ಪಕ್ಷಕ್ಕೆ ಹಿಂದಿರುಗಳು 18 ಶಾಸಕರಿಗೆ ಹೊಸ ಶರತ್ತು ವಿಧಿಸಿದ ಎಐಎಡಿಎಂಕೆ

Update: 2018-10-29 16:45 GMT

ಚೆನ್ನೈ, ಅ. 29: ಅನರ್ಹಗೊಂಡ 18 ಶಾಸಕರು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ ಸ್ಮಾರಕದ ಮುಂದೆ ಮಂಡಿಯೂರಿ ಕ್ಷಮೆ ಕೋರಿ, ಅನಂತರ ಪಕ್ಷಕ್ಕೆ ಹಿಂದಿರುಗಬಹುದು ಎಂದು ಸೋಮವಾರ ಆಡಳಿತಾರೂಡ ಎಐಎಡಿಎಂಕೆ ಹೇಳಿದೆ.

2016 ಡಿಸೆಂಬರ್‌ನಲ್ಲಿ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ನಿಧನದ ಬಳಿಕ ಪಕ್ಷದ ಒಳಗೆ ಅಧಿಕಾರಕ್ಕಾಗಿ ಮೇಲಾಟ ಆರಂಭವಾದ ಹಿನ್ನೆಲೆಯಲ್ಲಿ ಎಐಎಡಿಎಂಕೆಯ ಬಂಡಾಯ ನಾಯಕ ಟಿಟಿವಿ ದಿನಕರನ್ ಬಣ ಸೇರಿದ್ದ 18 ಶಾಸಕರನ್ನು ಅನರ್ಹಗೊಳಿಸಲಾಗಿತ್ತು. 2016ರಲ್ಲಿ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಎಲ್ಲ 18 ಶಾಸಕರು ಜಯ ಗಳಿಸಿರುವುದರ ಸಂಪೂರ್ಣ ಶ್ರೇಯವನ್ನು ಎಐಎಡಿಎಂಕೆಯ ಮುಖವಾಣಿ ‘ನಮದು ಅಮ್ಮಾ’ ಜಯಲಲಿತಾ ಅವರಿಗೆ ಅರ್ಪಿಸಿದೆ. ಎಐಎಡಿಎಂಕೆಗೆ ಹಿಂದಿರುಗುವ ಮೊದಲು ದಿನಕರನ್ ಬಣ ಸೇರಿರುವ ಬಗ್ಗೆ ತೀವ್ರ ಪಶ್ಚಾತಾಪ ಪಡಬೇಕು ಎಂದು ಅದು ಹೇಳಿದೆ.

 18 ಶಾಸಕರನ್ನು ದಿನಕರನ್ ದಾರಿ ತಪ್ಪಿಸಿದ್ದಾರೆ ಎಂದು ಮುಖ್ಯಮಂತ್ರಿ ಪಳನಿ ಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಒ. ಪನ್ನೀರ್‌ಸೆಲ್ವಂ ಆರೋಪಿಸಿದ್ದಾರೆ. ದಿನಕರನ್ ಪರವಾಗಿ ಇದ್ದ ಅನರ್ಹಗೊಂಡ ಶಾಸಕರು ಬೀದಿಗೆ ಬಂದಿದ್ದಾರೆ ಹಾಗೂ ಅವರು ದಯನೀಯ ಸ್ಥಿತಿಯಲ್ಲಿ ಇದ್ದಾರೆ ಎಂದು ಅವರು ಹೇಳಿದ್ದಾರೆ. “ನೀವು ಎಐಎಡಿಎಂಕೆ ಎಂಬ ದೇವಾಲಯವನ್ನು ತ್ಯಜಿಸಿದಿರಿ ಹಾಗೂ ಎಎಂಎಂಕೆಗೆ ಸೇರಿದಿರಿ. ನೀವು ಲಾಭಕ್ಕಾಗಿ ಅಥವಾ ತಿಳಿಯದೇ ಅಲ್ಲಿಗೆ ಹೋದಿರಿ. ಅಮ್ಮ ತೋರಿಸಿದ ಹಾದಿ ತ್ಯಜಿಸಿದ ಕಾರಣಕ್ಕೆ ನಿಮಗೆ ಈ ಸ್ಥಿತಿ ಬಂದಿದೆ” ಎಂದು ಎಐಎಡಿಎಂಕೆ ಹೇಳಿದೆ.

ತೀವ್ರವಾಗಿ ಪಶ್ಚಾತ್ತಾಪಪಡಿ, ಅಮ್ಮಾನ ಸ್ಮಾರಕದ ಎದುರು ಮೊಣಕಾಲೂರಿ ಕಣ್ಣೀರು ತುಂಬಿ ಕ್ಷಮೆ ಕೋರಿ. ಪಕ್ಷಕ್ಕೆ ಕ್ಷಮೆ ಯಾಚನೆಯ ಪತ್ರ ನೀಡಿ. ಅನಂತರ ಪಕ್ಷಕ್ಕೆ ಹಿಂದಿರುಗಿ ಎಂದು ಎಐಎಡಿಎಂಕೆ ಹೇಳಿದೆ.

  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News