ನ್ಯಾ.ಎ.ಜೆ.ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ
ಬೆಂಗಳೂರು, ಅ.31: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಆಗ್ರಹಿಸಿ ಮಾದಿಗ ದಂಡೋರದಿಂದ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿಂದು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು.
ದಲಿತ ಸಮುದಾಯಗಳ ಒಳ ಮೀಸಲಾತಿಗೆ ಸಂಬಂಧಿಸಿದಂತೆ ಎ.ಜೆ.ಸದಾಶಿವ ನೇತೃತ್ವದಲ್ಲಿನ ಸಮಿತಿ ಸರಕಾರಕ್ಕೆ ವರದಿ ಸಲ್ಲಿಸಿ 10 ವರ್ಷಗಳಿಗೂ ಅಧಿಕವಾಗುತ್ತಿದ್ದರೂ ನಮ್ಮನ್ನು ಆಳುತ್ತಿರುವ ಸರಕಾರಗಳು ಅದನ್ನು ಜಾರಿ ಮಾಡಲು ಮುಂದಾಗಿಲ್ಲ. ಈ ಮೂಲಕ ದಲಿತ ವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥಾಪಕ ರಾಷ್ಟ್ರಾಧ್ಯಕ್ಷ ಮಂದಕೃಷ್ಣ, ರಾಜ್ಯದಲ್ಲಿ ಅಧಿಕಾರ ನಡೆಸಿದ ಹಾಗೂ ನಡೆಸುತ್ತಿರುವ ಸರಕಾರಗಳು ದಲಿತರನ್ನು ಸಾಮಾಜಿಕವಾಗಿ ಹಿಂದುಳಿಯುವಂತೆ ಮಾಡಲು ಸತತವಾದ ಪ್ರಯತ್ನ ಮಾಡುತ್ತಿವೆ. ದಲಿತರು ಅಭಿವೃದ್ಧಿಯಾಗುವುದಕ್ಕೆ ನಿರಂತರವಾಗಿ ಅಡ್ಡಗಾಲು ಹಾಕುತ್ತಿದ್ದು, ದಲಿತರನ್ನು ವಂಚಿಸಲಾಗುತ್ತಿದೆ ಎಂದು ದೂರಿದರು.
ಆಂಧ್ರಪ್ರದೇಶದಲ್ಲಿ ಉಷಾಮೇರಾ ಸಮಿತಿ, ತಮಿಳುನಾಡಿನಲ್ಲಿ ನ್ಯಾ.ಜನಾರ್ಧನ ಸಮಿತಿ ವರದಿಗಳನ್ನು ಅಲ್ಲಿನ ಸರಕಾರಗಳು ದಲಿತರಲ್ಲಿ ಜನಸಂಖ್ಯಾವಾರು ಮೀಸಲಾತಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿವೆ. ಅದರ ಪ್ರಕಾರ ರಾಜ್ಯ ಸರಕಾರವೂ ಸದಾಶಿವ ಆಯೋಗವನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಬೇಕಿತ್ತು. ಆದರೆ, ಇದುವರೆಗೂ ವರದಿಯನ್ನು ವಿಧಾನಸಭೆಯಲ್ಲಿ ಚರ್ಚೆಗೆ ತರದಿರುವುದು ದುರದೃಷ್ಟಕರ ಎಂದು ಅವರು ಕಿಡಿಕಾರಿದರು.
ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕದಲ್ಲಿ ಹತ್ತಾರು ವರ್ಷಗಳಿಂದ ನಿರಂತರವಾದ ಚಳವಳಿ ನಡೆಯುತ್ತಿದೆ. ಆದರೆ, ನಮ್ಮನ್ನಾಳುವವರು ದಲಿತರ ಹೋರಾಟವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದ ಅವರು, ಕೂಡಲೇ ವರದಿಯನ್ನು ಜಾರಿ ಮಾಡಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಇಲ್ಲದಿದ್ದರೆ, ಅದಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದರು.
ದಂಡೋರದ ಅಧ್ಯಕ್ಷ ನರಸಪ್ಪ ಮಾತನಾಡಿ, ರಾಜ್ಯದಲ್ಲಿ 70-80 ರ ದಶಕದಲ್ಲಿ ವಿಧಾನಸಭೆಗೆ 20 ಕ್ಕೂ ಅಧಿಕ ದಲಿತರು ಶಾಸಕರಾಗಿ ಆಯ್ಕೆಯಾಗುತ್ತಿದ್ದರು. ಕನಿಷ್ಠ ಎರಡರಿಂದ ಮೂರು ಸಂಪುಟ ದರ್ಜೆಯ ಸ್ಥಾನ ನಮ್ಮ ಸಮುದಾಯಕ್ಕೆ ಮೀಸಲಿದ್ದವು ಎಂದ ಅವರು, ಯಾವ ಶೋಷಣೆಗೂ ಒಳಗಾಗದ ಅಸ್ಪಶ್ಯ ಸೋಂಕು ಅಟ್ಟಿಕೊಳ್ಳದ, ಸಮಾಜದಲ್ಲಿ ಮೇಲ್ಜಾತಿ ಜನರೊಂದಿಗೆ ಸರಿ ಸಮಾನವಾಗಿ ಬದುಕುತ್ತಿರುವ ಸ್ಪರ್ಶರು ನಮ್ಮ ಪಾಲಿನ ಅನ್ನವನ್ನು ಕಿತ್ತು ತಿನ್ನುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರಕಾರ ಕೂಡಲೇ ಸಚಿವ ಸಂಪುಟ ಸಭೆಯನ್ನು ಕರೆದು ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಅಂಗೀಕಾರ ಮಾಡಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕು. ಮಾದಿಗ ಜನಾಂಗಕ್ಕೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಅವರು ಇದೇ ವೇಳೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಕೆ.ಬಿ.ನರಸಿಂಹ, ರಾಜ್ಯ ಉಪಾಧ್ಯಕ್ಷ ಎಂ.ಸಿ.ಶ್ರೀನಿವಾಸ, ಕಾರ್ಯದರ್ಶಿ ಜೆ.ಎಂ.ದೇವರಾಜ, ಜಿಲ್ಲಾಧ್ಯಕ್ಷ ಎಸ್.ರಾಮಕೃಷ್ಣ, ಏಕಾಂತಪ್ಪ, ರಾಮಪ್ಪ, ಬಿ.ಎನ್.ಪ್ರಸಾದ್, ನರಸಿಂಹ ರವಿ, ವೇಣು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.