ರಸ್ತೆ ಗುಂಡಿ ಕಾಣಿಸಿದರೆ ಅಧಿಕಾರಿಗಳ ಅಮಾನತು: ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್

Update: 2018-10-31 15:44 GMT

ಬೆಂಗಳೂರು, ಅ.31: ವಿವಿಧ ಕಾರಣಗಳಿಗೆ ರಸ್ತೆ ಅಗೆತ ಪ್ರಕರಣ ಬಿಟ್ಟು, ರಸ್ತೆಗಳಲ್ಲಿ ಗುಂಡಿ ಕಾಣಿಸಿಕೊಂಡರೆ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು ಬಿಬಿಎಂಪಿ ಆಯುಕ್ತ ಮಂಜುನಾಥಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ನಗರದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಡೆದ ಕೌನ್ಸಿಲ್ ಸಭೆಯಲ್ಲಿ ರಸ್ತೆ ಗುಂಡಿ ಕುರಿತಂತೆ ಬಿಬಿಎಂಪಿ ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಜಲಮಂಡಳಿ, ಬೆಸ್ಕಾಂ ಸೇರಿ ಇನ್ನಿತರ ಸರಕಾರಿ ಸಂಸ್ಥೆಗಳಿಂದಾದ ರಸ್ತೆ ಅಗೆತ ಪ್ರಕರಣ ಹೊರತುಪಡಿಸಿ ಬಿಬಿಎಂಪಿ ವ್ಯಾಪ್ತಿಯ ರಸ್ತೆ ಗುಂಡಿ ಕಾಣಿಸಿಕೊಂಡರೆ, ಅಮಾನತು ಅಥವಾ ಮಾತೃ ಇಲಾಖೆಗೆ ವಾಪಾಸ್ ಕಳುಹಿಸಲಾಗುವುದೆಂದು ಹೇಳಿದರು.

ಸರಕಾರಿ ಸ್ವಾಮ್ಯದ ಸಂಸ್ಥೆಗಳಿಂದ ರಸ್ತೆ ಅಗೆದಿರುವುದನ್ನು ಹೊರತುಪಡಿಸಿ ಉಳಿದ ರಸ್ತೆ ಅಗೆತ ಮತ್ತು ಗುಂಡಿಗಳನ್ನು ಮುಚ್ಚುವ ಹೊಣೆ ವಲಯ ಮಟ್ಟದ ಅಧಿಕಾರಿಗಳದ್ದಾಗಿದೆ. ಅವರು ಕಾಲಕಾಲಕ್ಕೆ ಪರಿಶೀಲನೆ ನಡೆಸಬೇಕಿದೆ. ಒಂದು ವೇಳೆ ರಸ್ತೆ ದುರಸ್ತಿಗೆ ಮುಂದಾಗದಿದ್ದರೆ ಅಂತಹ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು ಎಂದು ತಿಳಿಸಿದರು.

ಯಾವುದೇ ರಸ್ತೆ ದುರಸ್ತಿಗೆ ಗುತ್ತಿಗೆ ನೀಡಿದರೆ ಅದರ ನಿರ್ವಹಣಾ ಅವಧಿ 3 ವರ್ಷಕ್ಕೆ ನಿಗದಿ ಮಾಡಲಾಗಿರುತ್ತದೆ. ಅದರಂತೆ ನಗರದ 12 ಸಾವಿರ ಕಿ.ಮೀ. ವಾರ್ಡ್ ರಸ್ತೆಗಳಲ್ಲಿ ಒಂದು ವರ್ಷಕ್ಕೆ 4 ಸಾವಿರ ಕಿ.ಮೀ. ದುರಸ್ತಿಗೆ ನೀಡಿದರೆ 2 ಸಾವಿರ ಕೋಟಿ ರೂ. ಅವಶ್ಯಕತೆಯಿದೆ ಎಂದು ವಿವರಿಸಿದರು.

ಪರಿವರ್ತನೆ ಶೀಘ್ರ: ಬಿ ಖಾತಾ ನಿವೇಶನಗಳನ್ನು ಎ ಖಾತಾವನ್ನಾಗಿ ಪರಿವರ್ತಿಸುವ ಸಂಬಂಧ ಕಾನೂನು ತೊಡಕುಗಳ ಕುರಿತು ಅಡ್ವೋಕೇಟ್ ಜನರಲ್‌ರೊಂದಿಗೆ ಚರ್ಚೆ ನಡೆಸಿ ಸಲಹೆ ಪಡೆಯಲಾಗಿದೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಂಜುನಾಥ್ ಪ್ರಸಾದ್ ತಿಳಿಸಿದರು.

ಕಠಿಣ ಕ್ರಮ: ತಮ್ಮ ಮೊದಲ ಕೌನ್ಸಿಲ್ ಸಭೆಯಲ್ಲಿ ಬೆಂಗಳೂರಿನ ಬಗ್ಗೆ ತಮಗಿರುವ ಗುರಿಯನ್ನು ವಿವರಿಸಿದ ಮೇಯರ್ ಗಂಗಾಂಬಿಕೆ, ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ಅವರ ಮೇಲೆ ನಿಗಾವಹಿಸಲು ಪೊಲೀಸರ ನೆರವು ಪಡೆಯಲಾಗುವುದು. ಈ ಸಂಬಂಧ ನಗರ ಪೊಲೀಸರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

‘ಸಾವಿರಾರು ರಸ್ತೆಗಳಿವೆ’

ಬೆಂಗಳೂರಿನಲ್ಲಿ 14 ಸಾವಿರ ಕಿ.ಮೀ. ಉದ್ದದ 93 ಸಾವಿರ ರಸ್ತೆಗಳಿವೆ. ಅದರಲ್ಲಿ 2 ಸಾವಿರ ಕಿ.ಮೀ. ಮುಖ್ಯರಸ್ತೆಯಾದರೆ, 12 ಸಾವಿರ ಕಿ.ಮೀ. ವಾರ್ಡ್ ರಸ್ತೆಗಳಾಗಿವೆ. ಅವುಗಳಲ್ಲಿ 83,282 ರಸ್ತೆಗಳ ಪರಿಶೀಲನೆ ನಡೆಸಲಾಗಿದ್ದು, 9,519 ಕಿ.ಮೀ. ಉದ್ದದ 59,530 ರಸ್ತೆಗಳಲ್ಲಿ ಒಂದೇ ಒಂದು ಗುಂಡಿಗಳಿಲ್ಲ.

-ಮಂಜುನಾಥ್ ಪ್ರಸಾದ್, ಬಿಬಿಎಂಪಿ ಆಯುಕ್ತ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News