ರಾಷ್ಟೀಯ ಭದ್ರತಾ ಕಾಯ್ದೆಯಡಿ ಬಿಜೆಪಿ ನಾಯಕನ ಸೆರೆ

Update: 2018-10-27 17:01 GMT

ಅಗರ್ತಲಾ,ಅ.27: ಪಶ್ಚಿಮ ತ್ರಿಪುರಾದ ಜಿರಾನಿಯಾದ ನಿವಾಸಿ,ಬಿಜೆಪಿ ನಾಯಕ ಕೇಶವ ಸರ್ಕಾರ್(37) ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಲಾಗಿದ್ದು,ಇದರ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂದು ಅವರ ಕುಟುಂಬವು ಆರೋಪಿಸಿದೆ. ಗುತ್ತಿಗೆದಾರರಾಗಿರುವ ಸರ್ಕಾರ್ ಹಿಂದಿನಿಂದಲೂ ರಾಜಕೀಯದಲ್ಲಿ ಸಕ್ರಿಯರಾಗಿದ್ದರು.

ಜಿಲ್ಲಾಧಿಕಾರಿಗಳ ಆದೇಶದಂತೆ ಸರ್ಕಾರ್‌ರನ್ನು ಎನ್‌ಎಸ್‌ಎ ಅಡಿ ಬಂಧಿಸಿ, ವಿಶಾಲಗಡ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ ಎಂದು ಪಶ್ಚಿಮ ತ್ರಿಪುರಾ ಎಸ್‌ಪಿ ಅ ಪ್ರತಾಪ ಸಿಂಗ್ ತಿಳಿಸಿದರು.

ಎನ್‌ಎಸ್‌ಎ ವಿಶಾಲ ವ್ಯಾಪ್ತಿಯನ್ನು ಹೊಂದಿದ್ದು,ಅದರಡಿ ಬಂಧಿಸಲು ವ್ಯಕ್ತಿಯು ರಾಷ್ಟ್ರವಿರೋಧಿ ಅಪರಾಧಗಳಲ್ಲಿ ತೊಡಗಿಕೊಂಡಿರಬೇಕು ಎಂದೇನಿಲ್ಲ. ಪೊಲೀಸರ ವರದಿಯಂತೆ ಸರ್ಕಾರ್ ಸಂಘಟಿತ ಅಪರಾಧಗಳಲ್ಲಿ ತೊಡಗಿಕೊಂಡಿದ್ದರು ಎಂದು ಪ.ತ್ರಿಪುರಾ ಜಿಲ್ಲಾಧಿಕಾರಿ ಸಂದೀಪ ನಾಮದೇವ ಮಹಾತ್ಮೆ ತಿಳಿಸಿದರು.

ಸರ್ಕಾರ್ ಮೇಲೆ ಎನ್‌ಎಸ್‌ಎ ಹೇರುವ ನಿರ್ಧಾರವನ್ನು ಟೀಕಿಸಿರುವ ಆಡಳಿತ ಬಿಜೆಪಿ ಶಾಸಕ ಸುಷಾಂತ ಚೌಧರಿ ಅವರು,ಸರ್ಕಾರ್ ಉದ್ಯಮಿಯಾಗಿದ್ದು ಸುದೀರ್ಘ ಕಾಲ ಎಡರಂಗದ ವಿರುದ್ಧ ಹೋರಾಟಗಾರರಾಗಿದ್ದರು. ತನ್ನ ಎನ್‌ಎಸ್‌ಯುಐ ದಿನಗಳಿಂದಲೂ ಅವರು ತನಗೆ ಆಪ್ತರಾಗಿದ್ದಾರೆ ಎಂದರು.

ಅ.9ರಂದು ರಾತ್ರಿ ಮನೆಯಲ್ಲಿದ್ದ ತನ್ನ ಮಗನನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ವಿಚಾರಿಸಿದ್ದಕ್ಕೆ ಯಾವುದೇ ಕಾರಣವನ್ನು ನೀಡಿರಲಿಲ್ಲ. ಹಿಂದೆ ಎಡರಂಗದ ಆಡಳಿತವಿದ್ದಾಗ ಆತನ ವಿರುದ್ಧ ರಾಜಕೀಯ ಹಿಂಸಾಚಾರದ ಪ್ರಕರಣವನ್ನು ದಾಖಲಿಸಿತ್ತು. ಆದರೆ ನ್ಯಾಯಾಲಯವು ಆತನನ್ನು ಆರೋಪಮುಕ್ತಗೊಳಿಸಿತ್ತು ಎಂದ ಸರ್ಕಾರ್ ತಾಯಿ ಸಂಧ್ಯಾರಾಣಿ,ತನ್ನ ಮಗನ ಉದ್ಯಮದಿಂದ ಲಾಭವನ್ನು ಪಡೆಯಲು ಹವಣಿಸಿರುವ ಕೆಲವು ಬಿಜೆಪಿ ನಾಯಕರ ಷಡ್ಯಂತ್ರಕ್ಕೆ ಆತ ಬಲಿಪಶುವಾಗಿದ್ದಾನೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News