ಗಾಲಿ ಜನಾರ್ದನ ರೆಡ್ಡಿ ಬಿಜೆಪಿಯಲ್ಲಿದ್ದಾರೆಯೇ?: ಸ್ಪಷ್ಟನೆ ನೀಡಲು ಬಿಎಸ್‌ವೈಗೆ ಡಿ.ಕೆ.ಶಿವಕುಮಾರ್ ಆಗ್ರಹ

Update: 2018-10-31 13:32 GMT

ಬೆಂಗಳೂರು, ಅ. 31: ‘ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರನ ಸಾವು, ದೇವರು ಅವರಿಗೆ ಕೊಟ್ಟ ಶಿಕ್ಷೆ’ ಎಂಬ ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿಕೆ ಸಾಮಾಜಿಕ ಜಾಲತಾಣ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.

ತನ್ನ ಹೇಳಿಕೆ ಭಾರೀ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ಕ್ಷಮೆ ಕೋರಿದ್ದಾರೆ. ಈ ಮಧ್ಯೆ ಜನಾರ್ದನ ರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ‘ಕ್ಷಮಿಸುವುದು ದೊಡ್ಡ ಗುಣ. ಆದರೆ, ನನ್ನ ಮಗನ ಸಾವಿನ ಬಗ್ಗೆ ಮಾತನಾಡಿರುವುದನ್ನು ಸಮಾಜದಲ್ಲಿ ಯಾರಾದಾರೂ ಸಹಿಸಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.

ದುಃಖ ಅವರಿಗಷ್ಟೇ ಗೊತ್ತು: ‘ಸಾವಿನ ವಿಚಾರದಲ್ಲಿ ಯಾರೂ ಹಗುರವಾಗಿ ಮಾತನಾಡಬಾರದು. ಅದು ನಮ್ಮ ಸಾವಾದರೂ ಅಷ್ಟೇ, ಬೇರೆಯವರ ಸಾವಾದರೂ ಅಷ್ಟೇ. ಸಾವಾದವರ ಮನೆಗೆ ಮಾತ್ರ ಕಳೆದುಕೊಂಡವರ ದುಃಖ ಗೊತ್ತಿರುತ್ತದೆ’ ಎಂದು ಮಾಜಿ ಸಚಿವ ಎಸ್.ಸುರೇಶ್ ಕುಮಾರ್, ಜನಾರ್ದನ ರೆಡ್ಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ರಾಜಕೀಯ ವಿಶೇಷವಾಗಿ ಚುನಾವಣಾ ಭಾಷಣದ ಮಟ್ಟವನ್ನ ಮತ್ತೊಮ್ಮೆ ಅವಲೋಕಿಸಬೇಕಿದೆ. ಯಾವುದೇ ರೀತಿಯಿಂದ ಕೆಳಗೆ ಬೀಳದಂತೆ, ತಪ್ಪು ಸಂದೇಶ ರವಾನೆಯಾಗದಂತೆ ನೋಡಿಕೊಳ್ಳುವುದು ಎಲ್ಲರ ಕರ್ತವ್ಯ. ರೆಡ್ಡಿ ಈಗಾಗಲೇ ಸ್ಪಷ್ಟಣೆ ನೀಡಿದ್ದರೂ, ಇಂತಹ ಹೇಳಿಕೆ ಸಲ್ಲ’ ಎಂದು ಸುರೇಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಬಿಎಸ್‌ವೈ ಸ್ಪಷ್ಟನೆ ನೀಡಲಿ: ‘ಜನಾರ್ದನ ರೆಡ್ಡಿಯವರ ಕ್ಷಮಾಪಣೆ ಅವಶ್ಯಕತೆ ಇಲ್ಲ. ಕೊಲೆ ಮಾಡಿದ ಮೇಲೆ ಕ್ಷಮಾಪಣೆ ಕೇಳಿದ್ರೆ ಏನ್ ಬಂತು. ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು. ಈ ಬಗ್ಗೆ ಶ್ರೀರಾಮುಲು, ಬಿಎಸ್‌ವೈ ಕ್ಷಮಾಪಣೆ ಕೇಳಬೇಕು’ ಎಂದು ಸಚಿವ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಿವಕುಮಾರ್, ‘ಜನಾರ್ದನ ರೆಡ್ಡಿ ನಮ್ಮ ಪಕ್ಷದ ಸದಸ್ಯರಲ್ಲ’ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ. ಆದರೆ, ಇಂತಹ ಹೇಳಿಕೆ ನೀಡುವ ರೆಡ್ಡಿಗೆ ಸಂಸ್ಕೃತಿ, ಸಂಸ್ಕಾರ ಯಾವುದು ಇಲ್ಲ. ಮನುಷ್ಯತ್ವವೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನಾರ್ದನ ರೆಡ್ಡಿ ಬಿಜೆಪಿಯಲ್ಲಿ ಇದ್ದಾರೋ ಇಲ್ಲವೋ ಎಂಬುದನ್ನು ಆ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಶಾಸಕ ಶ್ರೀರಾಮುಲು ಮತ್ತು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕೂಡಲೇ ಸ್ಪಷ್ಟನೆ ನೀಡಬೇಕು ಎಂದು ಡಿ.ಕೆ.ಶಿವಕುಮಾರ್ ಒತ್ತಾಯಿಸಿದರು.

ಕೀಳುಮಟ್ಟದ ರಾಜಕೀಯ: ಜನಾರ್ದನ ರೆಡ್ಡಿ ಹೇಳಿಕೆ ಅತ್ಯಂತ ಕೀಳುಮಟ್ಟದ ರಾಜಕಾರಣ. ಯಾರೇ ಆದರೂ, ವೈಯಕ್ತಿಕ ವಿಚಾರಗಳನ್ನ ಮಾತನಾಡಬಾರದು. ವೈಯಕ್ತಿಕ ವಿಚಾರ ಮಾತನಾಡುವುದು ಯಾರಿಗೂ ಶೋಭೆ ತರುವುದಿಲ್ಲ. ಇದು ಕೀಳುಮಟ್ಟದ ಹೇಳಿಕೆ’ ಎಂದು ಕೃಷಿ ಸಚಿವ ಶಿವಶಂಕರ ರೆಡ್ಡಿ ಟೀಕಿಸಿದ್ದಾರೆ.

ಜನಾರ್ದನ ರೆಡ್ಡಿ ತನ್ನ ಹೇಳಿಕೆಗೆ ಕ್ಷಮೆ ಕೋರಿದ್ದು, ಕ್ಷಮಿಸುವುದು ದೊಡ್ಡ ಗುಣ. ಆದರೆ, ನನ್ನ ಮಗನ ಸಾವಿನ ಬಗ್ಗೆ ಮಾತನಾಡಿರುವುದನ್ನು ಸಹಿಸಲು ಸಾಧ್ಯವೇ? ನಾನು ಹೇಳಿದ ತಕ್ಷಣವೇ ಯಾರನ್ನಾದರೂ ಜೈಲಿಗೆ ಕಳುಹಿಸಲು ಸಾಧ್ಯವೇ? ಅವರು ಜೈಲಿಗೆ ಹೋಗಿದ್ದು, ಅವರು ಮಾಡಿದ ಅಕ್ರಮದಿಂದ. ರೆಡ್ಡಿ, ಸಂಸ್ಕೃತಿ-ಮಾನವೀಯತೆ ಗೊತ್ತಿಲ್ಲದ ವ್ಯಕ್ತಿ. ಕ್ರಿಮಿನಲ್ ಆಗಿ ಯೋಚನೆ ಮಾಡುವ ವ್ಯಕ್ತಿಗೆ ಅದೇ ರೀತಿಯ ಯೋಚನೆಗಳು ಬರುತ್ತದೆ. ಚುನಾವಣೆ ವೇಳೆ ಟೀಕೆ ಸಹಜ. ಆದರೆ, ವೈಯಕ್ತಿಕವಾಗಿ ಕುಟುಂಬವನ್ನು ಗುರಿಯಾಗಿಸುವುದು ಸರಿಯಲ್ಲ’

-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News