ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಕ್ಕೆ ಸಿದ್ಧತೆ

Update: 2018-10-30 14:12 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.30: ನಗರ ಹೊರವಲಯದ 150 ಕಿ.ಮೀ. ವ್ಯಾಪ್ತಿಯ ರಾಜ್ಯ ಹೆದ್ದಾರಿಯ ಐದು ಮಾರ್ಗಗಳನ್ನು ಕೆಆರ್‌ಡಿಎಲ್ ಮೂಲಕ ಮಾಡಿ ಟೋಲ್ ಸಂಗ್ರಹಿಸಲು ಸರಕಾರ ಮುಂದಾಗಿದೆ.

ನಗರದ ಹೊರವಲಯದ ಸುತ್ತಮುತ್ತಲಿನ ಐದು ರಸ್ತೆಗಳನ್ನು 1455 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿ ಟೋಲ್ ಸಂಗ್ರಹಿಸಲು ಇತ್ತೀಚೆಗೆ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ನೈಸ್ ರಸ್ತೆ, ತುಮಕೂರು, ಹಾಸನ, ಚಿತ್ರದುರ್ಗ, ಕೋಲಾರ-ಮುಳಬಾಗಿಲು ಮಾರ್ಗಗಳಲ್ಲಿ ಜಾರಿಯಲ್ಲಿರುವ ಟೋಲ್ ಸಂಗ್ರಹ ವ್ಯವಸ್ಥೆ ಬಗ್ಗೆ ಸಾರ್ವಜನಿಕರಲ್ಲಿ ಆಕ್ರೋಶ ಇರುವ ಬೆನ್ನಲ್ಲೇ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುವ ಕೆಆರ್‌ಡಿಎಲ್ ವತಿಯಿಂದ ರಸ್ತೆ ಅಭಿವೃದ್ಧಿ ಮಾಡಿ ಟೋಲ್ ಸಂಗ್ರಹಕ್ಕೆ ತೀರ್ಮಾನಿಸಿರುವುದರಿಂದ ನಗರದ ನಾಗರಿಕರಿಗೆ ಮತ್ತಷ್ಟು ಹೊರೆಯಾಗುವಂತಾಗಿದೆ.

ಯಾವ ರಸ್ತೆಗಳು: ಆನೇಕಲ್-ಅತ್ತಿಬೆಲೆ- ಸರ್ಜಾಪುರ-ವರ್ತೂರು- ವೈಟ್‌ಫೀಲ್ಡ್- ಹೊಸಕೋಟೆ ರಸ್ತೆ, ಹಾರೋಹಳ್ಳಿ-ಉರುಗನದೊಡ್ಡಿ- ಕೆಐಎಡಿಬಿ ಕೈಗಾರಿಕಾ ಪ್ರದೇಶ-ಜಿಗಣಿ-ಆನೇಕಲ್ ರಸ್ತೆ, ಬೆಂಗಳೂರು-ಮಾಗಡಿ. ಹೊಸಕೋಟೆ- ಬೂದಿಗೆರೆ-ಮೈಲೇನಹಳ್ಳಿ- ದೇವನಹಳ್ಳಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ, ನೆಲಮಂಗಲ-ಮಧುರೈ- ಬ್ಯಾಥಾ ಮಾರ್ಗಗಳಲ್ಲಿ ಟೋಲ್ ಸಂಗ್ರಹಕ್ಕೆ ತೀರ್ಮಾನಿಸಲಾಗಿದೆ ಎನ್ನಲಾಗಿದೆ.

ಮಾಲಕರ ಆಕ್ರೋಶ: ಸರಕಾರ ಟೋಲ್ ಸಂಗ್ರಹ ಮಾಡಲು ಮುಂದಾಗಿರುವ ರಸ್ತೆಗಳಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಮಾಡುವುದಿಲ್ಲ ಎಂದು ಹೇಳಲಾಗಿದ್ದು, ಸ್ಥಳೀಯರು ಓಡಾಡಬೇಕಾದರೂ ಟೋಲ್ ಪಾವತಿಸಿಯೇ ಹೋಗಬೇಕಾಗುತ್ತದೆ. ಇದು ವಾಹನ ಮಾಲಕರು ಆಕ್ರೋಶ ವ್ಯಕ್ತಪಡಿಸಿದ್ದು, ಬೆಂಗಳೂರು ಸುತ್ತಮುತ್ತಲ ಐದು ರಸ್ತೆಗಳು ಸೇರಿದಂತೆ ರಾಜ್ಯದ ವಿವಿಧೆಡೆ 17 ರಸ್ತೆಗಳನ್ನು ಕೆಆರ್‌ಡಿಎಲ್ ಮೂಲಕ ಅಭಿವೃದ್ಧಿ ಸಂಬಂಧ ಸರಕಾರದ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News