ನಟಿ ಸಂಗೀತಾ ಭಟ್ ವಿಷಕನ್ಯೆ: ನಿರ್ದೇಶಕ ಗುರುಪ್ರಸಾದ್

Update: 2018-10-30 14:20 GMT

ಬೆಂಗಳೂರು, ಅ.30 : ಬೆತ್ತಲೆ ಬೆನ್ನಿನ ದೃಶ್ಯ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ನಟಿ ಸಂಗೀತಾ ಭಟ್‌ರನ್ನು ನೋಡಿದ ಕೂಡಲೇ ಅವರೊಬ್ಬ ವಿಷಕನ್ಯೆ ಎನ್ನುವುದನ್ನು ಅರ್ಥ ಮಾಡಿಕೊಂಡಿದ್ದೆ ಎಂದು ನಿರ್ದೇಶಕ ಗುರುಪ್ರಸಾದ್ ಗುಡುಗಿದ್ದಾರೆ.

‘ಕುಷ್ಟ’ ಸಿನಿಮಾ ಕುರಿತ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಗುರುಪ್ರಸಾದ್‌ರನ್ನು ಮೀ ಟೂ ಅಭಿಯಾನದಲ್ಲಿ ಹೆಸರು ಹೇಳದೇ ಆರೋಪ ಮಾಡಿದ್ದ ಹಿನ್ನೆಲೆಯಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನಾವು ಸುಮ್ಮನಿದ್ದೇವೆ ಎಂದರೆ ಮಾತನಾಡಲು ಬರುವುದಿಲ್ಲ ಎಂದರ್ಥವಲ್ಲ. ನಾವು ಕೌಂಟರ್ ಕೊಡಲು ಶುರು ಮಾಡಿದರೆ ಆ ಹೆಣ್ಣು ಮಕ್ಕಳು ಎಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೋ ಎಂಬ ಭಯದಿಂದ ಸುಮ್ಮನಿದ್ದೇನೆ ಎಂದು ಸಂಗೀತಾ ಭಟ್‌ಗೆ ತಿರುಗೇಟು ನೀಡಿದ್ದಾರೆ.

‘ಬೆತ್ತಲೆ ಬೆನ್ನಿನ ದೃಶ್ಯ’ ಚಿತ್ರೀಕರಣ ವೇಳೆ ನನ್ನ ಪತ್ನಿ ಮತ್ತು ಮಗಳು ನನ್ನ ಪಕ್ಕದಲ್ಲಿದ್ದರು. ನಾನು ಮುಖ ನೋಡಿದರೆ ತಕ್ಷಣ ಅವರ ಬಗ್ಗೆ ತಿಳಿದುಕೊಳ್ಳುತ್ತೇನೆ. ಅಂದೇ ಅಂದುಕೊಂಡಿದ್ದೆ ಅವಳು ವಿಷಕನ್ಯೆ ಎಂದು. ನಟಿ ಶ್ರುತಿ ಹರಿಹರನ್ ಮತ್ತು ಸಂಗೀತಾ ಭಟ್ ಮದುವೆಯಾಗಿ, ಅವಕಾಶಕ್ಕಾಗಿ ವಿಷಯ ಬಚ್ಚಿಟ್ಟು ಈಗ ಡ್ರಾಮ ಮಾಡುತ್ತಿದ್ದಾರೆ ಯಾಕೆ ಎಂದು ಅವರು ಪ್ರಶ್ನಿಸಿದ್ದಾರೆ.

ಮೀ ಟೂ ಆರೋಪಗಳನ್ನು ಮಾಡುವ ಮೂಲಕ ತಾವು ಪತಿವ್ರತೆ ಎಂದು ಸಾಬೀತುಪಡಿಸಿಕೊಳ್ಳಲು ನಟಿಯರು ಮುಂದಾಗುತ್ತಿದ್ದಾರೆ. ಈ ಅಭಿಯಾನ ಬೇರೆ ಕಡೆಯಿಂದ ಬಂದಿದೆ. ವೇದಿಕೆ ಸಿಗುತ್ತೆ ಅಂತ ಬೇರೆ ರೀತಿಯಾಗಿ ಬಳಸಿಕೊಳ್ಳಬಾರದು. ತಮ್ಮ ಮನೆಯಲ್ಲಿ ಗಂಡ, ಅತ್ತೆ ಹಾಗೂ ಮಾವನ ಮುಂದೆ ತಾವು ಪತಿವ್ರತೆಯರು ಎಂದು ಹೇಳೋಕೆ ಪ್ರಯತ್ನಿಸುತ್ತಿದ್ದಾರೆ. ಅದರಲ್ಲೂ ಎಲ್ಲ ಹೆಣ್ಣು ಮಕ್ಕಳಲ್ಲ. ಕೆಲವು ಮಾತ್ರ ಹೀಗೆ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ನಾನು ಯಾವ ಸಿನಿಮಾ ಕಲಾವಿದರ ಜೊತೆ ಮಾತನಾಡಿದರೂ ಆ ಚಾಟ್ ಹಿಸ್ಟರಿ ಪ್ರಿಂಟ್ ತೆಗೆದು ಇಟ್ಟಿರುತ್ತೇನೆ. ಸಂಗೀತಾ ಭಟ್ ನನಗೆ ಎಂತಹ ಫೋಟೋಗಳನ್ನು ಕಳಿಸಿದ್ದಾರೆ ಎನ್ನುವುದು ಈಗಲೂ ನನ್ನಲ್ಲಿದೆ. ನಾನು ಈಗ ಅದನ್ನು ಮಾತನಾಡಲು ಹೋದರೆ ಏನೇನೋ ಆಗುತ್ತದೆ. ಹಿಂದೊಮ್ಮೆ ಹೀಗೆ ಆಗಿದೆ. ಹೀಗಾಗಿ, ನನ್ನ ಮೇಲೆ ಆರೋಪ ಮಾಡಿರುವ ನಾಯಕಿ ಚಿತ್ರರಂಗದಿಂದ ಹೊರಗೆ ಹೋಗುತ್ತಿದ್ದಾರೆ. ಕೆಲವರು ಹೊರಗೆ ಹೋಗುವುದರಿಂದ ಚಿತ್ರರಂಗ ಆರೋಗ್ಯ ವೃದ್ಧಿಸುತ್ತದೆ ಎಂದು ಅವರು ಹೇಳಿದ್ದಾರೆ.

ಹೊಸ ಅಭಿಯಾನ ಬಂದಾಗ ಹೊಸ ವೇದಿಕೆಗಳು ಸೃಷ್ಟಿಯಾಗುತ್ತವೆ. ಕೆಲವು ಅಪ್ರಬುದ್ಧ ಮನಸ್ಥಿತಿಗಳು ಅದನ್ನಿಟ್ಟುಕೊಂಡು ತಾನು ಬೆಳೆದುಬಿಡಬಹುದು, ಪ್ರಪಂಚವನ್ನೇ ಆಟವಾಡಿಸಬಹುದು ಎಂದುಕೊಳ್ಳುತ್ತಾರೆ. ಆದರೆ, ಪ್ರಪಂಚ ತಿರುಗಿ ಬೀಳುತ್ತದೆ ಎಂದು ಊಹಿಸಿರಲ್ಲ. ಈಗ ಜಗತ್ತು ತಿರುಗಿಬಿದ್ದಿದೆ ಎಂದಿರುವ ಅವರು, ಅರ್ಜುನ್ ಸರ್ಜಾ ಕಲಾವಿದರಾಗಿ ಕನ್ನಡಕ್ಕೆ ಒಳ್ಳೆಯ ಹೆಸರು ತಂದಿದ್ದಾರೆ. ಇದು ತಮಿಳಿನಲ್ಲಿ ಕನ್ನಡದಲ್ಲಿ ಹೋಗಿ ಮಾಡಿರುವ ಸಾಧನೆ. ಅವರನ್ನು ಎದುರು ಹಾಕಿಕೊಂಡರೆ ತಮಿಳು ಮತ್ತು ಮಲಯಾಳಂನಲ್ಲಿ ನಮಗೆ ಮಾರ್ಕೆಟ್ ಸಿಗುತ್ತದೆ ಎನ್ನುವ ಲೆಕ್ಕಾಚಾರವಿರಬಹುದು ಎಂದು ಆರೋಪಿಸಿದ್ದಾರೆ.

ಅವಕಾಶ ಸಿಗುವ ಮುನ್ನ ನಟಿಯರು ಹೇಗಿರುತ್ತಾರೆ. ಅವಕಾಶ ಸಿಕ್ಕ ನಂತರ ಹೇಗೆ ಬದಲಾಗುತ್ತಾರೆ ಅನ್ನುವುದು ನನಗೆ ಚೆನ್ನಾಗಿ ಗೊತ್ತಿದೆ. ಕಿರುಕುಳ ಆದಾಗಲೇ ವಿರೋಧಿಸಬೇಕು. ನನ್ನ ವೃತ್ತಿಗೆ ದ್ರೋಹ ಆಗುತ್ತದೆ ಎಂದು ನಾನು ಎಂಟು ನಿರ್ಮಾಪಕರಿಗೆ ಹಣ ಹಿಂತಿರುಗಿಸಿದ್ದೇನೆ. ಹೀಗೆ ಹೆಣ್ಣು ಮಕ್ಕಳಿಗೆ ತೊಂದರೆಯಾದಾಗ ಅವರು ಸಿನಿಮಾದಿಂದ ಹೊರ ಬರಬಹುದು. ಅದನ್ನು ಬಿಟ್ಟು ವರ್ಷಗಳ ನಂತರ ಈಗ ಆರೋಪಿಸುವುದರ ಹಿಂದಿನ ಕಾರಣ ಏನು ಎಂಬುದರ ಬಗ್ಗೆ ಆಲೋಚಿಸಬೇಕಿದೆ ಎಂದಿದ್ದಾರೆ.

ಇವರಿಗೆಲ್ಲಾ ಸುಲಭವಾಗಿ ಅವಕಾಶ ಸಿಕ್ಕಿಬಿಟ್ಟಿರುತ್ತದೆ. ಅಂದವಾಗಿ ಹುಟ್ಟುವುದು ಪ್ರಕೃತಿ ಕೊಡುಗೆ. ಅದಕ್ಕೆ ಸಾಧನೆ ಮಾಡಬೇಕಾದ ಅಗತ್ಯವಿಲ್ಲ. ಆದರೆ, ಬರಹಗಾರ, ನಿರ್ದೇಶಕ ತುಂಬಾ ಕಷ್ಟಪಟ್ಟಿರುತ್ತಾರೆ. ಹೀಗಾಗಿ, ಯಾರು ಯಾರು ನೊಂದಿದ್ದೀರಾ, ದಯವಿಟ್ಟು ನನ್ನನ್ನು ಸಂಪರ್ಕ ಮಾಡಿ. ನಾನು ನಿಮ್ಮ ಪರವಾಗಿ ನಿಲ್ಲುತ್ತೇನೆ ಎಂದು ಗುರುಪ್ರಸಾದ ಭರವಸೆ ನೀಡಿದ್ದಾರೆ.

ಅರ್ಜುನ್ ಸರ್ಜಾ ಹಾಗೂ ಶ್ರುತಿ ಹರಿಹರನ್ ನಡುವೆ ಏನು ನಡೆದಿದೆ ಎಂಬುದು ಅವರಿಗೆ ಅಷ್ಟೇ ಗೊತ್ತಿದೆ. ಅವರಿಬ್ಬರನ್ನು ನಾನು ಹತ್ತಿರದಿಂದ ಬಲ್ಲೆ. ಅಲ್ಲದೆ, ಅರ್ಜುನ್ ಸರ್ಜಾರೊಂದಿಗೆ ನಟಿಸಿದ್ದೇನೆ. ಇಬ್ಬರೂ ಸ್ವಾರ್ಥಕ್ಕೆ ಸುಳ್ಳು ಹೇಳುವುದಿಲ್ಲ ಎಂದುಕೊಂಡಿದ್ದೇನೆ. ಈಗ ಇಬ್ಬರೂ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಆದಷ್ಟು ಬೇಗ ಪ್ರಕರಣ ಬಗೆಹರಿಯಲಿ ಎಂಬುದು ನನ್ನ ಆಶಯ. ಮೀ ಟೂ ಅಭಿಯಾನ ಕೇವಲ ಸ್ಯಾಂಡಲ್‌ವುಡ್‌ಗೆ ಸೀಮಿತವಲ್ಲ. ಎಲ್ಲ ರಂಗದಲ್ಲಿಯೂ ಇದ್ದು, ಇಲ್ಲಿ ಹೆಚ್ಚು ಪ್ರಚಾರ ಪಡೆದಿದೆ.

-ಶ್ರುತಿ, ಹಿರಿಯ ನಟಿ

ಮೀ ಟೂ ಅಭಿಯಾನವನ್ನಿಟ್ಟುಕೊಂಡು ಸಿನಿಮಾ ಮಾಡುತ್ತಿದ್ದೇನೆ. ನಾನೇ ಅದಕ್ಕೆ ನಾಯಕ ನಟನಾಗಿದ್ದು, ಕಳೆದ ಎರಡು ತಿಂಗಳಿಂದ ಅದರ ಬಗ್ಗೆ ಯೋಚಿಸುತ್ತಿದ್ದೇನೆ. ಈ ಸಿನಿಮಾದಲ್ಲಿ ನಟ ಅರ್ಜುನ್ ಸರ್ಜಾ ಹಾಗೂ ನಟಿ ಶ್ರುತಿ ಹರಿಹರನ್ ಇಬ್ಬರಿಗಷ್ಟೇ ಕಾಂಬಿನೇಷನ್ ಇದೆ. ಅದು ಬಿಟ್ಟರೆ ಸಂಗೀತಾ ಭಟ್ ಹಾಗೂ ಗುರುಪ್ರಸಾದ್.

-ಗುರುಪ್ರಸಾದ್, ನಿರ್ದೇಶಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News