ಐಪಿಎಸ್ ಪುತ್ರನಿಗೆ ಕಾನ್ ಸ್ಟೇಬಲ್ ತಂದೆಯ ಹೆಮ್ಮೆಯ ಸೆಲ್ಯೂಟ್

Update: 2018-10-28 08:55 GMT

ಲಕ್ನೋ, ಅ.28: ಇದು ಚಿತ್ರವೊಂದರ ಕಥೆಯಂತೆ ಕಾಣಬಹುದು. ಆದರೆ ವಾಸ್ತವ. ಹಲವು ಸಂಕಷ್ಟಗಳನ್ನು ಎದುರಿಸಿದ ಪೊಲೀಸ್ ಪೇದೆಯೊಬ್ಬರು ತನ್ನ ಮಗನನ್ನು ಐಪಿಎಸ್ ಅಧಿಕಾರಿಯಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಮಗನೇ ಇವರ ಪಾಲಿಗೆ ಬಾಸ್. ಇದೀಗ ಪೊಲೀಸ್ ಪೇದೆ ಹೆಮ್ಮೆಯಿಂದ ಐಪಿಎಸ್ ಅಧಿಕಾರಿ ಮಗನಿಗೆ ಸೆಲ್ಯೂಟ್ ಮಾಡುತ್ತಿದ್ದಾರೆ.

ಈ ಅಪರೂಪದ ಅವಕಾಶ ಸಿಕ್ಕಿರುವುದು ಜನಾರ್ದನ ಸಿಂಗ್ ಅವರಿಗೆ. ವಿಭೂತಿಖುಂಡ ಠಾಣೆಯಲ್ಲಿ ಪೇದೆಯಾಗಿರುವ ಸಿಂಗ್, ಇದೀಗ ಶನಿವಾರ ನಗರ ಪೊಲೀಸ್ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಅನೂಪ್ ಕುಮಾರ್ ಸಿಂಗ್‍ ಗೆ ಸೆಲ್ಯೂಟ್ ಮಾಡುವ ದೃಶ್ಯ ಅಪೂರ್ವವಾಗಿತ್ತು.

ಈ ವಿಶಿಷ್ಟ ಅನುಭವದ ಬಗ್ಗೆ ಜನಾರ್ದನ್ ಅವರ ಪ್ರತಿಕ್ರಿಯೆ ಕೇಳಿದಾಗ, ಅವರಿಗೆ ಆನಂದಭಾಷ್ಪ ತಡೆದುಕೊಳ್ಳಲಾಗಲಿಲ್ಲ. "ಅನೂಪ್ ಮೊದಲು ನನ್ನ ಅಧಿಕಾರಿ. ಆ ಬಳಿಕ ಮಗ. ಇತರ ಯಾವುದೇ ಅಧಿಕಾರಿಗೆ ಗೌರವ ಸಲ್ಲಿಸುವಂತೆ ನಾನು ಮೊದಲು ಆತನಿಗೆ ಸೆಲ್ಯೂಟ್ ನೀಡುತ್ತೇನೆ. ಆತನ ಆದೇಶಗಳನ್ನು ಪಾಲಿಸುತ್ತೇನೆ. ನಮ್ಮ ಸಂಬಂಧ ನನ್ನ ಕೆಲಸದ ಮೇಲೆ ಪರಿಣಾಮ ಬೀರದಂತೆ ಎಚ್ಚರ ವಹಿಸುತ್ತೇನೆ" ಎಂದು ಹೇಳಿದರು. 2014ನೇ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿರುವ ಅನೂಪ್, ಉತ್ತರ ಲಕ್ನೋ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ತಂದೆ ತನ್ನ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಅನೂಪ್‍ಗೆ ನಿಜವಾಗಿಯೂ ಇದು ಪರೀಕ್ಷೆಯ ಕಾಲ.

"ನನ್ನ ತಂದೆ ಸದಾ ನನಗೆ ಸ್ಫೂರ್ತಿ. ಅವರ ಪಾದ ಮುಟ್ಟಿ ನಮಸ್ಕರಿಸುವುದರೊಂದಿಗೆ ನನ್ನ ದಿನ ಆರಂಭವಾಗುತ್ತದೆ. ಅವರ ತತ್ವಗಳಿಗೆ ಅನುಗುಣವಾಗಿ ಜೀವನ ನಡೆಸಲು ಪ್ರಯತ್ನಿಸುತ್ತಿದ್ದೇನೆ" ಎಂದು ಅನೂಪ್ ಹೇಳಿದ್ದಾರೆ.

"ತಂದೆ ನನಗೆ ಎಂದೂ ಆಟ ಅಥವಾ ಪಾಠದ ಬಗ್ಗೆ ಗಮನ ಹರಿಸುವಂತೆ ಹೇಳಿಲ್ಲ. ಆದರೆ ಮೌಲ್ಯ ಹಾಗೂ ನಿಷ್ಠೆಯ ಬಗ್ಗೆ ಸದಾ ಒತ್ತು ನೀಡುತ್ತಿದ್ದರು. ಏನೇ ಮಾಡಿದರೂ ಹೃದಯಪೂರ್ವಕವಾಗಿ ಮಾಡುವಂತೆ ಸೂಚಿಸುತ್ತಿದ್ದರು. ನೀನೊಬ್ಬ ತೋಟದ ಕಾರ್ಮಿಕನಾದರೂ, ಪ್ರತಿ ಗಿಡದ ಬಗ್ಗೆ ನಿಮ್ಮ ಸ್ವಂತ ಮಗನಂತೆ ಕಾಳಜಿ ವಹಿಸಬೇಕು ಎಂದು ಬೋಧಿಸುತ್ತಿದ್ದರು” ಎಂದು ಅನೂಪ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News