ದಲಿತರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಸಮೃದ್ಧಿ ಯೋಜನೆ: ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು, ಅ.30: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ-ಯುವತಿಯರಿಗೆ ಸುಮಾರು 800ಕೋಟಿ ರೂ.ವೆಚ್ಚದಲ್ಲಿ ಸ್ವಯಂ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ‘ಸಮೃದ್ಧಿ’ ಯೋಜನೆ ಜಾರಿ ಮಾಡಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಮಂಗಳವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಸಮೃದ್ಧಿ ಯೋಜನೆ ಕುರಿತು ಮಾಹಿತಿ ನೀಡಿದ ಅವರು, ಪರಿಶಿಷ್ಟ ಜಾತಿ ಹಾಗೂ ಪಂಗಡದವರನ್ನು ಉದ್ಯಮಿಗಳನ್ನಾಗಿ ರೂಪಿಸಲು ಖಾಸಗಿ ಸಹಭಾಗಿತ್ವದಲ್ಲಿ ಸಮೃದ್ಧಿ ಯೋಜನೆಯನ್ನು ಜಾರಿ ಮಾಡಲಾಗಿದೆ ಎಂದು ಹೇಳಿದರು.
ಈ ವರ್ಷ ಹತ್ತು ಸಾವಿರ ಸ್ವಯಂ ಉದ್ಯೋಗ ಕಲ್ಪಿಸುವ ಗುರಿ ಹೊಂದಲಾಗಿದೆ. ಸಮಾಜ ಕಲ್ಯಾಣ ಇಲಾಖೆಗೆ ಬರುವ ಅನುದಾನದಡಿ ಪ್ರತಿವರ್ಷ ಇಷ್ಟೆ ಪ್ರಮಾಣದಲ್ಲಿ ಸ್ವಯಂ ಉದ್ಯೋಗಿಗಳನ್ನು ರೂಪಿಸಲಾಗುವುದು. ಇದಕ್ಕೆ ಕೇಂದ್ರ ಸರಕಾರದಿಂದ ಯಾವುದೆ ಅನುದಾನ ಪಡೆಯುವುದಿಲ್ಲವೆಂದು ಅವರು ಸ್ಪಷ್ಟ ಪಡಿಸಿದರು.
10 ಲಕ್ಷ ರೂ.ನೆರವು: ದೇಶದಲ್ಲೆ ಪ್ರಥಮ ಬಾರಿಗೆ ‘ಸಮೃದ್ಧಿ’ ಅಂತಹ ಮಹತ್ವದ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ. ಪ್ರತಿ ಫಲಾನುಭವಿಗೆ 10 ಲಕ್ಷ ರೂ.ವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ. ಇದರ ಜತೆಗೆ ಉದ್ಯಮಶೀಲತೆ, ಕೌಶಲ್ಯ ತರಬೇತಿ, ಮಾರುಕಟ್ಟೆ, ತಾಂತ್ರಿಕ ನೆರವು ಸೇರಿದಂತೆ ಉದ್ಯಮ ಆರಂಭಿಸಲು ಎಲ್ಲ ಅಗತ್ಯವಾದ ಎಲ್ಲ ರೀತಿಯ ನೆರವನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು.
ಚಿಲ್ಲರೆ ಮಳಿಗೆ, ವೋಲ್ವೋ ಕ್ಯಾಬ್, ಚಾಯ್ ಪಾಯಿಂಟ್, ಬಾಟಾ, ಪ್ಯಾರಾಗಾನ್ ಅಂಗಡಿ, ಕಾಫಿ ಮಾರಾಟ ಮಳಿಗೆ, ಮೊಬೈಲ್ ಮಾರಾಟ ಮತ್ತು ದುರಸ್ತಿ, ಬ್ರಾಂಡೆಂಡ್ ಮೆಡಿಕಲ್ ಸ್ಟೋರ್, ಹಟ್ಟಿ ಕಾಫಿ ಹೀಗೆ ವಿವಿಧ ವ್ಯಾಪಾರಗಳನ್ನು ಆರಂಭಿಸಲು ಸಂಬಂಧಿಸಿದ ಸಂಸ್ಥೆಗಳಿಂದ ಉಚಿತ ತರಬೇತಿ ನೀಡಲಾಗುವುದು ಎಂದು ಅವರು ಹೇಳಿದರು.
ಸಮೃದ್ಧಿ ಯೋಜನೆಯಡಿ ಬರುವ ಸ್ವಯಂ ಉದ್ಯೋಗಿಗಳ ಒಟ್ಟು ಮಂಜೂರಾತಿಯಲ್ಲಿ ಮಹಿಳೆಯರು, ವಿಕಲಚೇತನರು ಹಾಗೂ ಅಂತರ್ಜಾತಿ ವಿವಾಹಿತ ಫಲಾನುಭವಿಗಳಿಗೆ ಆದ್ಯತೆ ನೀಡಲಾಗುವುದು. ಹಾಗೂ ಸರಕಾರ ನೀಡುವ ಧನಸಹಾಯ ದುರುಪಯೋಗವಾಗದಂತೆ ಮುಂಜಾಗ್ರತೆ ವಹಿಸಲಾಗುವುದು ಎಂದು ಅವರು ಹೇಳಿದರು.
ಸಮೃದ್ಧಿ ಯೋಜನೆಯಡಿ ಸ್ವಯಂ ಉದ್ಯೋಗ ಮಾಡಬಯಸುವ ಎಸ್ಸಿ, ಎಸ್ಟಿ ಸಮುದಾಯದ ಯುವಕ-ಯುವತಿಯರು ನ.7ರಿಂದ www.kalyanakendra.com ವೆಬ್‌ಸೈಟ್‌ನಲ್ಲಿ ಒಂದು ತಿಂಗಳವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕನಿಷ್ಠ ಎಸೆಸೆಲ್ಸಿ ತೇರ್ಗಡೆಯಾಗಿರಬೇಕು. 21 ವರ್ಷದ ಮೇಲ್ಪಟ್ಟವರಾಗಿರಬೇಕು. ವಾರ್ಷಿಕ ಆದಾಯ 5ಲಕ್ಷ ರೂ.ಮೀರಿರಬಾರದು.
-ಪ್ರಿಯಾಂಕ ಖರ್ಗೆ, ಸಚಿವ, ಸಮಾಜ ಕಲ್ಯಾಣ ಇಲಾಖೆ