ಸುಲಿಗೆ ಪ್ರಕರಣ: ಮೂವರ ಬಂಧನ
ಬೆಂಗಳೂರು, ಅ.30: ಜೈಲಿನಿಂದ ಜಾಮೀನಿನ ಮೇಲೆ ಹೊರಬಂದು, ಸುಲಿಗೆ ಮಾಡುತ್ತಿದ್ದ ಆರೋಪದಡಿ ಮೂವರನ್ನು ಇಲ್ಲಿನ ಗಿರಿನಗರ ಠಾಣಾ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ನಗರದ ನಿವಾಸಿಗಳಾದ ಶ್ರೀಧರ್, ಭರತ್ ಹಾಗೂ ಪವನ್ ಎಂಬುವರು ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ರಾತ್ರಿ 9:30ರ ವೇಳೆ ಜೈಲಿನಿಂದ ಬಿಡುಗಡೆಯಾಗಿ ಬಂದ ಶ್ರೀಧರ್, ಐವರ ಜೊತೆ ಸೇರಿ ಎರಡು ಬೈಕ್‌ಗಳಲ್ಲಿ ಸುತ್ತಾಡುತ್ತಾ, ಪೀಣ್ಯ, ಚೆನ್ನಮ್ಮನಕೆರೆ ಅಚ್ಚುಕಟ್ಟುಗಳಲ್ಲಿ ಸುಲಿಗೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿ ಶ್ರೀಧರ್‌ನ ಗುಂಪಿನ ಸದಸ್ಯರ ಪೈಕಿ ಸುಲಿಗೆ ಮಾಡುತ್ತಿದ್ದ ಇನ್ನೂ ಮೂವರು ಪರಾರಿಯಾಗಿದ್ದು, ಅವರಿಗಾಗಿ ತೀವ್ರಶೋಧ ನಡೆಸಲಾಗಿದೆ. ಶ್ರೀಧರ್ ಸೇರಿ ಮೂವರು ದೋಚಿದ್ದ ಮೊಬೈಲ್, ಚಿನ್ನದ ಸರವನ್ನು ಜಪ್ತಿ ಮಾಡಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ತಿಳಿಸಿದ್ದಾರೆ.