×
Ad

ಕಸದ ರಾಶಿ ತೆರವು: ಖುದ್ದು ಭೇಟಿ ನೀಡಿ ಪರಿಶೀಲಿಸಿದ ಮೇಯರ್

Update: 2018-10-27 23:34 IST

ಬೆಂಗಳೂರು, ಅ.27: ನಗರದ ವಿವಿಧ ರಸ್ತೆಗಳಲ್ಲಿ ಬಿದ್ದಿದ್ದ ಕಸದ ರಾಶಿಯನ್ನು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಖುದ್ದು ಪರಿಶೀಲನೆ ನಡೆಸಿ ತೆರವು ಮಾಡಿಸಿದರು.

ಸಿಲ್ಕ್‌ಬೋರ್ಡ್ ಜಂಕ್ಷನ್‌ನಿಂದ ಮಾರತ್ತಹಳ್ಳಿ ಮಾರ್ಗದಲ್ಲಿ ತಪಾಸಣೆ ನಡೆಸಿದ ಮೇಯರ್ ಕೆ.ಆರ್.ಪುರಂ, ಹೊರವರ್ತುಲ ರಸ್ತೆ, ಹಳೆ ಮದ್ರಾಸ್ ರಸ್ತೆಯಲ್ಲಿ ಸಂಗ್ರಹಗೊಂಡಿದ್ದ ರಾಶಿ ರಾಶಿ ಕಸವನ್ನು ಕಂಡು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅನಂತರ ಕಸದ ರಾಶಿಯನ್ನು ಖುದ್ದು ಅವರೇ ಸ್ಥಳದಲ್ಲಿ ನಿಂತು ತೆರವು ಮಾಡಿಸಿದರು.

ಅನಂತರ ಹಲಸೂರು ಕೆರೆ ಕಲ್ಯಾಣಿಯಲ್ಲಿ ಶೇಖರಣೆಯಾಗಿದ್ದ ಗಣೇಶ ಮೂರ್ತಿಗಳ ಅವಶೇಷಗಳನ್ನು ಈ ಕೂಡಲೇ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಸುರಂಜನ್ದಾಸ್ ರಸ್ತೆಯಲ್ಲಿ ಬಿದ್ದಿದ್ದ ಮೆಡಿಕಲ್ ವೆಸ್ಟ್ ಅನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಮೇಯರ್ ಅವರು ಆದೇಶಿಸಿದರು. ಹೊಸಕೆರೆಹಳ್ಳಿ, ಕದಿರೇನಹಳ್ಳಿ ಕ್ರಾಸ್ ಸಮೀಪದ ಇಂದಿರಾ ಕ್ಯಾಂಟಿನ್ ಬಳಿ ಹಾಗೂ ಸೀತಾ ಸರ್ಕಲ್ ರಸ್ತೆ ಬದಿಯಲ್ಲಿ ಬಿದ್ದಿದ್ದ ಕಸವನ್ನು ತೆರವುಗೊಳಿಸುವಂತೆ ಮೇಯರ್ ಗಂಗಾಂಬಿಕೆ ಸೂಚಿಸಿದರು.

ದಸರಾ ಹಬ್ಬದ ಕಸವನ್ನು ತೆರವುಗೊಳಿಸುವಂತೆ ಮೇಯರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ, ಕಾಮಾಕ್ಷಿಪಾಳ್ಯದಲ್ಲಿ ಕಸ ತೆರವು ಮಾಡಿಲ್ಲ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಮೂಲಕ ಎಚ್ಚರಿಕೆ ನೀಡಿ, ಕೂಡಲೇ ಕಸವನ್ನು ತೆರವು ಮಾಡಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News