ವಿದೇಶಿ ಕಂಪೆನಿಗಳ ಗುಲಾಮಗಿರಿಯಲ್ಲಿ ಮೋದಿ ಸರಕಾರ: ಸಿಐಟಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತಪನ್ ಸೇನ್

Update: 2018-10-30 16:47 GMT

ಬೆಂಗಳೂರು, ಅ.30: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ವಿದೇಶಿ ಕಂಪೆನಿಗಳ ಗುಲಾಮಗಿರಿಯಲ್ಲಿ ತೊಡಗಿದೆ ಎಂದು ಸಿಐಟಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ಹೇಳಿದರು.

ಮಂಗಳವಾರ ಕೆಜಿ ರಸ್ತೆಯ ಶಿಕ್ಷಕರ ಸದನ ಸಭಾಂಗಣದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ(ಕರ್ನಾಟಕ) ಆಯೋಜಿಸಿದ್ದ, ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ರಾಜ್ಯ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೇಂದ್ರ ಸರಕಾರ ಬಡವರ, ದುಡಿಯುವ ವರ್ಗದವರ ಪರವಾಗಿಲ್ಲ. ಬದಲಿಗೆ ಕಾರ್ಪೊರೇಟ್ ಉದ್ಯಮಿಗಳಿಗೆ ಅನುಕೂಲ ಮಾಡಿ ಕೊಡಲು ಇದೆ. ಅಷ್ಟೇ ಅಲ್ಲದೆ, ಕಾರ್ಮಿಕರ ಕಾನೂನುಗಳಿಗೆ ತಿದ್ದುಪಡಿ ಮಾಡಿ, ಅವರ ದುಡಿಮೆಯನ್ನು ಕಿತ್ತುಕೊಳ್ಳಲು ಮುಂದಾಗಿದೆ ಎಂದು ಆರೋಪಿಸಿದರು.

ಕೇಂದ್ರ ಹಾಗೂ ರಾಜ್ಯ ಸರಕಾರಗಳ ಗುಲಾಮಗಿರಿ ನೀತಿ ಪ್ರತಿಭಟಿಸುವ ಮೂಲಕ ತಿದ್ದುಪಡಿ ಮಾಡಿ ಜಾರಿಗೆ ತರಲು ಹೊರಟಿರುವ ಕಾನೂನುಗಳನ್ನು ತಡೆಯಬೇಕಿದೆ. ಒಂದೊಮ್ಮೆ ಅವುಗಳನ್ನು ಜಾರಿಗೆ ತಂದರೆ ಕೈಗಾರಿಕೆಗಳನ್ನು ಹೇಗೆ ನಡೆಸುತ್ತೀರಿ ಎನ್ನುವ ಉತ್ತರ ನೀಡಬೇಕಿದೆ. ಅಷ್ಟೇ ಅಲ್ಲದೆ, ಅಸಂಘಟಿತ ವಲಯದಲ್ಲಿನ ಕಾರ್ಮಿಕರಿಂದ ಉದ್ಯಮಿಗಳ ಲಾಭ ಹೆಚ್ಚುತ್ತಿದೆ. ಕಾರ್ಮಿಕರಿಲ್ಲದೆ ಕೈಗಾರಿಕೆಗಳು ನಡೆಯವು ಎನ್ನುವುದನ್ನು ಅವರು ಅರಿತುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ರಫೇಲ್ ಯುದ್ದ ವಿಮಾನ ಖರೀದಿ ಒಂದೇ ಮೋದಿ ಸರಕಾರದ ಭ್ರಷ್ಟಾಚಾರವಲ್ಲ. ಈ ಆಡಳಿತದಲ್ಲಿ ದೇಶದ ಸ್ವಾವಲಂಬನೆಗೆ ಅಪಾಯ ತಂದಿಟ್ಟ ಬಹುಮುಖ್ಯ ಸಂಗತಿ. ಜನ ಸಂಕಷ್ಟ ಎದುರಿಸುವಾಗ, ದೇಶವೇ ಅಪಾಯದಲ್ಲಿ ಇರುವಾಗ ನಾವು ಕೈಕಟ್ಟಿ ಕುಳಿತುಕೊಳ್ಳಲಾಗದು. ಉದ್ಯೋಗ ಕಡಿತವಾಗಿದೆ, ರಕ್ಷಣೆ ಒಳಗೊಂಡು ಖಾಸಗಿಕರಣಕ್ಕೆ ತುತ್ತಾಗುತ್ತಿದೆ, ಯಾವುದೇ ಭರವಸೆ ಈಡೇರಿಲ್ಲ. ಹಾಗಾಗಿ, ಅಖಿಲ ಭಾರತದಲ್ಲಿ ಮುಷ್ಕರದ ಮೂಲಕ ಕೇಂದ್ರ ಸರಕಾರಕ್ಕೆ ಉತ್ತರಿಸೋಣ ಎಂದು ತಿಳಿಸಿದರು.

ಸಮಾವೇಶದಲ್ಲಿ ಐಎನ್‌ಟಿಯುಸಿ ರಾಷ್ಟ್ರೀಯ ಅಧ್ಯಕ್ಷ ಡಾ.ಸಂಜೀವರೆಡ್ಡಿ, ಎಚ್‌ಎಂಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗನಾಥ್, ಎಐಟಿಯುಟಿಯುಸಿ ರಾಷ್ಟ್ರೀಯ ಅಧ್ಯಕ್ಷ ಕೆ.ರಾಧಾಕೃಷ್ಣ, ಟಿಯುಸಿಸಿ ರಾಷ್ಟ್ರೀಯ ಅಧ್ಯಕ್ಷ ಜಿ.ಆರ್. ಶಿವಶಂಕರ್, ಎಐಸಿಸಿಯುಟಿ ರಾಷ್ಟ್ರೀಯ ಉಪಾಧ್ಯಕ್ಷ ಬಾಲನ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News