ಕಳವು ಪ್ರಕರಣ: ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಜಪ್ತಿ

Update: 2018-10-29 17:06 GMT

ಬೆಂಗಳೂರು, ಅ.29: ಕೈಗಾರಿಕೋದ್ಯಮಿಯೊಬ್ಬರ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಆರೋಪದಡಿ ಯುವಕನೊಬ್ಬನನ್ನು ಬಂಧಿಸಿರುವ ಮಡಿವಾಳ ಠಾಣಾ ಪೊಲೀಸರು, 90 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ಈ ಕುರಿತು ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್‌ಕುಮಾರ್, ಬಿಹಾರದ ಮದುಬನಿ ಜಿಲ್ಲೆಯ ಪಿಪ್ರಾಕಮಲ್ ಪುರ ಗ್ರಾಮದ ನಿವಾಸಿ ಅಖಿಲೇಶ್ ಕುಮಾರ್(21) ಬಂಧಿತ ಆರೋಪಿ ಎಂದು ಮಾಹಿತಿ ನೀಡಿದರು.

ಈತ ಕೈಗಾರಿಕೋದ್ಯಮಿ ಸತ್ಯಪ್ರಕಾಶ್ ಎಂಬುವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಸತ್ಯಪ್ರಕಾಶ್ ಅವರ ಮನೆಯಲ್ಲಿರುವ ಒಂದನೇ ಮಹಡಿಯ ಕೊಠಡಿಯಲ್ಲಿ ಅಳವಡಿಸಿದ್ದ ಲಾಕರ್‌ನಲ್ಲಿ 2 ಕೆಜಿ ತೂಕದ ವಜ್ರ, ಚಿನ್ನದ ಒಡವೆ ಹಾಗೂ ಅರ್ಧ ಕೆಜಿ ಬೆಳ್ಳಿ ವಸ್ತುಗಳನ್ನು ಇಡಲಾಗಿತ್ತು. ಇದರ ಬಗ್ಗೆ ಅರಿತಿದ್ದ ಆರೋಪಿ ಲಾಕರ್ ಸಮೇತ ಪರಾರಿಯಾಗಿದ್ದ ಎಂದು ಅವರು ಹೇಳಿದರು.

ಈ ಬಗ್ಗೆ ಉದ್ಯಮಿ ಸತ್ಯಪ್ರಕಾಶ್ ಅವರು ಮಡಿವಾಳ ಠಾಣೆಗೆ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಆಗ್ನೇಯ ವಿಭಾಗದ ಡಿಸಿಪಿ ಡಾ.ಬೋರಲಿಂಗಯ್ಯ ಆರೋಪಿಯ ಪತ್ತೆಗಾಗಿ ವಿಶೇಷ ತಂಡ ರಚಿಸಿದ್ದರು. ಮನೆಗೆಲಸ ಮಾಡುತ್ತಿದ್ದ ಅಖಿಲೇಶ್ ಕುಮಾರ್‌ನೇ ಕಳ್ಳತನ ಮಾಡಿರುವುದು ಗೊತ್ತಾದ ಹಿನ್ನೆಲೆಯಲ್ಲಿ ಆತನ ಪತ್ತೆಗಾಗಿ ಬಿಹಾರಕ್ಕೆ ವಿಶೇಷ ತಂಡವನ್ನು ಕಳುಹಿಸಲಾಗಿತ್ತು. ಈ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ ಎಂದು ವಿವರಿಸಿದರು.

ಆರೋಪಿ ಲಾಕರ್ ಸಮೇತ ಇಂದಿರಾನಗರಕ್ಕೆ ಹೋಗಿ ಅಲ್ಲಿ ಅದನ್ನು ಒಡೆದು ಅದರಲ್ಲಿದ್ದ ಚಿನ್ನಾಭರಣಗಳನ್ನು ತೆಗೆದುಕೊಂಡು ರೈಲಿನಲ್ಲಿ ಬಿಹಾರಕ್ಕೆ ತೆರಳಿ ತನ್ನ ಮನೆಯ ಪಕ್ಕ ಗುಂಡಿ ತೋಡಿ ಅದರೊಳಗೆ ಕದ್ದ ಚಿನ್ನಾಭರಣಗಳನ್ನು ಮುಚ್ಚಿಟ್ಟಿದ್ದಾಗಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ. ಆರೋಪಿ ನೀಡಿದ ಮಾಹಿತಿ ಮೇರೆಗೆ ಗುಂಡಿಯಿಂದ 2 ಕೆಜಿ ಚಿನ್ನಾ, ವಜ್ರದ ಒಡವೆ, ಅರ್ಧ ಕೆಜಿ ಬೆಳ್ಳಿ ವಸ್ತುಗಳು ಹಾಗೂ ಸ್ಟೀಲ್ ಮತ್ತು ಗೋಲ್ಡ್ ಕೇಸ್ ವಾಚ್‌ಗಳು ಸೇರಿದಂತೆ ಒಟ್ಟು 90 ಲಕ್ಷ ಮೌಲ್ಯದ ಮಾಲನ್ನು ಜಪ್ತಿ ಮಾಡಲಾಗಿದೆ ಎಂದು ಸುನೀಲ್‌ಕುಮಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News