಶಿ, ಉಪಕಾರ್ಯದರ್ಶಿ, ಅಧೀನ ಕಾರ್ಯದರ್ಶಿ ಮೊದಲಾಗಿ ಕನ್ನಡಿಗರಿಗೆ ಅರಿವಿಗೆ ಬರ ದಂತಹ ಸಂಸ್ಕೃತ ಪದಗಳನ್ನು ಆಶ್ರಯಿಸಲಾಗಿದೆ ಯಾಕೆ?

ಈ ಯಾವುವೂ ಕನ್ನಡ ಜನ ಮಾತಿನಲ್ಲಿ ಇಲ್ಲ. ಕನ್ನಡ ಜನರ ತಿಳಿವಿಗೂ ಹತ್ತುವುದಿಲ್ಲ. ಈ-ಇಂತಹ ಪದಗಳನ್ನು ಜನ ಯಾವ ಉಪಯೋಗದ ಅನುಕೂಲಕ್ಕಾಗಲಿ ಬಳಸುವುದೂ ಇಲ್ಲ. ಆದರೂ ‘ಸಂಸ್ಕೃತ ಪದ’ ಬಳಕೆಯನ್ನು ಇಂಗ್ಲಿಷ್ ಪದ ಬಳಕೆಯ ಬದಲಿ ಜಾಗದಲ್ಲಿ ತಂದು ತುರುಕುವ ಕೆಲಸ ಮುಂದುವರಿಯುತ್ತಲೇ ಬರುತ್ತಿದೆ. ಇವನ್ನು ಕಣ್ಣಿಗೆ ರಾಚುವಂತೆ ಕನ್ನಡ ಬರಹದಲ್ಲಿ ತೂರಿಸುವುದನ್ನೇ ‘ಕನ್ನಡದ ಕೆಲಸ’ ಎಂತಲೂ ದೊಡ್ಡಸ್ತಿಕೆಯನ್ನು ತೋರಿಸಿಕೊಳ್ಳಲಾಗುತ್ತಿದೆ. ಆದರೆ, ಇದು ಏನೆಂದು ಕಮ್ಯೂನಿಕೇಟ್ ಆಗದೆ ಮತ್ತೆ ಇಂಗ್ಲಿಷ್‌ಗೆ ಮರಳಿ ತಿಳಿಯುವುದೋ, ಇಂಗ್ಲಿಷನ್ನೇ ಬಳಸುವುದೋ ನಡೆಯುತ್ತಿದೆ. ಆದ್ದರಿಂದಾಗಿ, ಆಡಳಿತ ಮತ್ತು ಆಳ್ವಿಕೆಗಳ ಮೂಲಕ ಪಡೆಯುವ ಜನಾನುಕೂಲಗಳ ಸನ್ನಿವೇಶದ ಮಾತುಕತೆಯಲ್ಲಿ ಇಂಗ್ಲಿಷ್ ಪದಗಳೇ ಕನ್ನಡವಾಗುತ್ತಿರುವುದನ್ನು, ಕನ್ನಡ ಪದಗಳಂತೆ ಬಳಕೆಯಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಇಂತಹದೇ ಬಗೆಯ ಪದ ಬಳಕೆಯಿಂದಾಗಿ ಕನ್ನಡ ಜನ ಬದುಕಿನಿಂದ ಬಂದ ಮಕ್ಕಳು ಕನ್ನಡ ಓದು-ಬರಹ ಕಲಿಯುವ ತೊಡಕೂ ಕೂಡ ದೊಡ್ಡದಾಗುತ್ತಾ ನಡೆದಿದೆ. ‘ಸಂಸ್ಕೃತ ಪದ’ಗಳನ್ನು ತಂದು ತುರುಕಿ ಬೇಡದ ಬಿಕ್ಕಟ್ಟನ್ನು ಒಡ್ಡಿಕೊಳ್ಳುತ್ತಿರುವುದೇಕೆ ಎನ್ನುವುದನ್ನು ಹೇಳಲು ಕೇಳಲು ಯಾವ ಹೊಣೆಗಾರರಿಗೂ ಪುರುಸೊತ್ತಿಲ್ಲ.

ಹಾಗಿದ್ದರೆ, ಕನ್ನಡ ನುಡಿ, ಕನ್ನಡನಾಡು ಮತ್ತು ಇಲ್ಲಿನ ಜನ ಬದುಕು ‘ಸಂಸ್ಕೃತ’ ಇಲ್ಲವೇ ‘ಇಂಗ್ಲಿಷ್’ ಎಂಬ ಕನ್ನಡಕ್ಕೆ ಹೊರಗಿನವುಗಳ ನೆರಳಿನಲ್ಲಿ ಮಾತ್ರವೇ ಬದುಕಬಲ್ಲುದು ಎಂದು ದಿಕ್ಕೆಟ್ಟು ಯೋಚಿಸುತ್ತಿದ್ದೇವೆಯೇ?

......................

ಲೇಖಕ ಡಾ.ಆರ್.ಚಲಪತಿ: ಸೀನಿಯರ್ ಫೆಲೊ, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ, ಮೈಸೂರು

ಕರ್ನಾಟಕದ ಜನ ಜೀವನ, ಆರ್ಥಿಕತೆ, ಭಾಷೆ, ಶಿಕ್ಷಣ ನೀತಿ, ಪರಿಸರ, ರಾಜಕೀಯ, ಕಲೆ-ಸಂಸ್ಕೃತಿ ಕುರಿತಂತೆ ವಿಶ್ಲೇಷಿಸುವ ವಿಶೇಷ ಬರಹಗಳ ಸರಣಿ ಮಾಲಿಕೆ ಈ ವಾರದಿಂದ ಆರಂಭ.

Writer - ಡಾ.ಆರ್.ಚಲಪತಿ

contributor

Editor - ಡಾ.ಆರ್.ಚಲಪತಿ

contributor

Similar News