ಚೀನಾದಲ್ಲಿ ಎಲ್ಲವೂ ಗಜಗಾತ್ರ

Update: 2018-10-28 07:04 GMT

ಕೆಲವು ತಿಂಗಳ ಹಿಂದೆ ಚೀನಾ ಪ್ರಕಟಿಸಿದ ತನ್ನ ಹೊಸ ಸಿಟಿಗಳ ನಿರ್ಮಾಣದ ಪರಿಕಲ್ಪನೆಯು ದಿಗ್ಭ್ರಮೆ ಹುಟ್ಟಿಸುವಂತಿದೆ. ವಿಸ್ತೀರ್ಣದಲ್ಲಿ ಇಂಗ್ಲೆಂಡ್‌ಗಿಂತ ದೊಡ್ಡದಾಗಿರುವ ಹೊಸ ನಗರಗಳನ್ನೇ ನಿರ್ಮಿಸುವುದಾಗಿ ಈಗ ಚೀನಾ ಪಣ ತೊಟ್ಟಿದೆ. 

ವಿಶ್ವದ ಅತೀ ದೊಡ್ಡ ಜನಸಂಖ್ಯೆಯ ಹಾಗೂ ಅತಿ ವಿಶಾಲ ದೇಶ ಗಳಲ್ಲಿ ಒಂದಾಗಿರುವ ಚೀನಾವು ಒಂದಲ್ಲಾ ಒಂದು ಬೃಹತ್ ನಿರ್ಮಾಣಗಳನ್ನು ಪ್ರದರ್ಶಿಸುತ್ತಲೇ ಇದೆ. ಈಗ ವಿಶ್ವದ ಅತೀ ಉದ್ದನೆಯ ಸಮುದ್ರ ಸೇತುವೆಯ ಸರದಿ.

ಹಾಂಕಾಂಗ್-ಜುವಾಯ್-ಮಕಾವ್ ದ್ವೀಪಗಳ ನಡುವಿನ ಈ ಹೊಸ ಸಮುದ್ರ ಸೇತುವೆಯು ಉದ್ದ 34.2 ಕಿ.ಮೀ. ಆಗಿದ್ದು, ಇದರಲ್ಲಿ ಸಂಚರಿಸುವ ವಾಹನಗಳು ಸಮುದ್ರದೊಳಗೆ ಸುಮಾರು ಆರು ಕಿ.ಮೀ.ನಷ್ಟು ದೂರ ಮುಳುಗೀಜು ಹೊಡೆಯುವಂತೆ ನೀರಿನೊಳಗಿನ ಸುರಂಗದೊಳಗೆ ಹಾದು ಮತ್ತೆ ಮೇಲೆದ್ದು ಸೇತುವೆ ಮೇಲೆ ಚಲಿಸಿ ದಡ ಸೇರುತ್ತವೆ. ವಿಶ್ವದ ಎಲ್ಲಾ ಭೂ ಖಂಡಗಳನ್ನು ಬೆಸೆಯುವ ‘ಒನ್ ಬೆಲ್ಟ್, ಒನ್ ರೋಡ್’ ಎಂಬ ಯೋಜನೆಗೆ ಚಾಲನೆ ನೀಡಿ ಪಶ್ಚಿಮದ ಅಭಿವೃದ್ಧಿ ಹೊಂದಿದ ಬಂಡವಾಳಶಾಹಿ ದೇಶಗಳು ಕಂಗಾಲಾಗುವಂತೆ ಚೀನಾ ಮಾಡುತ್ತಿದೆ.

ತೀರಾ ಇತ್ತೀಚೆಗೆ ನೆಲ-ಜಲ ಎರಡರಲ್ಲೂ ಬಳಸಬಹುದಾದ GGO600 ಆ್ಯಂಫಿಬಿಯನ್ ವಿಮಾನ ತಯಾರಿಸಿ ಸೈ ಅನಿಸಿಕೊಂಡಿದೆ. ಕೆಲವು ತಿಂಗಳ ಹಿಂದೆ ಚೀನಾ ಪ್ರಕಟಿಸಿದ ತನ್ನ ಹೊಸ ಸಿಟಿಗಳ ನಿರ್ಮಾಣದ ಪರಿಕಲ್ಪನೆಯು ದಿಗ್ಭ್ರಮೆ ಹುಟ್ಟಿಸುವಂತಿದೆ. ವಿಸ್ತೀರ್ಣದಲ್ಲಿ ಇಂಗ್ಲೆಂಡ್‌ಗಿಂತ ದೊಡ್ಡದಾಗಿರುವ ಹೊಸ ನಗರಗಳನ್ನೇ ನಿರ್ಮಿಸುವುದಾಗಿ ಈಗ ಚೀನಾ ಪಣ ತೊಟ್ಟಿದೆ. ಅಂತಹ ವಿಶಾಲ ಭೂ ಪ್ರದೇಶದಲ್ಲಿ ಈಗಾಗಲೇ ಇರುವ ಜನವಸತಿ ಪ್ರದೇಶಗಳನ್ನು ಒಳಗೊಂಡಂತೆಯೇ ಆ ಹೊಸ ನಗರಗಳು ತಲೆ ಎತ್ತಲಿವೆ. ಮುಂದಿನ ಒಂದೆರಡು ದಶಕಗಳಲ್ಲಿ ಚೀನಾದ 25 ಕೋಟಿ ಜನರನ್ನು ಇಂತಹ ಮೆಗಾಸಿಟಿಗಳಲ್ಲಿ ತಂದು ನೆಲೆಯೂರಿಸಿ, ಉತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಸಲು ಚೀನಾ ಬಯಸಿದೆ.

ಹಾಗಾಗಿ ಇಷ್ಟು ಜನರಿಗೆ ಬೇಕಾದ ಉದ್ಯೋಗ ಸೃಷ್ಟಿಸಲು ಉತ್ಪಾದನಾ ಕೈಗಾರಿಕಾ ಚಟುವಟಿಕೆಗೆ ಪೂರಕ ವಾತಾವರಣ ನಿರ್ಮಿಸಲು ಈಗ ಬೃಹತ್ ರಸ್ತೆ, ಸೇತುವೆ, ನಗರಗಳು, ರೈಲು ಸಂಪರ್ಕಗಳನ್ನು ಯುದ್ಧೋಪಾದಿಯಲ್ಲಿ ನಿರ್ಮಿಸಲಾಗುತ್ತಿದೆ.

ಮಕಾವ್-ಹಾಂಕಾಂಗ್ ನಡುವಿನ ಈ ಅತೀ ಉದ್ದನೆಯ ಸಮುದ್ರ ಸೇತುವೆ ಅಂತಹದರಲ್ಲಿ ಒಂದಾಗಿದೆ. 1983ರ ವೇಳೆಗೆ ಹಾಂಕಾಂಗ್‌ನ ಉದ್ಯಮಿ ಗಾರ್ಡನ್ ವೂ ಎಂಬಾತ ಈ ಸಮುದ್ರ ಸೇತುವೆಯ ಕನಸನ್ನು ಚೀನಾ ಮತ್ತು ಹಾಂಕಾಂಗ್ ಸರಕಾರಕ್ಕೆ ವಿವರಿಸಿದ್ದ. ನಂತರ ಹಲವು ಬೇಕು ಬೇಡಗಳ ನಡುವೆ ಈ ಯೋಜನೆ ತೇಲಿ ಮುಳುಗುತ್ತಾ ಕೊನೆಗೆ ಈಜಲಾರಂಭಿಸಿದ್ದು 2003ರಲ್ಲಿ. ಒಂದೂಕಾಲು ಲಕ್ಷ ಕೋಟಿ ರೂ.ಗಳ ಖರ್ಚಿನಲ್ಲಿ ಮೊನ್ನೆ ಇದು ಉದ್ಘಾಟನೆಯಾದಾಗ ನಿಗದಿತ ಅವಧಿಗಿಂತ ಕೇವಲ 2 ವರ್ಷ ತಡವಾಗಿತ್ತಷ್ಟೆ. ಅಲ್ಲಿನ ಸಮುದ್ರದ ಪಿಂಕ್ ಡಾಲ್ಫಿನ್‌ಗಳಿಗೆ ತೊಂದರೆಯಾಗುತ್ತಿದೆ. 16 ಜನ ಕಾರ್ಮಿಕರ ಸಾವಾಯಿತು. ಪರಿಸರ ಹಾಳಾಗುತ್ತಿದೆ. ಭ್ರಷ್ಟಾಚಾರ ನಡೆದಿದೆಯೆಂಬ ಹಲವು ಆಕ್ಷೇಪಗಳ ನಡುವೆ ಮೊನ್ನೆ ಈ ಸಮುದ್ರ ಸೇತುವೆಯ ಬಾಗಿಲು ಜಗತ್ತಿನ ಮುಂದೆ ತೆರೆದುಕೊಂಡಾಗ ನಿಬ್ಬೆರಗಾಗದವರೇ ಇಲ್ಲವೆನ್ನಬಹುದು. ಸೈಕಲ್, ಬೈಕು, ಗೌರ್ಮೆಂಟ್ ಬಸ್ಸುಗಳ ಓಡಾಟಕ್ಕೆ ಅವಕಾಶ ನೀಡದ ಈ ಸೇತುವೆಯನ್ನು ಈ ತಕ್ಷಣದಲ್ಲಿ ದಿನಕ್ಕೆ 30 ಸಾವಿರ ಗಾಡಿಗಳು ಹಾದು ಹೋಗಬಹುದೆಂದು ಅಂದಾಜಿಸಲಾಗಿದೆ. ಜೊತೆಗೆ ಟೂರಿಸಂ, ಸರಕು ಸಾಗಣೆ ಕೆಲಸಕ್ಕಾಗಿ ಓಡಾಡಲಿರುವ ಜನರು... ಹೀಗೆ ಸೇತುವೆ ಬಹುಪಯೋಗಿ ಆಗಲಿರುವುದು ಖಾತ್ರಿಯಾಗಿದೆ.

ಸಮುದ್ರದ ನೀರಿನ ಚಾಲನೆಯ ಒತ್ತಡ ಭರಿಸುತ್ತಾ, ಗಂಟೆಗೆ ಮುನ್ನೂರೈವತ್ತು ಕಿ.ಮೀ. ವೇಗದಲ್ಲಿ ಗಾಳಿ ಬೀಸಿದರೂ ಈ ಪಿಲ್ಲರ್ ಆಧಾರಿತ ಸೇತುವೆ ಅಲ್ಲಾಡುವುದಿಲ್ಲವೆಂದು ನಿರ್ಮಾಣದ ಇಂಜಿನಿಯರ್‌ಗಳು ಧೈರ್ಯವಾಗಿ ಹೇಳಿದ್ದಾರೆ.

ಇತಿಹಾಸದಲ್ಲಿ ‘ಗ್ರೇಟ್ ವಾಲ್ ಆಫ್ ಚೈನಾ’ ನಿರ್ಮಿಸಿ ಜಗತ್ತನ್ನೇ ನಿಬ್ಬೆರಗುಗೊಳಿಸಿದ್ದ ಚೀನಾ ಈಗಲೂ ಜಗತ್ತಿಗೆ ಹೊಸ ಹೊಸದು ಬೃಹತ್ತಾದ ರಸ್ತೆ, ಸೇತುವೆ, ವಿಮಾನಗಳನ್ನೇ ನೀಡುತ್ತಿದೆ.

Writer - ಪಾರ್ವತೀಶ ಬಿಳಿದಾಳೆ

contributor

Editor - ಪಾರ್ವತೀಶ ಬಿಳಿದಾಳೆ

contributor

Similar News