ಶಾಸಕ ಮುನಿರತ್ನ ವಿರುದ್ಧದ ನಕಲಿ ಬಿಲ್ ಸೃಷ್ಟಿ ಪ್ರಕರಣ: ತನಿಖಾ ವರದಿ ಸಲ್ಲಿಸಲು ಹೈಕೋರ್ಟ್ ಸೂಚನೆ
ಬೆಂಗಳೂರು, ಅ.30: ಆರ್.ಆರ್.ನಗರ ಕಾಮಗಾರಿಗಳ ಬಹುಕೋಟಿ ನಕಲಿ ಬಿಲ್ ಸೃಷ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಮುನಿರತ್ನ, ಪತ್ನಿ ಮಂಜುಳ ಅವರನ್ನು ಆರೋಪದಿಂದ ಕೈಬಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಲೋಕಾಯುಕ್ತ ಪೊಲೀಸರಿಗೆ ತನಿಖಾ ವರದಿ ಸಲ್ಲಿಸಲು ಸೂಚನೆ ನೀಡಿದೆ.
ವಕೀಲ ಎನ್.ಪಿ.ಅಮೃತೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಸೂಚನೆ ನೀಡಿದೆ. ಅರ್ಜಿದಾರರ ಪರ ವಾದಿಸಿದ ವಕೀಲ ಪವನ್‌ಚಂದ್ರ ಶೆಟ್ಟಿ ಅವರು, ಶಾಸಕ ಮುನಿರತ್ನ, ಪತ್ನಿ ಮಂಜುಳ ಅವರಿಗೆ ಸೇರಿದ ಮನೆಯಲ್ಲಿ ಕಾಮಗಾರಿಗಳ ನಕಲಿ ಬಿಲ್‌ಗಳು ಪತ್ತೆಯಾಗಿದ್ದರೂ ಲೋಕಾಯುಕ್ತ ಪೊಲೀಸರು ಮುನಿರತ್ನ, ಮಂಜುಳ ಅವರನ್ನು ಆರೋಪದಿಂದ ಕೈಬಿಟ್ಟಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.
ಲೋಕಾಯುಕ್ತ ಪರವಾಗಿ ವಾದಿಸಿದ ವಕೀಲರು, ಲೋಕಾಯುಕ್ತ ತನಿಖೆಯು ಇನ್ನೂ ಪೂರ್ಣವಾಗಿಲ್ಲ. ತನಿಖೆ ಪ್ರಗತಿಯಲ್ಲಿದೆ ಎಂದು ಪೀಠಕ್ಕೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಲೋಕಾಯುಕ್ತ ಪೊಲೀಸರಿಗೆ ತನಿಖಾ ವರದಿ ಸಲ್ಲಿಸಲು ಸೂಚಿಸಿ, ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿತು.