ಕಾಶ್ಮೀರದಲ್ಲಿ ನಾಲ್ವರು ಸ್ನೈಪರ್‌ಗಳು ಸಕ್ರಿಯ: ಭದ್ರತಾ ಅಧಿಕಾರಿ

Update: 2018-10-28 18:31 GMT

ಶ್ರೀನಗರ, ಅ. 29: ಜೈಶೆ ಮುಹಮ್ಮದ್ ಉಗ್ರರ ಸ್ನೈಪರ್ (ಮರೆಯಲ್ಲಿ ನಿಂತು ಗುಂಡು ಹಾರಿಸುವುದು) ದಾಳಿ ಈಗ ಕಣಿವೆಯ ಭದ್ರತಾ ಪಡೆಗಳಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ. ಕಳೆದ ಸೆಪ್ಟಂಬರ್ ಮಧ್ಯಭಾಗದಿಂದ ಈ ಸ್ನೈಪರ್ ದಾಳಿಗೆ ಮೂವರು ಭದ್ರತಾ ಸಿಬ್ಬಂದಿ ಬಲಿಯಾಗಿದ್ದರು. ಪಾಕಿಸ್ತಾನ ಮೂಲದ ಉಗ್ರರ ಗುಂಪುಗಳ ಇಂತಹ ದಾಳಿ ತಡೆಗೆ ತಮ್ಮ ತಂತ್ರಗಳನ್ನು ಸರಿ ಹೊಂದಿಸಲು ಕಾನೂನು ಜಾರಿ ನಿರ್ದೇಶನಾಲಯ ಪ್ರಯತ್ನಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೆಪ್ಟಂಬರ್ 18ರಂದು ಪುಲ್ವಾಮದ ನೇವಾದಲ್ಲಿ ಇಂತಹ ಮೊದಲ ದಾಳಿ ನಡೆಯಿತು. ಈ ದಾಳಿಯಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದರು. ತ್ರಾಲ್‌ನಲ್ಲಿ ಇತ್ತೀಚೆಗೆ ನಡೆದ ಸ್ನೈಪರ್ ದಾಳಿಯಲ್ಲಿ ಶಸಸ್ತ್ರ ಸೀಮಾ ಬಲದ ಯೋಧ ಹಾಗೂ ನೌಗಾಂವ್‌ನಲ್ಲಿ ಸಿಐಎಸ್‌ಎಫ್ ಯೋಧ ಮೃತಪಟ್ಟ ಘಟನೆ ವರೆಗೆ ಭದ್ರತಾ ಅಧಿಕಾರಿಗಳು ಇದು ಕೂಡ ಒಂದು ಭಯೋತ್ಪಾದಕ ದಾಳಿ ಎಂದು ಭಾವಿಸಿದ್ದರು. ಇಬ್ಬರು ಉಗ್ರರನ್ನು ಹೊಂದಿದ್ದ ಜೈಸೆ ಮೊಹಮ್ಮದ್‌ನ ಎರಡು ಪ್ರತ್ಯೇಕ ಗುಂಪು ಸೆಪ್ಟಂಬರ್ ಆರಂಭದಲ್ಲಿ ಕಾಶ್ಮೀರ ಕಣಿವೆ ಪ್ರವೇಶಿಸಿದೆ. ಸಂಘಟನೆಯ ಕೆಲವು ಭೂಗತ ಬೆಂಬಲಿಗರ ನೆರವಿನೊಂದಿಗೆ ಇವರು ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರವಾಗಿ ನೆಲೆಯೂರಿದ್ದಾರೆ ಎಂದು ಬೇಹುಗಾರಿಕೆ ಮಾಹಿತಿ ಆಧಾರದಲ್ಲಿ ಭದ್ರತಾ ಸಂಸ್ಥೆಗಳು ತಿಳಿಸಿವೆ.

ಕಾಶ್ಮೀರ ಕಣಿವೆಯಲ್ಲಿ ಸ್ನೈಪರ್ ದಾಳಿ ನಡೆಸಲು ಇವರು ಪಾಕಿಸ್ತಾನದ ಐಎಸ್‌ಐಯಿಂದ ತರಬೇತು ಪಡೆದಿದ್ದಾರೆ. ಅಫಘಾನಿಸ್ಥಾನದಲ್ಲಿ ಅಮೆರಿಕ ನೇತೃತ್ವದ ಮಿತ್ರ ಪಡೆ ಬಳಸಿದ ಎಂ-4 ಕಾರ್ಬೈನ್ ಗನ್ ಅನ್ನು ಅವರು ಹೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News