×
Ad

ರಾಷ್ಟ್ರೀಯ ಏಕತಾ ದಿವಸ್: ಸಚಿವ ಶಿವಶಂಕರರೆಡ್ಡಿ ಅವರಿಂದ ಪ್ರತಿಜ್ಞಾವಿಧಿ ಬೋಧನೆ

Update: 2018-10-31 19:33 IST

ಬೆಂಗಳೂರು, ಅ. 31: ರಾಷ್ಟ್ರೀಯ ಏಕತಾ ದಿವಸದ ಅಂಗವಾಗಿ ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಅವರು, ಸಚಿವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ದೂರದೃಷ್ಟಿ ಮತ್ತು ಕಾರ್ಯಕ್ಷಮತೆಯಿಂದ ಸಾಧಿಸಿದ ರಾಷ್ಟ್ರೀಯ ಏಕೀಕರಣ ಸ್ಫೂರ್ತಿಯನ್ನು ಕಾಪಾಡುತ್ತೇನೆ. ರಾಷ್ಟ್ರದ ಆಂತರಿಕ ಭದ್ರತೆಯನ್ನು ಖಾತ್ರಿಪಡಿಸಲು ನಾನು ನನ್ನದೇ ಆದ ಕೊಡುಗೆಯನ್ನು ನೀಡುತ್ತೇನೆ. ಅಲ್ಲದೆ, ರಾಷ್ಟ್ರದ ಐಕ್ಯತೆ, ಸಮಗ್ರತೆ ಮತ್ತು ಭದ್ರತೆಯನ್ನು ಕಾಪಾಡಲು ನನ್ನನ್ನು ಅರ್ಪಿಸಿಕೊಳ್ಳುತ್ತೇನೆ ಹಾಗೂ ನನ್ನ ದೇಶ ಬಾಂಧವರಲ್ಲಿ ಈ ಸಂದೇಶವನ್ನು ಸಾರಲು ಶ್ರಮಿಸುತ್ತೇನೆ’ ಎಂದು ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಪ್ರತಿಜ್ಞಾವಿಧಿ ಬೋಧಿಸಿದರು.

ಆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಶಂಕರ್ ರೆಡ್ಡಿ, ಭಾರತ ದೇಶವನ್ನು ಏಕೀಕರಣಗೊಳಿಸಲು ಸರ್ದಾರ್ ವಲ್ಲಭಬಾಯ್ ಪಟೇಲ್‌ರ ಕೊಡುಗೆ ಅಪಾರ. ಹರಿದು-ಹಂಚಿಹೋಗಿದ್ದ ದೇಶವನ್ನು ಒಗ್ಗೂಡಿಸಿದ ಕೀರ್ತಿ ಸರ್ದಾರ್ ವಲ್ಲಭಬಾಯ್ ಪಟೇಲ್‌ರಿಗೆ ಸಲ್ಲುತ್ತದೆ. ಸರ್ದಾರ್ ವಲ್ಲಭ ಬಾಯ್ ಪಟೇಲ್ ಅವರ ತತ್ವ, ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ದೇಶದ ಉದ್ದಗಲಕ್ಕೂ ಅವರ ಸಂದೇಶಗಳನ್ನು ಪ್ರಚಾರಪಡಿಸುವ ಅಗತ್ಯವಿದೆ ಎಂದು ಶಿವಶಂಕರ್ ರೆಡ್ಡಿ ಇದೇ ವೇಳೆ ಸಚಿವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕರೆ ನೀಡಿದರು.

ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐಎಸ್‌ಎನ್ ಪ್ರಸಾದ್, ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್‌ಸಿಂಗ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪ್ರಧಾನ ಕಾರ್ಯದರ್ಶಿ ಅಂಜುಂ ಪರ್ವೆಜ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News