‘ಉತ್ತರ ಕೊಡಿ ಬಿಎಸ್‌ವೈ’: ಸಿದ್ದರಾಮಯ್ಯ ಟ್ವಿಟರ್ ಅಭಿಯಾನ

Update: 2018-10-30 14:13 GMT

ಬೆಂಗಳೂರು, ಅ.30: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮಾಜಿ ಮುಖ್ಯಮಂತ್ರಿ, ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ‘ಉತ್ತರ ಕೊಡಿ ಬಿಎಸ್‌ವೈ’ ಟ್ವಿಟರ್ ಅಭಿಯಾನ ಆರಂಭಿಸಿದ್ದಾರೆ.

ರಾಜ್ಯದ ಮೂರು ಲೋಕಸಭಾ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರಕಾರದ ವಿರುದ್ಧ ಟೀಕಾ ಪ್ರಹಾರ ಮಾಡುತ್ತಿರುವ ಯಡಿಯೂರಪ್ಪ ವಿರುದ್ಧ ಸಿದ್ದರಾಮಯ್ಯ ಆರಂಭಿಸಿರುವ ಟ್ವಿಟರ್ ಅಭಿಯಾನವು ಸಾಕಷ್ಟು ಪ್ರಚಾರ ಗಿಟ್ಟಿಸಿಕೊಂಡಿದೆ.

ಸರಣಿ ಟ್ವಿಟ್‌ಗಳು: ಕೇಂದ್ರ ಸರಕಾರದ ಎನ್ ಡಿಆರ್‌ಎಫ್ ಕರ್ನಾಟಕದಲ್ಲಿ ಬರ ಪರಿಹಾರಕ್ಕಾಗಿ 5 ವರ್ಷಗಳ ಅವಧಿಗೆ ನಿಗದಿಪಡಿಸಿದ್ದು ಕೇವಲ 1527 ಕೋಟಿ ರೂ., ಮಹಾರಾಷ್ಟ್ರಕ್ಕೆ 8195 ಕೋಟಿ ರೂ., ರಾಜಸ್ಥಾನಕ್ಕೆ 6094 ಕೋಟಿ ರೂ., ಮಧ್ಯಪ್ರದೇಶಕ್ಕೆ 4847 ಕೋಟಿ ರೂ., ಗುಜರಾತ್‌ಗೆ 3394 ಕೋಟಿ ರೂ., ಯಾಕೇ ಈ ತಾರತಮ್ಯ? ‘ಉತ್ತರ ಕೊಡಿ ಬಿಎಸ್‌ವೈ’ ಎಂದು ಸಿದ್ದರಾಮಯ್ಯ ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.

ರೈತರ ಬೆಳೆಯ ಉತ್ಪಾದನಾ ವೆಚ್ಚದ ಮೇಲೆ ಶೇ.50ರಷ್ಟು ಲಾಭ ಬರುವಂತಹ ಬೆಂಬಲ ಬೆಲೆ ನೀಡುವುದಾಗಿ ಬಿಜೆಪಿ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಘೋಷಿಸಿತ್ತಲ್ಲಾ? ಯಾವ ರೈತರಿಗೆ ಆ ಬೆಲೆ ಸಿಕ್ಕಿದೆ ‘ರೈತ ನಾಯಕ’ ಯಡಿಯೂರಪ್ಪನವರೇ? ‘ಉತ್ತರ ಕೊಡಿ ಬಿಎಸ್‌ವೈ’ ಎಂದು ಸಿದ್ದರಾಮಯ್ಯ ಕೇಳಿದ್ದಾರೆ.

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾ ಮಾಡಿ, ಮಹಾದಾಯಿ ವಿವಾದ ಬಗೆಹರಿಸಿ, ತಾರತಮ್ಯ ಮಾಡದೆ ನಮಗೆ ಬರ ಪರಿಹಾರ ನೀಡಿ ಎಂದೆಲ್ಲಾ ಪ್ರಧಾನಮಂತ್ರಿಯನ್ನು ಕೇಳಿಕೊಂಡೆವು. ಯಾವುದನ್ನೂ ಮಾಡಲಿಲ್ಲ. ಆಗ ಲೋಕಸಭಾ ಸದಸ್ಯರಾಗಿದ್ದ ಯಡಿಯೂರಪ್ಪ ನೀವೇನು ಮಾಡಿದ್ದೀರಿ? ‘ಉತ್ತರ ಕೊಡಿ ಬಿಎಸ್‌ವೈ’ ಎಂದು ಸಿದ್ದರಾಮಯ್ಯ ಟ್ವಿಟರ್‌ನಲ್ಲಿ ಕಿಚಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News