ದೀಪಾವಳಿ ಹಬ್ಬಕ್ಕೂ ಮೊದಲೆ ನಗರವನ್ನು ಕಸ ಮುಕ್ತಗೊಳಿಸಿ: ಬಿಬಿಎಂಪಿಗೆ ಹೈಕೋರ್ಟ್ ಸೂಚನೆ

Update: 2018-10-31 15:31 GMT

ಬೆಂಗಳೂರು, ಅ.31: ಬಿಬಿಎಂಪಿ ವ್ಯಾಪ್ತಿಯಲ್ಲಿನ ಕಸ ವಿಲೇವಾರಿ ವಿಚಾರಕ್ಕೆ ಸಂಬಂಧಿಸಿದಂತೆ ದೀಪಾವಳಿ ಹಬ್ಬಕ್ಕೂ ಮೊದಲೇ ಬೆಂಗಳೂರನ್ನು ಕಸ ಮುಕ್ತ ನಗರವನ್ನಾಗಿಸಿ ಎಂದು ಹೈಕೋರ್ಟ್ ಬಿಬಿಎಂಪಿಗೆ ಸೂಚನೆ ನೀಡಿದೆ.

ಕಸ ವಿಲೇವಾರಿ ಕೋರಿ ನರಸಿಂಹಮೂರ್ತಿ ಸೇರಿ 11 ಜನರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಸುಜಾತ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ಸೂಚನೆ ನೀಡಿದೆ. ಬಿಬಿಎಂಪಿ ಪರ ವಾದಿಸಿದ ಹಿರಿಯ ವಕೀಲ ಪ್ರಶಾಂತರೆಡ್ಡಿ ಅವರು, ಈಗಾಗಲೇ ಬೆಂಗಳೂರು ನಗರವನ್ನು ಶೇ.95ರಷ್ಟು ಕಸ ಮುಕ್ತಗೊಳಿಸಲಾಗಿದ್ದು, ಶೇ.5ರಷ್ಟು ಮಾತ್ರ ಕಸ ವಿಲೇವಾರಿ ಆಗದೆ ಹಾಗೆಯೇ ಉಳಿದಿದೆ. ಇದನ್ನೂ 48ಗಂಟೆಯಲ್ಲಿ ವಿಲೇವಾರಿ ಮಾಡಲಾಗುವುದು ಎಂದು ಪೀಠಕ್ಕೆ ತಿಳಿಸಿದರು.

ಅರ್ಜಿದಾರರ ಪರ ವಾದಿಸಿದ ವಕೀಲರು, ನಗರದಲ್ಲಿ ಕಸ ಉಳಿದಿರುವ ಜಾಗವನ್ನು ಗುರುತಿಸಿ ಸ್ನೇಹಿತರು ನಮ್ಮ ಮೊಬೈಲ್‌ಗೆ ಫೋಟೋಗಳನ್ನು ಕಳುಹಿಸಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಈ ಫೋಟೋಗಳನ್ನು ಬಿಬಿಎಂಪಿ ಪರ ವಕೀಲರಿಗೆ ತೋರಿಸಿ ಹಾಗೂ ಇಂದು ಮಧ್ಯಾಹ್ನ 3ಗಂಟೆ ಒಳಗಡೆ ನಗರದಲ್ಲಿ ಎಲ್ಲಿಯಾದರೂ ಕಸ ಉಳಿದಿದ್ದರೆ ವಿಡಿಯೋ ಕಾಲ್ ಮಾಡಿ ತಿಳಿದುಕೊಂಡು ಬಿಬಿಎಂಪಿ ಪರ ವಕೀಲರ ಗಮನಕ್ಕೆ ತನ್ನಿ ಎಂದು ತಿಳಿಸಿತು.

ನಗರದ ಸಿಗ್ನಲ್‌ಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿರುವುದರಿಂದ ವಾಹನ ಸವಾರರು ಸಿಗ್ನಲ್‌ಗಳನ್ನು ಜಂಪ ಮಾಡಲು ಹೆದರುತ್ತಾರೆ. ಅದೇ ರೀತಿಯಾಗಿ ನಗರವನ್ನು ಕಸ ಮುಕ್ತಗೊಳಿಸಲು ನಗರದಲ್ಲಿ ಈಗಾಗಲೇ ಇರುವ ಸಿಸಿಟಿವಿ ಕ್ಯಾಮರಾಗಳನ್ನು ಸದುಪಯೋಗಪಡಿದುಕೊಳ್ಳಿ ಹಾಗೂ ಗೃಹ ರಕ್ಷಕದಳದ ಸಿಬ್ಬಂದಿಗಳನ್ನು ನೇಮಕ ಮಾಡಿ ಎಂದು ನ್ಯಾಯಪೀಠವು ಬಿಬಿಎಂಪಿ ಪರ ವಕೀಲರಿಗೆ ವೌಖಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿತು. ಮಧ್ಯಾಹ್ನ 3 ಗಂಟೆಗೆ ಕೋರ್ಟ್ ಕಲಾಪ ಆರಂಭವಾದಾಗ ಅರ್ಜಿದಾರರ ಪರ ವಕೀಲರು ನಗರದಲ್ಲಿ ಕಸ ಸಂಗ್ರಹವಾಗಿರುವ ಬಗ್ಗೆ ಯಾವುದೆ ಮಾಹಿತಿ ಬಂದಿಲ್ಲ ಎಂದು ಪೀಠಕ್ಕೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ದೀಪಾವಳಿ ಹಬ್ಬದ ಮುಂಚಿತವಾಗಿಯೇ ಬೆಂಗಳೂರು ನಗರವನ್ನು ಕಸ ಮುಕ್ತ ನಗರವನ್ನಾಗಿಸಿ ಎಂದು ಸೂಚಿಸಿ, ವಿಚಾಣೆಯನ್ನು ನ.5ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News