ಎಫ್‌ಐಆರ್ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ನಟ ಅರ್ಜುನ್ ಸರ್ಜಾ

Update: 2018-10-30 15:14 GMT

ಬೆಂಗಳೂರು, ಅ.30: ಬಹುಭಾಷಾ ನಟ ಅರ್ಜುನ್ ಸರ್ಜಾ ತಮ್ಮ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ನಟಿ ಶ್ರುತಿ ಹರಿಹರನ್ ಅವರು ತಮ್ಮ ವಿರುದ್ಧ ಸುಳ್ಳು ದೂರನ್ನು ನೀಡಿದ್ದು, ಅವರು ನೀಡಿರುವ ದೂರನ್ನು ಸಿಆರ್‌ಪಿಸಿ 428 ಅಡಿಯಲ್ಲಿ ರದ್ದುಗೊಳಿಸಬೇಕು ಹಾಗೂ ಅರ್ಜಿ ಇತ್ಯರ್ಥವಾಗುವವರೆಗೂ ತನಿಖೆಗೆ ತಾತ್ಕಾಲಿಕವಾಗಿ ತಡೆ ನೀಡಬೇಕೆಂದು ಅರ್ಜುನ್ ಸರ್ಜಾ ಅವರು ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅರ್ಜಿ ಅ.31ರಂದು ವಿಚಾರಣೆಗೆ ಬರುವ ಸಾಧ್ಯತೆ ಇದ್ದು, ಈ ಅರ್ಜಿಯ ವಾದವನ್ನು ಹಿರಿಯ ವಕೀಲ ಬಿ.ವಿ.ಆಚಾರ್ಯ ನಡೆಸಲಿದ್ದಾರೆ ಎನ್ನಲಾಗಿದೆ.

ಅರ್ಜಿಯಲ್ಲಿ ಏನಿದೆ: ನಟಿ ಶ್ರುತಿ ಹರಿಹರನ್ ಅವರಿಂದ ತಡವಾಗಿ ದೂರು ಸಲ್ಲಿಕೆಯಾಗಿದೆ. ಅದು ಸುಳ್ಳು ದೂರು, ಸತ್ಯಕ್ಕೆ ದೂರವಾಗಿದ್ದು, ಅವರು ಮಾಡಿರುವ ಆರೋಪಕ್ಕೆ ಯಾವುದೇ ಸಾಕ್ಷಗಳಿಲ್ಲ. ಕೇವಲ ಪ್ರಚಾರಕ್ಕಾಗಿ ನಮ್ಮ(ಅರ್ಜುನ್ ಸರ್ಜಾ) ಮೇಲೆ ಆರೋಪ ಮಾಡಿದ್ಧಾರೆ.

ಅರ್ಜುನ್ ಸರ್ಜಾ 37 ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ಅವರು ಹನುಮಾನ್ ಭಕ್ತರಾಗಿದ್ದು, ಚೈನ್ನೆನಲ್ಲಿ 32 ಅಡಿ ಉದ್ದ ಹಾಗೂ 17 ಅಡಿ ಅಗಲದ ಆಂಜನೇಯ ಮೂರ್ತಿ ನಿರ್ಮಿಸುತ್ತಿದ್ದಾರೆ. ಹಿರಿಯರಿಂದ ಹಿಡಿದು ಕಿರಿಯರಿಗೂ ಗೌರವ ನೀಡುವ ವ್ಯಕ್ತಿತ್ವ ಹೊಂದಿದ್ದಾರೆ. ಶ್ರುತಿ ಆರೋಪ ಅಷ್ಟೊಂದು ಮಹತ್ವದ್ದಲ್ಲ. ಈ ಆರೋಪದಿಂದ ಅರ್ಜುನ್ ಸರ್ಜಾ ಕುಟುಂಬ ಮುಜುಗರಕ್ಕೆ ಈಡಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಶ್ರುತಿ ವಿರುದ್ಧ ಅರ್ಜುನ್ ಸರ್ಜಾ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 5 ಕೋಟಿ ರೂ.ಮಾನನಷ್ಟ ಮೊಕದ್ದಮೆಯನ್ನು ಸೆಷನ್ಸ್ ಕೋರ್ಟ್‌ನಲ್ಲಿ ಸಲ್ಲಿಸಲಾಗಿದೆ. ಈ ಪ್ರಕರಣ ಸೆಷನ್ಸ್ ಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದೆ. ಫಿಲ್ಮ್ ಛೇಂಬರ್‌ನಲ್ಲಿ ನಡೆದ ಸಭೆ ವೇಳೆ ಶ್ರುತಿ ಮೊಂಡು ವಾದ ಮಾಡಿ ಅಭಿಪ್ರಾಯ ಬದಲಾವಣೆ ಮಾಡಿದ್ಧಾರೆ ಎಂದು ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾರೆ.

ಅರ್ಜಿಯಲ್ಲಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಹಾಗೂ ನಟಿ ಶ್ರುತಿ ಹರಿಹರನ್ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News