ಹಿಂದೂ ಧಾರ್ಮಿಕ ಆಚರಣೆಗಳನ್ನು ಹಿಂದೂಗಳೇ ನೆರವೇರಿಸಬೇಕು: ವಿವೇಕರೆಡ್ಡಿಯಿಂದ ಹೈಕೋರ್ಟ್‌ಗೆ ಹೇಳಿಕೆ

Update: 2018-10-31 15:33 GMT

ಬೆಂಗಳೂರು, ಅ.31: ಮುಸ್ಲಿಂ ಧರ್ಮ ಗುರುಗಳು ಹಿಂದೂ ದೇವಾಲಯಗಳಲ್ಲಿ ಪೂಜೆ ಸಲ್ಲಿಸುವುದು ಸಮಂಜಸ ಅಲ್ಲ ಎಂದು ಹಿರಿಯ ವಕೀಲ ವಿವೇಕ ರೆಡ್ಡಿ ಹೈಕೋರ್ಟ್‌ಗೆ ತಿಳಿಸಿದರು.

ಬಾಬಾಬುಡನ್ ಗಿರಿ ದತ್ತಾತ್ರೇಯ ಪೀಠದಲ್ಲಿ ಮುಜಾವರ್‌ಗೆ ಮಾತ್ರ ಪೂಜೆಗೆ ಅವಕಾಶ ನೀಡಿರುವ ಆದೇಶ ಪ್ರಶ್ನಿಸಿ ಶ್ರೀಗುರು ದತ್ತಾತ್ರೇಯಪೀಠ ದೇವಸ್ಥಾನ ಸಂವರ್ಧನಾ ಸಮಿತಿಯ ಟ್ರಸ್ಟಿ ಯೋಗಿಶ್ ರಾಜ್ ಅರಸ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ವಿವೇಕ ರೆಡ್ಡಿ, ಮುಜಾವರ್ ನೇಮಕ ಕಾನೂನು ಬಾಹಿರವಾಗಿದೆ. ಹಿಂದೂ ದೇಗುಲದಲ್ಲಿ ಮುಸ್ಲಿಂ ಧರ್ಮಗುರು ಪೂಜೆ ಸಲ್ಲಿಸುವುದು ಎಷ್ಟು ಸರಿ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಇದೊಂದು ಸೂಕ್ಷ್ಮ ಮತ್ತು ಜನರ ಭಾವನೆಗಳಿಗೆ ಸಂಬಂಧಿಸಿದ ವಿಚಾರ. ಹಿಂದೂ ಮತ್ತು ಮುಸ್ಲಿಂ ಧರ್ಮಗಳ ನಡುವೆ ಸಾಮರಸ್ಯ ಕಾಯ್ದು ಕೊಳ್ಳುವಂತಹ ರೀತಿಯಲ್ಲಿ ಈ ವ್ಯಾಜ್ಯಕ್ಕೆ ಕೋರ್ಟ್ ಹೊರಗೆ ಪರಿಹಾರ ಕಂಡುಕೊಳ್ಳ ಬಹುದಲ್ಲವೇ ಎಂಬ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತು.

ಇದಕ್ಕೆ ವಿವೇಕ ರೆಡ್ಡಿ, ಹಿಂದೂಗಳು ದತ್ತಪೀಠದಲ್ಲಿ ಹಾಗೂ ದರ್ಗಾದಲ್ಲಿ ಮುಸ್ಲಿಂ ಧರ್ಮ ಗುರುಗಳು ಪ್ರತ್ಯೇಕ ಪೂಜೆ ಸಲ್ಲಿಸುವಂತೆ 1981ರಲ್ಲೆ ಸಿವಿಲ್ ಕೋರ್ಟ್ ಡಿಕ್ರಿ ಆಗಿದೆ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

ಮುಂದುವರಿಕೆ: ಸರಕಾರ ಮಾರ್ಚ್ 19ರಂದು ಹೊರಡಿಸಿರುವ ಆದೇಶ ಜಾರಿಗೊಳಿಸುವುದಿಲ್ಲ ಎಂದು ಮುಚ್ಚಳಿಕೆ ನೀಡಿರುವುದನ್ನು ಆಧರಿಸಿ ನೀಡಿರುವ ಮಧ್ಯಂತರ ಆದೇಶವನ್ನು ಹೈಕೋರ್ಟ್ ಮುಂದುವರಿಸಿತು.

ಹಿಂದೂ ಭಕ್ತರ ಭಾವನೆಗಳಿಗೆ ಬೆಲೆ ನೀಡದ ಸರಕಾರ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಸಮಿತಿಯ ಶಿಫಾರಸಿನಂತೆ ದತ್ತಪೀಠದಲ್ಲಿ ಪೂಜಾ ಕೈಂಕರ್ಯ ಕೈಗೊಳ್ಳಲು ಮುಜಾವರ್ ಅವರನ್ನು ನೇಮಕ ಮಾಡಿರುವುದು ಕಾನೂನು ಬಾಹಿರ ಎಂಬುದು ಅರ್ಜಿದಾರರ ಆಕ್ಷೇಪ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News