ಬೈಕ್ ಕಳ್ಳತನ ಪ್ರಕರಣ: ಓರ್ವನ ಬಂಧನ, 16 ಲಕ್ಷ ರೂ. ಮೌಲ್ಯದ 22 ಬೈಕ್ ಜಪ್ತಿ
ಬೆಂಗಳೂರು, ಅ.31: ಬೈಕ್ ಕಳ್ಳತನ ಪ್ರಕರಣವನ್ನು ಭೇದಿಸಿರುವ ವೈಟ್‌ಫೀಲ್ಡ್ ವಿಭಾಗದ ಮಾರತ್ತಹಳ್ಳಿ ಠಾಣಾ ಪೊಲೀಸರು, ಆರೋಪಿಯೋರ್ವನನ್ನು ಬಂಧಿಸಿ, 16 ಲಕ್ಷ ರೂ. ಮೌಲ್ಯದ 22 ಬೈಕ್‌ಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಪರಪ್ಪನ ಅಗ್ರಹಾರ ಸಮೀಪದ ರಾಯಸಂದ್ರ ನಿವಾಸಿ ಭಾಗ್ಯರಾಜ್ ಯಾನೆ ಏಳುಮಲೈ(20) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಬೈಕ್ ಕಳವು ಆಗಿದ್ದ ಪ್ರಕರಣ ಸಂಬಂಧ ಆರೋಪಿ ಅನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಸರಣಿ ಬೈಕ್‌ಗಳ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಈತನ ವಶದಲ್ಲಿದ್ದ 16 ಲಕ್ಷ ರೂ. ಮೌಲ್ಯದ 22 ಬೈಕ್‌ಗಳನ್ನು ಜಪ್ತಿ ಮಾಡಲಾಗಿದ್ದು, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ಸೇರಿದಂತೆ ಒಟ್ಟು ಆರು ಪೊಲೀಸ್ ಠಾಣೆಗಳಲ್ಲಿ ಬೈಕ್ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ.
ಆರೋಪಿ ಮಹಾದೇವಪುರ ಪೊಲೀಸ್ ಠಾಣೆಯ ಪ್ರಕರಣಯೊಂದರ ವಾರೆಂಟ್‌ಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿರುವುದು ಬೆಳಕಿಗೆ ಬಂದಿದೆ. ಕಾರ್ಯಾಚರಣೆ ನಡೆಸಿದ ಮಾರತ್ತಹಳ್ಳಿ ಉಪ ವಿಭಾಗದ ಎಸಿಪಿ, ಮಾರತ್ತಹಳ್ಳಿ ಠಾಣೆ ಪಿಎಸ್ಸೈ ಗುರುಪ್ರಸಾದ್, ಪೊಲೀಸ್ ಸಿಬ್ಬಂದಿಗಳಾದ ಚಂದ್ರಕುಮಾರ್, ಅಂತೋಣಿ, ರಾಘವೇಂದ್ರ, ಜಗದೀಶ್, ಮಹದೇವ ಅರ್ಜುನ್ ನಾಯಕ್‌ಮ ರೋಷನ್ ಅವರನ್ನು ಡಿಸಿಪಿ ಅಬ್ದುಲ್ ಅಹದ್ ಪ್ರಶಂಸಿಸಿದ್ದಾರೆ.