ಕೆನರಾ ಬ್ಯಾಂಕ್‌ಗೆ 300 ಕೋಟಿ ರೂ. ನಿವ್ವಳ ಲಾಭ
ಬೆಂಗಳೂರು, ಅ.31: ಕೆನರಾ ಬ್ಯಾಂಕ್ ಪ್ರಸಕ್ತ ವರ್ಷದ ಎರಡನೆ ತ್ರೈಮಾಸಿಕದಲ್ಲಿ 300 ಕೋಟಿ ರೂ.ಗಳು ನಿವ್ವಳ ಲಾಭ ಗಳಿಸುವ ಮೂಲಕ ಶೇ.15.38 ರಷ್ಟು ಬೆಳವಣಿಗೆ ಕಂಡಿದೆ. ಬುಧವಾರ ನಗರದ ಕೆನರಾ ಬ್ಯಾಂಕ್‌ನ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಪಿ.ವಿ.ಭಾರತಿ, ಹಿಂದಿನ ಸಲದ ತ್ರೈಮಾಸಿಕದಲ್ಲಿ ಕೆನರಾ ಬ್ಯಾಂಕ್ 260 ಕೋಟಿ ಲಾಭ ಗಳಿಸಿತ್ತು ಎಂದು ಹೇಳಿದರು.
2018 ರ ವಿತ್ತ ವರ್ಷದ ಎರಡನೆ ತ್ರೈಮಾಸಿಕದಲ್ಲಿ 2783 ಕೋಟಿ ಇದ್ದದ್ದು, 2019 ರ ವಿತ್ತ ವರ್ಷದ ತ್ರೈಮಾಸಿಕದಲ್ಲಿ, ನಿವ್ವಳ ಬಡ್ಡಿ ಆದಾಯ ಶೇ.17.89 ರಷ್ಟು ಬೆಳವಣಿಗೆಯೊಂದಿಗೆ 3281 ಕೋಟಿ ರೂ.ಗೆ ತಲುಪಿದೆ. ಮುಂಗಡಗಳ ಮೇಲಿನ ಬಡ್ಡಿ ಆದಾಯದಲ್ಲಿ ವರ್ಷದಿಂದ ವರ್ಷಕ್ಕೆ 12.71 ರಷ್ಟು ಸಾಧಿಸಿದೆ. ಬಂಡವಾಳದ ಮೇಲಿನ ಬಡ್ಡಿಯಲ್ಲಿ ವರ್ಷದಿಂದ ವರ್ಷಕ್ಕೆ ಶೇ 4.80 ರಷ್ಟು ಬೆಳವಣಿಗೆಯಾಗಿದೆ ಎಂದು ಅವರು ಹೇಳಿದರು. ವಿತ್ತ ವರ್ಷ 2019 ರ ಎರಡನೇ ತ್ರೈಮಾಸಿಕದಲ್ಲಿ ಬಡ್ಡಿಯೇತರ ಆದಾಯ 1555 ಕೋಟಿ ರೂ ತಲುಪಿದೆ. ಬಡ್ಡಿಯೇತರ ಆದಾಯದಲ್ಲಿ ವರ್ಷದಿಂದ ವರ್ಷಕ್ಕೆ ಶೇ 13.0 ರಷ್ಟು ಸಾಧನೆ ಮಾಡಿದೆ. ಇನ್ನು ಕೃಷಿ ಸಾಲದಲ್ಲಿ ಶೇ 11.53, ನೇರಗೃಹ ಸಾಲ, ವಾಹನ ಸಾಲ ಶಿಕ್ಷಣ ಸಾಲ ಹಾಗೂ ಇತರೆ ವೈಯಕ್ತಿಕ ಸಾಲದಲ್ಲಿ ಈ ತ್ರೈಮಾಸಿಕ ಸಾಲಿನಲ್ಲಿ ಬ್ಯಾಂಕು ಹೆಚ್ಚಿನ ಪ್ರಗತಿ ಸಾಧಿಸಿದೆ ಎಂದರು.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಠೇವಣಿಗಳ ದರದಲ್ಲಿ ಇಳಿಕೆಯಾಗಿದೆ. ಒಟ್ಟು ಆದಾಯದಲ್ಲಿ ವರ್ಷದಿಂದ ವರ್ಷಕ್ಕೆ ಶೇ.6.47 ರಷ್ಟು ಏರಿಕೆಯಾಗಿದೆ. ಪ್ರಧಾನಮಂತ್ರಿ ಜನಧನ್ ಯೋಜನೆಯಲ್ಲಿ 69.24 ಲಕ್ಷ ಖಾತೆಗಳನ್ನು ತೆರೆಯಲಾಗಿದೆ. ಈ ಯೋಜನೆಯಲ್ಲಿ ತೆರೆಯಲಾದ ಉಳಿತಾಯ ಚಾಲ್ತಿ ಖಾತೆಗಳಲ್ಲಿ ಕ್ರೋಡೀಕರಿಸಿದ ಮೊತ್ತ 2123 ಕೋಟಿ ರೂಗಳಾಗಿವೆ ಎಂದು ಅವರು ಹೇಳಿದರು. ಕಾರ್ಯನಿರ್ವಾಹಕ ನಿರ್ದೇಶಕರಾದ ದೆಬಾಶಿಸ್ ಮುಖರ್ಜಿ, ಎಂ.ವಿ.ರಾವ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.