ಕರ್ನಾಟಕ ಜಾನಪದಕ್ಕೆ ಅರ್ನಾಲ್ಡ್ ಬಾಕೆ ಕೊಡುಗೆಗಳು

Update: 2018-10-27 13:28 GMT

ಅರ್ನಾಲ್ಡ್ ಬಾಕೆ (1899-1963) ಓರ್ವ ಡಚ್ ವಿದ್ವಾಂಸ. ಸುಮಾರು 1930ರ ದಶಕದಲ್ಲಿ ಸಂಗೀತ ಕ್ಷೇತ್ರದಲ್ಲಿ ಹೆಚ್ಚಿನ ವಿದ್ವತ್ ಪಡೆಯಲು ಲೈಡನ್ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಪರವಾಗಿ ಭಾರತದಲ್ಲಿ ಅಧ್ಯಯನ ನಡೆಸಲು ಮುಂದಾದರು. ಭಾರತದಲ್ಲಿ ಜನಪದ ಸಂಗೀತ ಹಾಗೂ ಶಾಸ್ತ್ರೀಯ ಸಂಗೀತ ಅಧ್ಯಯನವನ್ನು ಯಂತ್ರಗಳ ಮೂಲಕ ದಾಖಲೀಕರಣ ನಡೆಸುವುದರ ಮೂಲಕ ಅಧ್ಯಯನ ನಡೆಸಿದವರಲ್ಲಿ ಅರ್ನಾಲ್ಡ್ ಬಾಕೆ ಮೊದಲಿಗ. ಈತ ಪಾಶ್ಚಾತ್ಯ ಸಂಗೀತ ಶಾಸ್ತ್ರ ಬಲ್ಲವನಾಗಿದ್ದನು. ಹೆಂಡತಿ ಒಳ್ಳೆಯ ಪಿಯಾನೋ ವಾದಕಿಯಾಗಿದ್ದಳು. ಸಪತ್ನೀಕನಾಗಿ ಭಾರತ ಹಾಗೂ ಏಶ್ಯ ದೇಶಗಳಲ್ಲಿ ಸಂಚರಿಸಿ ಜನಪದ ಹಾಡು, ಸಂಗೀತ ಶಾಸ್ತ್ರ, ಜನಜೀವನ ಹಾಗೂ ಸಂಗೀತ-ಸಾಹಿತ್ಯ ಕುರಿತು ವಿಶೇಷವಾಗಿ ಅಧ್ಯಯನ ನಡೆಸಿದ ಕೀರ್ತಿ ಈತನದು. ಅರ್ನಾಲ್ಡ್ ಬಾಕೆ ಹಾಗೂ ಆತನ ಹೆಂಡತಿ ಕರೋನೆಲಿಯ ಅಥವಾ ಕೋರಿ ದಂಪತಿ ಡಚ್ ದೇಶದವರು. ಸಂಗೀತ ಶಾಸ್ತ್ರದಲ್ಲಿ ಅಪಾರ ಆಸಕ್ತಿ ಹೊಂದಿದವರಾಗಿದ್ದರು. ರವೀಂದ್ರನಾಥ ಟಾಗೋರ್ ಅವರ ಶಾಂತಿನಿಕೇತನ ಕೇಂದ್ರಕ್ಕೆ ಈತ ಭೇಟಿ ನೀಡಿ ತನ್ನ ಅಧ್ಯಯನವನ್ನು ಮುಂದುವರಿಸಿದ. ಕ್ರಮೇಣ ಭಾರತದ ಅನೇಕ ಭಾಗಗಳಲ್ಲಿರುವ ಜನಪದ ಹಾಡುಗಳ ಹಾಗೂ ಶಾಸ್ತ್ರೀಯ ಹಾಡುಗಳ ವ್ಯತ್ಯಯವನ್ನು ಅರಿಯುವುದಕ್ಕಾಗಿ ಅಭ್ಯಾಸ ನಡೆಸಲು ಅನ್ವೇಷಣೆಗೆ ದಂಪತಿ ತೊಡಗಿದರು. ಅರ್ನಾಲ್ಡ್ ಬಾಕೆ ಕರ್ನಾಟಕದ ಭಾಗಕ್ಕೆ ಬಂದಿದ್ದನು. ಡಾ. ಕಾರಂತರು 1930ರ ಹೊತ್ತಿಗೆ ನಾಟಕಗಳನ್ನು ಬರೆದು ಪ್ರಯೋಗಪಡಿಸಿದ್ದು, ಚಲನಚಿತ್ರ ಮಾಧ್ಯಮದ ಬಗ್ಗೆ ಅಪಾರ ಆಸಕ್ತಿ ಹೊಂದಿ ತಮ್ಮ ಬರವಣಿಗೆಯ ಮೂಲಕ ಜನತೆಗೆ ಆಧುನಿಕತೆಯ ಮೋಡಿ ಏನೆಂಬುದನ್ನು ತಿಳಿಸಿದವರಲ್ಲಿ ಮೊದಲಿಗರಾಗಿದ್ದರು. ಯಂತ್ರ ಜಗತ್ತಿನ ಪರಿಚಯ ಆಗ ತಾನೆ ಅಂಬೆಗಾಲಿನೋಪಾದಿಯಲ್ಲಿ ನಡೆಯುತ್ತಿದ್ದ 1930 ರ ಕಾಲಘಟ್ಟದಲ್ಲಿ ಕಾರಂತರು ವಿದ್ವಾಂಸರುಗಳಿಗೆ ಓರ್ವ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಬಾಕೆ ದಂಪತಿ ಜಾನಪದ ಜಂಗಮರಂತೆ ಆಸ್ಟಿನ್ ವ್ಯಾಗನ್ (ಕಾರು) ಮೂಲಕ ಹಳ್ಳಿ-ಪಟ್ಟಣವನ್ನು ಸುತ್ತಾಡುತ್ತಿದ್ದ ಇವರಿಗೆ ಕಾರಂತರು ಭಾಷಾಂತಕಾರರು, ಲಿಪ್ಯಂತರಕಾರರು, ವ್ಯವಸ್ಥಾಪಕರೂ, ಸಂಘಟಕರೂ ಹೆಚ್ಚಾಗಿ ಪ್ರಮುಖ ಸಂಪನ್ಮೂಲ ವ್ಯಕ್ತಿಗಳೂ ಆಗಿ ಕೆಲಸ ಮಾಡಿದರು. ಕರ್ನಾಟಕದ ಬಹುಭಾಗ ಈ ದಂಪತಿಯನ್ನು ಸುತ್ತಾಡಿಸುವಲ್ಲಿ ಶಿವರಾಮ ಕಾರಂತರ ಪಾತ್ರ ಹಿರಿದಾದುದು.

1930ರ ದಶಕದಲ್ಲಿ ಕನ್ನಡ ಜಾನಪದದ ಬಗ್ಗೆ ಒಲವು ಮೂಡಿಸಿದ್ದು ಮತ್ತು ಇವುಗಳ ಸಂಗ್ರಹ ನಡೆಸಬೇಕೆನ್ನುವ ಹಂಬಲಿಕೆ ಉಂಟಾದದ್ದು ಕೆಲವೇ ಸಾಹಿತಿಗಳಲ್ಲಿ. ಮುಖ್ಯವಾಗಿ ಹಲಸಂಗಿ ಸಹೋದರರು, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಅರ್ಚಕಹಳ್ಳಿ ರಂಗಸ್ವಾಮಿ ಮುಂತಾದವರು. ದಾಖಲಾತಿ, ಅಧ್ಯಯನ ಮತ್ತು ಜನಜೀವನದ ಸ್ವರೂಪ, ಸಾಂಸ್ಕೃತಿಕ ಮಹತ್ವದ ಬಗ್ಗೆ ಯಂತ್ರ ಉಪಕರಣಗಳ ಮೂಲಕ ಸಾಕ್ಷೀಕರಣಗೊಳಿಸುವ ಮೊದಲ ಪ್ರಯತ್ನ 1938 ರಲ್ಲಿ ನಡೆದದ್ದು ಅರ್ನಾಲ್ಡ್ ಬಾಕೆಯಿಂದ. ಅರ್ನಾಲ್ಡ್ ಬಾಕೆಗೆ ತನ್ನ ಕ್ಷೇತ್ರಕಾರ್ಯ ತೊಡಕಿಲ್ಲದೆ ಸಾಧಿತವಾದದ್ದು ಡಾ. ಕಾರಂತರಿಂದ. ಹೀಗಾಗಿ ತುಳು ಜನಪದ ಸಾಹಿತ್ಯದ ಮಂಜೊಟ್ಟಿ ಗೋಣ, ಜೋಗುಳ ಹಾಡು, ಟ್ರುವ್ವಿ ಹಾಡು, ನೇಜಿಹಾಡು, ಸಂಧಿ, ಓ ಬೇಲೇ(ಬದಿ ಕಲ್ಲಡ್ಕದ ಶ್ರೀಮತಿ ಲಚ್ಮಿ ಇವರ ಪಾಡ್ದನ), ಕೂಡ್ಲು ಮೇಳದ ಯಕ್ಷಗಾನ ಬಯಲಾಟ (ತೆಂಕು ತಿಟ್ಟು), ಬ್ರಹ್ಮಾವರದಲ್ಲಿ ಬಡಗು ತಿಟ್ಟು ಯಕ್ಷಗಾನ ಪದ್ಯಗಳ ದಾಖಲಾತಿ, ಭೂತ-ಕೋಲ, ಹರಿಕಥೆ, ಜೋಗಿ ಹಾಡು ಹೀಗೆ ಹಲವು ನಾಡ ಸಂಸ್ಕೃತಿಯ ಸಾರವನ್ನು ಶ್ರವ್ಯ ಮಾಧ್ಯಮದಲ್ಲಿ ಕೆಲವನ್ನು ಮೂಕಿ ಫಿಲಂ ಮಾಧ್ಯಮದಲ್ಲಿ ದಾಖಲಿಸಿಕೊಳ್ಳಲು ಸಹಾಯಕರಾದರು. (ಬದಿ ಗ್ರಾಮ ಕಲ್ಲಡ್ಕದ ಬಿಲ್ಲವ ಜನಾಂಗದ ಸದಸ್ಯನಿಂದ ಕಬಿತ), ಸುಳ್ಯದ ಪರವ ಜನಾಂಗದವರ ಸಾಗುವಳಿ ಸಂಬಂಧದ ಹಾಡುಗಳು, ಬಾಗಿಲು ತಡೆಯುವ ಸಂಪ್ರದಾಯದ ಹಾಡುಗಳು, ಬ್ರಹ್ಮಾವರದ ಐತು ಹಾಡಿದ ಸೋಬಾನೆ ಪದ, ಮಂಗಳೂರಿನ ನಲ್ಕೆ ಜನಾಂಗದ ಹೆಂಗಸರ ಹಾಡುಗಳು, (ತುಳು) ಬ್ರಹ್ಮಾವರದ ಪಾಟಾಳಿ ರಾಮಕೃಷ್ಣಯ್ಯ ಇವರ ಹಾಡುಗಳನ್ನು ದಾಖಲಿಸಲು ಶಿವರಾಮ ಕಾರಂತರು ನೆರವಾದರು. ಅರ್ನಾಲ್ಡ್ ಬಾಕೆ- ಶಿವರಾಮ ಕಾರಂತರು ಒಡಗೂಡಿ ಸಂಗ್ರಹಿಸಿದ ಒಂದು ಜೋಗಳು ಹಾಡು ಈ ರೀತಿ ಇದೆ.

ಈ ಜೋಗುಳ ಹಾಡಿನಲ್ಲಿ ಕನ್ನಡ ಮತ್ತು ತುಳು ಪದಗಳು ಮಿಶ್ರಣವಾಗಿರುವುದು ಒಂದು ವಿಶೇಷ. ಉದಾ:-

‘.....ಯನ್ನ ಬಾಲೆ ಪುಟ್ಯಲೂ ಬಾಳ ಭಂಗ ಬಂದೆನು’

‘.....ಯನ್ನ ಬಾಲೆ ಪುಟ್ಯಲೂ ಇರಾಳ ಹಗಲು ಬಂದೆನು

ಆ ಜೋಜಾನಂದ ಬಾಲೆ ಯಾಕೆ ಇಂತು ಕಂದಿದೆ

ನಿನ್ನಾಬಾಲೆ ಕಂದಿದೆ ದುಡ್ಡಿಗೆಂದು ಕಂದಿದೆ...

ಇಂದಿಗೂ ಕುಂದಾಪುರದ ಭಾಗದ ‘ಪಾಣಾರಾಟ’ ಸಂದರ್ಭದಲ್ಲಿ ‘ಸ್ವಾಮಿ’- ಗೆ (ನಾಗದೇವರು?) ಮೊದಲು ಐವರು ಪಾಣಾರ ಹೆಂಗಸರು ಹಾಡುವ ಪ್ರಾರ್ಥನೆಯು ತುಳು ಮತ್ತು ಕನ್ನಡ ಮಿಶ್ರದ ಒಂದು ಪ್ರಾರ್ಥನೆಯಾಗಿರುವುದನ್ನು ಗಮನಿಸಬಹುದಾಗಿದೆ. 1938ರಲ್ಲಿ ಅರ್ನಾಲ್ಡ್ ಬಾಕೆ ಸಂಗ್ರಹಿಸಿದ ಪ್ರಕಾರಗಳಲ್ಲಿ ಮುಖ್ಯವಾಗಿ : ದೊಂಬರಾಟ ಆಶಯದ ಕನ್ನಡ ಹಾಡು, ಕರಡಿ ಕುಣಿಸುವವನ ಹಾಡು, ಕನ್ನಡದ ತ್ರಿಪದಿಗಳು, ಭತ್ತ ಕುಟ್ಟುವ ಹಾಡು, ದಿಮಿಸಾಲೆ ಹಾಡುಗಳು, ಗೋವಿಂದ ಬದನೆ (ತುಳು) ಒಗಟುಗಳು, ಮೀನಿನ ಹೆಸರುಗಳ ಹಾಡು, ಸುಳ್ಯ ಭಾಗದ ಪರವರಿಂದ ಸಂಗ್ರಹಿಸಿದ ಚೋಮನ ದುಡಿಯ ಹಾಡುಗಳು, ‘‘ಆಳ್ ಪಾಣೇರತ ದೂಮಪ್ಪಣ್ಣ ಮಗಳಾಲ್’’, ಹಕ್ಕಿ ಅಥವಾ ಹೂ ಗುಬ್ಬಿ ಹಾಡು (ತುಳು) ಕರ್ನಾಟಕದ ಶಾಸಕರಾದ ಉಳ್ಳಾಲದ ಶ್ರೀ ಇದಿನಬ್ಬ ಇವರು ಹೇಳಿದ ಮಕ್ಕಳ ಹಾಡು ದಾಖಲಾಗಿದೆ. ಇದಿನಬ್ಬ ಅವರು 1938ರಲ್ಲಿ ಸಣ್ಣ ಪ್ರಾಯದವರಾಗಿದ್ದು ಉತ್ತಮ ಹಾಡುಗಾರರಾಗಿದ್ದರು, ಇವರು ಹಾಡಿದ ಒಂದೆರಡು ಶಿಶುಗೀತೆಗಳು ಅರ್ನಾಲ್ಡ್ ಬಾಕೆ ದಾಖಲಾತಿಯಲ್ಲಿ ಅಡಕಗೊಂಡಿದೆ.

ಸೋಣದ ಜೋಗಿ ಮತ್ತು ಸಾಹಿತ್ಯ

ಆನಪದ ಕುಣಿತಗಳಲ್ಲಿ ಸೋಣದ ಜೋಗಿ ಅಥವಾ ‘ಜೋಗಿ ಪುರುಷ ವೇಷ’ ಹಾಕಿಕೊಳ್ಳುವ ಸಂಪ್ರದಾಯವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಚಲಿತವಿದೆ. ‘ಜೋಗಿ’ಯ ವೇಷ ಹಾಕುವವರು ಹೆಚ್ಚಾಗಿ ನಲಿಕೆ ಸಮುದಾಯದವರು. ಘಟ್ಟದಿಂದ ಇಳಿದುಬಂದ ಜೋಗಿಯು ಈಶ್ವರನ ಒಂದು ಅವತಾರವೆಂದೂ ಮತ್ತು ಊರಿನ ಮಾರಿಯನ್ನು ಈತ ಕಳೆಯುತ್ತಾನೆ ಎಂಬ ನಂಬಿಕೆ ಜನರಲ್ಲಿದೆ. ಶ್ರಾವಣ ಮಾಸದಲ್ಲಿ ಈ ಜೋಗಿ ವೇಷದ ತಿರುಗಾಟವನ್ನು ಕರಾವಳಿ ಕರ್ನಾಟಕದ ಗಡಿಭಾಗದಲ್ಲಿ (ಕಾಸರಗೋಡು) ಕಾಣಬಹುದು. ತೆಂಬೆರೆ ವಾದ್ಯವನ್ನು ಜೊತೆಯಾಗಿ ಜೋಗಿ ವೇಷದವ ದಂಟೆ ಅಥವಾ ಕೋಲು ಹಿಡಿದು ಕುಣಿಯುತ್ತಾನೆ. ಆಯಾಯ ಗ್ರಾಮದ ದೈವದ ಸ್ಥಾನದಲ್ಲಿ ಬಣ್ಣ ಬಳಿದುಕೊಂಡು ನಿಶ್ಚಿತ ಗುತ್ತುಗಳಿಗೆ ಹೋಗಿ ಪಡಿ ಸ್ವೀಕರಿಸಿದ ಬಳಿಕ ಈ ವೇಷದವರು ತಿರುಗಾಟ ನಡೆಸುವರು. ಈ ಕುಣಿತದಲ್ಲಿನ ಹಾಡು ಮುಖ್ಯವಾಗಿ ಕನ್ನಡದಲ್ಲಿರುವುದನ್ನು ಗಮನಿಸಬಹುದು. ವಾದ್ಯ ನುಡಿಸುವಾತ ಕುಣಿಯುವವನಲ್ಲಿ ಕೇಳುತ್ತಾನೆ- ‘‘ಎಲ್ಲಿಂದ ಬಂದೆ ಜೋಗಿ?’’ ಎಂದು.

ಜೋಗಿ ವೇಷದವ ಹೀಗೆ ನುಡಿಯುತ್ತಾನೆ

‘‘ಘಟ್ಟದ ಮೇಲಿಂದ ಬಂದೆ, ಘಟ್ಟದ ಮೇಲೆ ಹುಟ್ಟಿಕೊಂಡು, ಕದ್ರೆ ಮೇಲೆ ಬೆಳಗಿಕೊಂಡು, ಕಾಂತಾಣಕದ್ರ, ಬೇಂತಾಣ ಬೆದ್ರ, ಪರ್‌ಮಾಲೆ ದಾಟಿಕೊಂಡು ಊರೆಲ್ಲ ಬೇಡಿಕೊಂಡು, ಕನ್ಯಾರೆ ಚೌತಿಗೆ ಬಂದೆ ಜೋಗಿ’’

ಹೌದು....

‘ಹಾಗೆ ಬಂದ ಜೋಗಿಗೆ ಉಪ್ಪು ಹುಳಿ ಸೌತೆಕಾಯಿ ಭತ್ತ, ಮೆಣಸು ತೆಂಗಿನಕಾಯಿ ಕೊಡ್ತಾರೆ ಜೋಗಿ ಇನ್ನೊಂದು ಆಟ ಆಡು...’

-ಹೀಗೆ ಸಂವಾದವೇ ಹಾಡಿನ ಭಾಗವಾಗಿ ಜೋಗಿ ವೇಷದಲ್ಲಿ ಕಾಣಬಹುದು. (ಕೃಪೆ : ಆರ್.ಆರ್.ಸಿ. ದಾಖಲಾತಿ, ಕ್ಷೇತ್ರಕಾರ್ಯ -18.8.1995, ಉಕ್ಕಿನಡ್ಕ ಶೇಣಿ ಮನೆ, ಕಾಸರಗೋಡು ಜಿಲ್ಲೆ, ಕೇರಳ).

ಪಡಿ-ಕಾಣಿಕೆ ಸ್ವೀಕರಿಸುವಲ್ಲಿ ಭತ್ತ, ಮೆಣಸಿನಕಾಯಿ, ತೆಂಗು, ಉಪ್ಪು, ಹುಳಿ, ಮಸಿ ಸ್ವೀಕರಿಸುವ ಹಿನ್ನೆಲೆಯಲ್ಲಿ ಮಾರಿ ಕಳೆಯುವ ನಂಬಿಕೆ ಜನರಲ್ಲಿದೆ. ದ.ಕ. ಜಿಲ್ಲೆ ಜೋಗಿ ಪಂಥಕ್ಕೆ ಹೆಸರು ಪಡೆದಿರುವುದರಿಂದ ಘಟ್ಟದ ಮೇಲಣ ಪ್ರದೇಶದಿಂದ ನಾಥಪಂಥದ ಜೋಗಿಗಳು ಈ ನಾಡಿಗೆ ಪ್ರಸರಣವಾದುದರ ಸೂಕ್ಷ್ಮ ಚಿತ್ರಣ ಈ ಹಾಡಿನಲ್ಲಿರುವುದು ಗಮನಾರ್ಹ.

ಈ ಜೋಗಿಯ ಆಶಯದ ಮತ್ತೊಂದು ರೂಪವನ್ನು ಕುಂದಾಪುರ ಭಾಗದಲ್ಲಿ ದೊರಕುವ ‘ಕುಂಞಡಿ ಹಾಯ್‌ಗುಳಿ ಸನ್ಯಾಸಿ’ ಎಂಬ ಹೊಗಳಿಕೆಯಲ್ಲೂ ಕಾಣಬಹುದು. ಕಾಸರಗೋಡು ಭಾಗದಲ್ಲಿ ಬೊನ್ಯ ಜೋಗಿ, ಕೊಡಗಿನಲ್ಲಿ ‘ಜೋಯಿ ಕಳಿ’ ಎನ್ನುವ ಹರಕೆ ಸಂಪ್ರದಾಯದಲ್ಲೂ ಜೋಗಿ ಪಂಥದ ಆಶಯಗಳನ್ನು ಗಮನಿಸಬಹುದು.

ಅರ್ನಾಲ್ಡ್ ಬಾಕೆ ಸಂಗ್ರಹದಲ್ಲಿ ಸೋಣದ ಜೋಗಿ ಮತ್ತು ಸಾಹಿತ್ಯ ಭಿನ್ನವಾಗಿರುವುದನ್ನು ಅಧ್ಯಯನದಿಂದ ತಿಳಿಯಲಾಗಿದೆ. ಅರ್ನಾಲ್ಡ್ ಬಾಕೆ ಈ ಪ್ರಕಾರವನ್ನು ಮಂಜೇಶ್ವರದಲ್ಲಿ (ಕಾಸರಗೋಡು) ಗೋವಿಂದ ಪೈಗಳ ಸಹಕಾರದಿಂದ ಸಂಗ್ರಹಿಸಿದರು. ಜೋಗಿ ಹಾಡಿನ ಸಾಹಿತ್ಯ ಈ ರೀತಿ ಇದೆ.

‘ಜೋಗೀ ಜೋಗೀ ಜೋಗೀ

ಯಾವಲ್ಲಿ ಹುಟ್ಟೀದ ಜೋಗಿ

ಊರೋಳಗೇಕ ಬಂದ ಜೋಗಿ

ಕೈಕಂಟೆ ಕರಿಮಣಿ ತಂದ ಜೋಗಿ

ಘಟ್ಟದಲ್ಲಿ ಹುಟ್ಟೆ ಜೋಗಿ

ಕದ್ರೆ ಮೆಲೆ ಮಲಗಿದ ಜೋಗಿ

ಊರೋಳಗೇಕೆ ಬಂದ ಜೋಗಿ

ನೆಟ್ಗಿ ಬಂದಾ ಜೋಗಿ

ಕಂಟೇ ಕರಿಮಣಿ ತಕ್ಕೋ ಜೋಗಿ

ದೊಡ್ಮನೆಗೆ ಹೋಗಿದ ಜೋಗಿ

ಒಂದ್ಕಾನೆ ಭತ್ತಾ ಜೋಗಿ

ಒಂದ್ಕಾನೆ ಅಕ್ಕಿ ಜೋಗಿ

ತೆಂಗಿನಕಾಯಿ ಜೋಗಿ

ಹಲಸಿನ ಹಣ್ಣು ಜೋಗಿ

ಮತ್ತೊಂದಾಟ ಮಾಡಿದ ಜೋಗಿ

ಭಂಗೀ ಭಂಗೀ ತಕೋ ಜೋಗಿ’

ಇಂದು ಇದೇ ಜನಪದ ಪ್ರಕಾರವು ಹಲವು ರೀತಿಯಲ್ಲಿ ಬದಲಾಗಿದ್ದು, ಇವುಗಳ ವೈಶಿಷ್ಟ್ಯತೆಯನ್ನು ಪುನರಧ್ಯಯನದಿಂದ ಮನನ ಮಾಡಿಕೊಳ್ಳಬಹುದಾಗಿದೆ.

ಅರ್ನಾಲ್ಡ್ ಬಾಕೆ ಮದ್ರಾಸ್ ಮೂಲಕ ಕೇರಳಕ್ಕೆ ಬಂದು 15 ಗಂಟೆಗಳ ದಾಖಲಾತಿ ನಡೆಸಿ (ಮುಖ್ಯವಾಗಿ ವಿಲ್ಲು ಪಾಟ್ಟು, ಮಾಪಿಳ್ಳೆ ಪಾಟ್ಟು, ಸಿರಿಯನ್ ಕ್ರಿಶ್ಚಿಯನ್ನರ ಹಾಡು, ಇತ್ಯಾದಿ) ಆನಂತರದ 30, 1938ರ ಎಪ್ರಿಲ್ ತಿಂಗಳಿಗೆ ಕೊಡಗಿಗೆ ಬಂದು ಪೊನ್ನಂಪೇಟೆಯ ಜೇನು ಕುರುಬರ ಹಾಗೂ ಪಣಿ ಎರವರ ಜನಾಂಗದ ವಾದ್ಯದ ಹಾಡುಗಳು, ವೀರಾಜಪೇಟೆಯಲ್ಲಿ ಶ್ರೀ ಪಿ.ಎಂ. ಕಾರಿಯಪ್ಪ ಅವರಿಂದ ಶಾಸ್ತ್ರೀಯ ಹಾಡುಗಳು, ಕೊಡಗಿನ ಮದುವೆ ಹಾಡು, ಕಾವೇರಿ ಹಾಡು, ಹುತ್ತರಿ ಹಾಡು, ದೇವತಾ ಉಪಾಸನೆಯ ಹಾಡು ಮುಂತಾದವನ್ನು ಸಂಗ್ರಹಿಸಿಕೊಂಡಿರುವರು. 1938ರ ಮೇ ತಿಂಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಪರ್ಯಟನೆ ನಡೆಸಿ ಅನೇಕ ಜನಪದ ಪ್ರಕಾರಗಳನ್ನು ಅಧ್ಯಯನ ನಡೆಸಿದರು. ಸುಳ್ಯ ಭಾಗದಲ್ಲಿ ಕವಿತೆ, ಉರಾಲು, ಕೃಷಿ ಸಂಬಂಧೀ ಹಾಡುಗಳನ್ನು ತುಳುವಿನಲ್ಲಿ ದಾಖಲಿಸಿಕೊಂಡಿರುವರು. ಸುಳ್ಯ ಪರಿಸರದ ಬ್ರಾಹ್ಮಣರ ಮದುವೆ ಸಂಪ್ರದಾಯದ ಹಾಡುಗಳು ಹಾಗೂ 1938-4 ಮೇ ತಿಂಗಳಲ್ಲಿ ಮುಖ್ಯವಾಗಿ ತೆಂಕುತಿಟ್ಟುವಿನ ಯಕ್ಷಗಾನ; (ಡಾ. ಶಿವರಾಮ ಕಾರಂತರ 1957 ‘ಬಯಲಾಟ’ ಕೃತಿಯಲ್ಲಿ ಅರ್ನಾಲ್ಡ್ ಬಾಕೆ ಸಂಗ್ರಹದ ಕೆಲವು ಫೋಟೊಗಳನ್ನು ನೋಡಬಹುದಾಗಿದೆ.) ಮುಖ್ಯವಾಗಿ ಕೂಡ್ಲು ಮೇಳದ ತೆಂಕುತಿಟ್ಟು ಯಕ್ಷಗಾನ ಪ್ರಕಾರವನ್ನು (ಪ್ರಸಂಗ ‘ಕೀಚಕ ವಧೆ’) ವೈರ್ ರೆಕಾರ್ಡಿಂಗ್ ಮಾಧ್ಯಮದಲ್ಲಿ ಹಾಗೂ ಮೂಕಿ ಚಲನಚಿತ್ರ ಮಾಧ್ಯಮದಲ್ಲಿ ದಾಖಲಿಸಿಕೊಂಡಿರುವರು. ಅಂದಿನ ಭಾಗವತರು ಶಾಂತಿಗೋಡಿನ ತೋಳ್ಪಡಿತ್ತಾಯರು. (ಜನರ ಹೇಳಿಕೆಯಂತೆ ಇವರು ಹವ್ಯಾಸಿ ಭಾಗವತರಾಗಿದ್ದು ಮತ್ತು ಸಂಗೀತ ಬಲ್ಲವರಾಗಿದ್ದರು.) ಹವ್ಯಾಸಿ ಮದ್ದಳೆ ವಾದಕರಾಗಿ ಈಶ್ವರ ಕುಞಿತ್ತಾಯ-ರು ಸಹಕರಿಸಿದ್ದುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಅರ್ನಾಲ್ಡ್ ಬಾಕೆ ಸಂಗ್ರಹಿಸಿದ ವಿಷಯ ಸಂಪನ್ಮೂಲಗಳನ್ನು ತೌಲನಿಕವಾಗಿ ಅಧ್ಯಯನ ನಡೆಸಲು ‘ಮರು ಅಧ್ಯಯನ ಮತ್ತು ಸಂಶೋಧನೆ’ ಮಾಡಲಾಯಿತು. ಈ ಹಿನ್ನೆಲೆಯಲ್ಲಿ ಅರ್ನಾಲ್ಡ್ ಬಾಕೆ ದಾಖಲು ನಡೆಸಿಕೊಂಡ ಕಲಾವಿದ ಈಶ್ವರ ಕುಞಿತ್ತಾಯ ಇವರನ್ನು ಎಸ್.ಎಂ. ಕೃಷ್ಣಯ್ಯ, ಶ್ರೀ ಕೆ.ಪಿ. ರಾವ್ ಇವರ ಸಹಾಯದೊಂದಿಗೆ ಭೇಟಿಯಾಗಿ ಕೆಲವು ವಿಷಯಗಳನ್ನು ಸಂಗ್ರಹಿಸಿರುವರು. (ವೈಯಕ್ತಿಕ ಸಂದರ್ಶನ : 28 ಜನವರಿ 1994, ಪುತ್ತೂರು).

GOOD FRIDAY SONGS ಶಿವರಾಮ ಕಾರಂತರ ಮೂಲಕವಾಗಿ ಬ್ರಹ್ಮಾವರ ಭಾಗಕ್ಕೆ ಅರ್ನಾಲ್ಡ್ ಬಾಕೆ 1938-5 ಮೇ ತಿಂಗಳಲ್ಲಿ ಭೇಟಿ ನೀಡಿ ಬಡಗು ತಿಟ್ಟಿನ ಕೆಲವು ಹಾಡುಗಳನ್ನು ದಾಖಲಾತಿ ನಡೆಸಿಕೊಂಡಿರುವರು. (ಶ್ರವ್ಯ ಮಾಧ್ಯಮದಲ್ಲಿ) ಇದೇ ಸಂದರ್ಭದಲ್ಲಿ ಪುನಃ ಮಂಗಳೂರಿಗೆ ತೆರಳಿ ಭೂತಾರಾಧನೆಯ ಹಾಗೂ ತುಳು ಜನಜೀವನಕ್ಕೆ ಸಂಬಂಧಿಸಿದ ಕೆಲವು ಜನಪದ ಪ್ರಕಾರಗಳನ್ನು ಚಿತ್ರೀಕರಿಸಿಕೊಂಡಿರುವುದನ್ನು ಗಮನಿಸಬಹುದು. ಮುಖ್ಯವಾಗಿ; ಕೋಟಿ-ಚೆನ್ನಯ್ಯ ಸಂಧಿ, ಸಿರಿ ಸಂಧಿ, ಓ-ಬೇಲೆ, ನೇಜಿ ನೆಡುವ ಹಾಡು, ಮದುವೆ ಹಾಡು, ನಾಗನ ಪದ, ಕಂಗಿಲ ನೃತ್ಯ, ಮುಂಡತ್ತಾಯ ಭೂತ, ಕೊಡಮಂತ್ತಾಯ ಭೂತ ಮತ್ತು ಕೋಲಾಟ ಇತ್ಯಾದಿ. ಅರ್ನಾಲ್ಡ್ ಬಾಕೆ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದ ಬಳಿಕ ಕೇರಳ, ಮದ್ರಾಸ್ ಬಳಿಕ ಮೈಸೂರು ರಾಜ್ಯಕ್ಕೆ ತೆರಳಿ (ಇದೀಗ ಕರ್ನಾಟಕ ರಾಜ್ಯ) 1938-14 ಸೆಪ್ಟಂಬರ್ ತಿಂಗಳಲ್ಲಿ ಮೈಸೂರು ಅರಮನೆಯ ವೈಣಿಕರ ಹಾಗೂ ಸುಪ್ರಸಿದ್ಧ ಗಾಯಕರ ಹಾಡುಗಳು, ಸೂತ್ರದ ಗೊಂಬೆಯಾಟ (ಹಲ್ಲರೆ ನಂಜನಗೂಡು ತಾಲೂಕು ಭಾಗದ ಶ್ರೀ ತಮ್ಮಣ್ಣ ಆಚಾರ್ ಅವರ ಮುತ್ತಾತ ಬಳಗ) ‘ಸತ್ಯಹರಿಶ್ಚಂದ್ರ ಪ್ರಸಂಗ’, ಮೈಸೂರಿನ ವರ್ಧಮಾನ್ಯ ಜೈನ ಮಂದಿರದಲ್ಲಿ ಅನಂತ ತೀರ್ಥಂಕರ ನೋಂಪಿ ವ್ರತದ ಪೂಜಾ ಹಾಡುಗಳು ಇತ್ಯಾದಿ ಧ್ವನಿಮುದ್ರಿಸಿಕೊಂಡಿರುವರು. 1938ರ ದಶಕದಲ್ಲಿ ವೀಣೆಯಲ್ಲಿ ಪರಿಣತಿ ಸಾಧಿಸಿದ್ದ ದೊರೆಸ್ವಾಮಿ ಅಯ್ಯಂಗಾರ್ ಅವರ ವೀಣಾಗಾರಿಕೆಯನ್ನು ದಾಖಲು ಮಾಡಿಕೊಂಡ ವಿವರವಿದೆ. ಆ ಬಳಿಕ ಶಿವಮೊಗ್ಗ, ಬೇಲೂರು, ಚಿತ್ರದುರ್ಗ ಈ ಭಾಗದಲ್ಲಿ ಸುತ್ತಾಡಿ ಪುನಃ 1938-26, ಸೆಪ್ಟಂಬರ್ ತಿಂಗಳಿಗೆ ಪುತ್ತೂರಿಗೆ ಬಂದು ದ.ಕ. ಜಿಲ್ಲೆಯ ಅನೇಕ ವೈವಿಧ್ಯಮಯ ಸಾಂಸ್ಕೃತಿಕ ಪ್ರಕಾರಗಳನ್ನು ದಾಖಲಿಸಿಕೊಂಡಿರುವರು. ಈ ಸಂದರ್ಭದಲ್ಲಿ ಶಿವರಾಮ ಕಾರಂತರು ಇವರೊಂದಿಗೆ ಪರ್ಯಟನೆ ನಡೆಸಿ ಪುತ್ತೂರು ಜನತೆಗೆ ಈ ವಿದ್ವಾಂಸನಿಂದ ‘ಭಾರತೀಯ ಸಂಗೀತ’ ಕುರಿತು ಉಪನ್ಯಾಸ ನೀಡಲು ಅವಕಾಶ ಮಾಡಿಕೊಟ್ಟಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಇವರ ಭಾಷಣವನ್ನು ಕನ್ನಡಕ್ಕೆ ತರ್ಜುಮೆ ಮಾಡಿ ದ.ಕ. ಜಿಲ್ಲೆಯ ಜನತೆಗೆ ಸಂಶೋಧನೆ ಬಗ್ಗೆ ವಿಶೇಷ ಒಲವು ಮೂಡಿಸಿದ ಕೀರ್ತಿ ಕಾರಂತರದ್ದು. (ಈ ಭಾಷಣವು ಒಂದು ಲೇಖನವಾಗಿ ಕನ್ನಡ ಸಾಹಿತ್ಯ ಪರಿಷತ್ ಪ್ರಕಟಿಸಿದ ‘ಕನ್ನಡ ನುಡಿ’ : ಭಾರತೀಯ ಸಂಗೀತ, ಸಂ.-1, ಡಿಸೆಂಬರ್ 9, 1938, ಪುಟ 76-77 ಪತ್ರಿಕೆಯಲ್ಲಿ ಪ್ರಕಟವಾಗಿದೆ). 1938ರ ದಶಕದಲ್ಲಿ ಶ್ರೀಪಾದ ದಾಸ ಎಂಬವರ ಹರಿಕಥೆ, ವಿರಾಟಪರ್ವದ ಯಕ್ಷಗಾನದ ಹಾಡುಗಳು, ಇದಿನಬ್ಬ (ಕರ್ನಾಟಕದ ಶಾಸಕರು) ಬಾಲಕನಾಗಿದ್ದಾಗ ಹಾಡಿದ ಹಾಡು, (ಶಿಶುಗೀತೆ) ಶಿವಮೊಗ್ಗದ ಲಂಬಾಣಿ ತಾಂಡದ ಕೋಲಾಟ ಹಾಡುಗಳು, ಹೆಂಗಸರ ಹಾಡುಗಳು, ಹುಬ್ಬಳ್ಳಿ ಪ್ರಾಂತದಲ್ಲಿ ಅಲೆಮಾರಿ ಜನಾಂಗದವರಾಗಿ ನೆಲೆಸಿದ ಹರಿಣ್ ಶಿಕಾರಿ ಮತ್ತು ಬಾಟ್ ಜನಾಂಗದ ದೈವಾವೇಶ, ರಕ್ತಬಲಿ, ಹಾಡು-ನರ್ತನ, ಮಳೆರಾಯನ ಹಾಡು, (ಕಪ್ಪೆಯ ಮದುವೆ : ಮಳೆಗಾಗಿ) ಕ್ರಿಶ್ಚಿಯನ್ ಸಮುದಾಯದ ಈಸ್ಟರ್ ಹಬ್ಬದ ಹಾಡು, ಮೆರವಣಿಗೆ, (ಬೈಬಲ್‌ನ ಹತ್ತು ಸೂತ್ರಗಳು) ಶುಭ ಶುಕ್ರವಾರ ಇತ್ಯಾದಿ. ಆ ನಂತರ 1938-5 ಅಕ್ಟೋಬರ್ ತಿಂಗಳಿಗೆ ಕಾರವಾರಕ್ಕೆ ಬಂದು ಉಳುಮೆಗೆ ಸಂಬಂಧಿಸಿದ ಹಾಡುಗಳು, ಕಾರ್ವಿಗಳ ಅಥವಾ ಮೊಗವೀರನ ಜನಜೀವನಕ್ಕೆ ಸಂಬಂಧಿಸಿದ ಹಾಡು, ಭಂಡಾರಿ ಜನಾಂಗದವರ ಮದುವೆ ಹಾಡುಗಳು, ಪುರಂದರ ದಾಸರ ಹಾಡು, ಧಾರವಾಡಕ್ಕೆ ಬಂದು ಮರಾಠಿ ಜನಾಂಗದ ಹಾಡು, ಜನಪದರ ತ್ರಿಪದಿ, ಸೋಬಾನೆ ಹಾಡುಗಳು, ಬೆಳಗಾವಿ ಭಾಗದಲ್ಲಿ ಯಜುರ್ವೇದ ಪಠನ, ದೊಡ್ಡಾಕಿ ಶಾಸ್ತ್ರದ ಹಾಡು, ಲಾವಣಿ, ಬಿಜಾಪುರ ಭಾಗದಲ್ಲಿ ಹಲಸಂಗಿ ಗೆಳೆಯರ ಸಹಕಾರದಿಂದ ಲಾವಣಿ, ‘ಶ್ರೀ ಕೃಷ್ಣಜನ್ಮಾಷ್ಟಮಿ’ ಹಬ್ಬದ ಹಾಡು, ಎಲ್ಲಮ್ಮನ ಹಾಡುಗಳು. ಹೀಗೆ ಅನೇಕ ಪ್ರಕಾರಗಳನ್ನು ದಾಖಲು ಮಾಡಿಕೊಂಡ ಕೀರ್ತಿ ಅರ್ನಾಲ್ಡ್ ಬಾಕೆಯದು. ಹಲಸಂಗಿ ಸಹೋದರರಲ್ಲಿ ಕರೆದುಕೊಂಡು ಹೋಗಿ ಪರ್ಯಟನೆ ನಡೆಸಲು ನೆರವಾದವರು ಕಾರಂತರು. ಅರ್ನಾಲ್ಡ್ ಬಾಕೆ 1938 ಅಕ್ಟೋಬರ್ 26ಕ್ಕೆ ಹೈದರಾಬಾದ್ ಕಡೆಗೂ ಆ ಬಳಿಕ ಉತ್ತರ ಭಾರತದತ್ತ ಅನ್ವೇಷಣೆ ನಡೆಸಿದ್ದು, ಮತ್ತೆ ಕರ್ನಾಟಕ ಭಾಗಕ್ಕೆ ಹಿಂದಿರುಗಲಿಲ್ಲ.

ಬಾಕೆ ಸಂಗೀತ ಕ್ಷೇತ್ರದಲ್ಲಿ ಡಾಕ್ಟರೇಟ್ ಪದವಿ ಹಾಗೂ ಉನ್ನತ ಶಿಕ್ಷಣ ಪಡೆಯಲು ಬಂದ ಓರ್ವ ವಿದ್ವಾಂಸ. ಅರ್ನಾಲ್ಡ್ ಬಾಕೆ ದಾಖಲೀಕರಣಕ್ಕಾಗಿ ಹಾಗೂ ಅಧ್ಯಯನಕ್ಕೆ ಬಳಸಿದ ಯಾವುದೇ ಯಂತ್ರೋಪಕರಣಗಳು ಇಂದು ಚಾಲ್ತಿಯಲ್ಲಿಲ್ಲ. ಸುಮಾರು 1925 ರಿಂದ 1929ರ ತನಕ ಬಂಗಾಳದಲ್ಲಿ, 1931ರ ದಶಕದಲ್ಲಿ ನೇಪಾಳ ಹಾಗೂ ಸಿಲೋನ್, ಮದ್ರಾಸ್, ಕೇರಳ, ಮೈಸೂರು, ಆಂಧ್ರ, ಮಹಾರಾಷ್ಟ್ರ, ಗುಜರಾತ್, ಸಿಂಧ್ (ಈಗ ಇದು ಪಾಕಿಸ್ತಾನದಲ್ಲಿದೆ). ಭಾಗಗಳಲ್ಲಿ ದಾಖಲೀಕರಣ ನಡೆಸಿದರು. ಜಾತಿ-ಮತ ಭೇದವಿಲ್ಲದೆ ಹಿಂದೂ, ಕ್ರಿಶ್ಚಿಯನ್, ಜ್ಯೂಯಿಶ್ ಜೈನ, ಬೌದ್ಧಮತ, ಅಲ್ಲದೆ ಬುಡಕಟ್ಟು ಜನಾಂಗದವರಾದ ‘ತೋಡ’ ‘ಕೋಟ’ ಜನಾಂಗ (ಪಶ್ಚಿಮ ಮದ್ರಾಸ್ ಪ್ರಾಂತ) ಹೀಗೆ ಸುಮಾರು 900 ಪ್ರಕಾರಗಳನ್ನು ದಾಖಲಿಸಿರುವರು. ಮುಖ್ಯವಾಗಿ ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿದ ಹಾಡುಗಳು, ಕಥೆಗಳು, ಗೊಂಬೆಯಾಟ ಪ್ರಕರಣಗಳು ಇವರ ದಾಖಲೆಯಲ್ಲಿ ದಾಖಲಾಗಿದೆ. ಕೆಲವು ಜನಪದ ಹಾಡುಗಳ ಪ್ರಕಾರವಾದರೆ ಕೆಲವು ಶಾಸ್ತ್ರೀಯ ಸಂಗೀತದ ರಾಗಗಳು ಮತ್ತು ಸಾಮವೇದದ ಪ್ರಕಾರಗಳು, ಜೈನ ಮತದ ಮಂತ್ರಪಠಣ ಇತ್ಯಾದಿ ಸೇರಿದೆ. ಅಮೆರಿಕದಲ್ಲಿ 1963ನೇ ವರ್ಷದಲ್ಲಿ ಈ ವಿದ್ವಾಂಸ ಇಹಲೋಕವನ್ನು ತ್ಯಜಿಸಿದ್ದು ಈತನು ಪರ್ಯಟನೆ ಮಾಡಿ ಸಂಪಾದಿಸಿದ ವಿಷಯ ಸಂಪನ್ಮೂಲಗಳು ಕಾಲ ಕ್ರಮೇಣ ಮೂಲೆಗುಂಪಾಯಿತು. ಪುನಃ ಅರ್ನಾಲ್ಡ್ ಬಾಕೆಯ ಶಿಷ್ಯ ಡಾ. ಜೈರಾಜ್ ಬಾಯಿ, ಆಮಿ ಕ್ಯಾಟಲೀನ್ (ವೈಯಕ್ತಿಕ ಸಂದರ್ಶನ : 1983, 1994) ಹಾಗೂ ಇನ್ನೋರ್ವ ಮಿತ್ರ ಫೆೆಲಿಕ್ಸ್ (ವೈಯಕ್ತಿಕ ಸಂದರ್ಶನ : 15.2.1998) ಇವರನ್ನು ನಾನು ಭೇಟಿಯಾಗಿ ಬಾಕೆ ಕುರಿತಂತೆ ಕೆಲವು ವಿಷಯಗಳನ್ನು ಸಂಗ್ರಹಿಸತೊಡಗಿದೆ. ಇದೀಗ ಮರು ಅಧ್ಯಯನ ನಡೆಸುವುದು ಅಗತ್ಯ ವೆನಿಸಿದ್ದು ಈ ಹಿನ್ನೆಲೆಯಲ್ಲಿ ಅಧ್ಯಯನ ನಡೆಯುತ್ತಿದೆ. ಅರ್ನಾಲ್ಡ್ ಬಾಕೆ ಸಂಗ್ರಹ ಮಾಡಿದ ಈ ಸಂಪನ್ಮೂಲಗಳ ಬಗ್ಗೆ ಪುನರ್ ಅಧ್ಯಯನ ನಡೆಯಬೇಕಾಗಿರುವ ಹಿನ್ನೆಲೆ ಯಲ್ಲಿ ಕೆಲವು ವಿವರಗಳನ್ನಷ್ಟೆ ಸೂಚ್ಯವಾಗಿ ಈ ಲೇಖನದಲ್ಲಿ ಒದಗಿಸಲಾಗಿದೆ.

Writer - ಎಸ್.ಎ. ಕೃಷ್ಣಯ್ಯ

contributor

Editor - ಎಸ್.ಎ. ಕೃಷ್ಣಯ್ಯ

contributor

Similar News