ನಮ್ಮ ಸರಕಾರ ಉರುಳಿಸಲು ಅಮಿತ್ ಶಾರ ನೀರು ತುಂಬಿರುವ ಮೈಕಟ್ಟು ಸಾಕಾಗದು: ಪಿಣರಾಯಿ ವಿಜಯನ್

Update: 2018-10-29 07:14 GMT

ಪಾಲಕ್ಕಾಡ್, ಅ.29: ಕೇರಳದ ಎಡರಂಗ ನೇತೃತ್ವದ ಸರಕಾರವನ್ನು ಕೆಳಗಿಳಿಸಲು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಶಕ್ತಿ ಸಾಕಾಗದು ಎಂದು ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಾವಕಾಶ ಕುರಿತಂತೆ ಎದ್ದಿರುವ ರಾಜಕೀಯ ವಿವಾದದ ನಡುವೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶಾ ಅವರನ್ನು ಅಣಕವಾಡಿದ್ದಾರೆ.

ಶನಿವಾರ ಕೇರಳದಲ್ಲಿದ್ದ ಅಮಿತ್ ಶಾ, ಕೇರಳ ರಾಜ್ಯ ಸರಕಾರವು ಜನರ ನಂಬಿಕೆಯ ವಿಚಾರಗಳಲ್ಲಿ ಹಸ್ತಕ್ಷೇಪ ನಡೆಸಿದರೆ ಬಿಜೆಪಿ ಸರಕಾರವನ್ನು ಕೆಳಗಿಳಿಸುವುದಾಗಿ ಎಚ್ಚರಿಸಿದ್ದರು.

ರವಿವಾರ ರಾತ್ರಿ ಇಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪಿಣರಾಯಿ ವಿಜಯನ್, ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ‘‘ಬಿಜೆಪಿಯ ಗಾಡ್‌ ಫಾದರ್ ಕೇರಳ ಸರಕಾರವನ್ನು ಕೆಳಗಿಳಿಸುವುದಾಗಿ ಹೇಳಿದ್ದರೆಂದು ಕೇಳಿದೆ. ಕೇವಲ ನೀರಿನಿಂದ ತುಂಬಿರುವ ಅವರ ಮೈಕಟ್ಟು ಅದಕ್ಕೆ ಸಾಕಾಗದು, ಇದನ್ನೆಲ್ಲಾ ಅವರು ಗುಜರಾತ್ ರಾಜ್ಯದಲ್ಲಿ ಮಾಡುವುದು ಒಳ್ಳೆಯದು’’ ಎಂದು ಜನರ ಚಪ್ಪಾಳೆಗಳ ನಡುವೆ ವಿಜಯನ್ ಗುಡುಗಿದರು.

ಕೇಂದ್ರ ಸರಕಾರವು ಕೇರಳ ಸರಕಾರವನ್ನು ಉರುಳಿಸುವುದಾಗಿ ಬಿಜೆಪಿ ಅಧ್ಯಕ್ಷರು ಹೇಳಿಯೇ ಇಲ್ಲ. ಜನರು ಎಡರಂಗದ ವಿರುದ್ಧ ತಿರುಗಿ ಬೀಳುವರೆಂದು ಅವರು ಹೇಳಿದ್ದರೆಂದು ರಾಜ್ಯ ಬಿಜೆಪಿ ಅಧ್ಯಕ್ಷ ಶ್ರೀಧರನ್ ಪಿಳ್ಳೈ ಇದಕ್ಕೂ ಮುನ್ನ ಸ್ಪಷ್ಟೀಕರಣ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News