ಟಿಪ್ಪು ಜಯಂತಿ ಆಚರಣೆ ವಿಚಾರ: ಆಕ್ಷೇಪಣೆ ಸಲ್ಲಿಸದ ಸರಕಾರಕ್ಕೆ 1 ಸಾವಿರ ರೂ.ದಂಡ ವಿಧಿಸಿದ ಹೈಕೋರ್ಟ್
ಬೆಂಗಳೂರು, ಅ.31: ಸರಕಾರದ ವತಿಯಿಂದಲೇ ರಾಜ್ಯಾದ್ಯಂತ ಟಿಪ್ಪು ಸುಲ್ತಾನ್ ಜಯಂತಿ ಆಚರಿಸುವ ಸಂಬಂಧ ಹೊರಡಿಸಿದ್ದ ಸುತ್ತೋಲೆ ಪ್ರಶ್ನಿಸಿ ಸಲ್ಲಿಸಿರುವ ಪಿಐಎಲ್‌ಗೆ ಆಕ್ಷೇಪಣೆ ಸಲ್ಲಿಸಲು ವಿಳಂಬ ಮಾಡಿದ ಸರಕಾರಕ್ಕೆ 1 ಸಾವಿರ ರೂ. ದಂಡ ವಿಧಿಸಿರುವ ಹೈಕೋರ್ಟ್, ನ.9ರೊಳಗೆ ಆಕ್ಷೇಪಣೆ ಸಲ್ಲಿಸುವಂತೆ ತಾಕೀತು ಮಾಡಿದೆ.
ಮಡಿಕೇರಿಯ ಹೈಸೊಲ್ದೂರು ನಿವಾಸಿ ಕೆ.ಪಿ. ಮಂಜುನಾಥ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಅ.11ರಂದು ವಿಚಾರಣೆ ನಡೆಸಿದ್ದ ಪೀಠ, ಅರ್ಜಿಗೆ ಮೂರು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸರಕಾರಕ್ಕೆ ಸೂಚಿಸಿ, ವಿಚಾರಣೆಯನ್ನು ಅ.31ಕ್ಕೆ ಮುಂದೂಡಿತ್ತು. ಅದರಂತೆ, ಅರ್ಜಿಯು ಬುಧವಾರ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಮತ್ತು ನ್ಯಾಯಮೂರ್ತಿ ಎಸ್. ಸುಜಾತಾ ಅವರಿದ್ದ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಈ ವೇಳೆ, ಸರಕಾರ ಪಿಐಎಲ್‌ಗೆ ಆಕ್ಷೇಪಣೆ ಸಲ್ಲಿಸದ ಕಾರಣ ತೀವ್ರ ಬೇಸರ ವ್ಯಕ್ತಪಡಿಸಿದ ಪೀಠ, ಆಕ್ಷೇಪಣೆ ಸಲ್ಲಿಕೆಗೆ ಅಂತಿಮ ಅವಕಾಶ ನೀಡಿ ವಿಚಾರಣೆಯನ್ನು ನ.9ಕ್ಕೆ ಮುಂದೂಡಿತು. ಇದೇ ವೇಳೆ, ಕೋರ್ಟ್ ನಿರ್ದೇಶನದ ಹೊರತಾಗಿಯೂ ಆಕ್ಷೇಪಣೆ ಸಲ್ಲಿಸಲು ವಿಳಂಬ ಮಾಡಿದ ಕಾರಣ ಸರಕಾರಕ್ಕೆ 1 ಸಾವಿರ ದಂಡ ವಿಧಿಸಿ ಆದೇಶಿಸಿತು.
ಏನಿದು ಪ್ರಕರಣ: ರಾಜ್ಯಾದ್ಯಂತ ಟಿಪ್ಪು ಜಯಂತಿ ಆಚರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು 2017ರ ಅ.24ರಂದು ಸುತ್ತೋಲೆ ಹೊರಡಿಸಿತ್ತು. ಇದನ್ನು ಅರ್ಜಿದಾರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಅರ್ಜಿಯ ಕಳೆದ ವಿಚಾರಣೆ ವೇಳೆ ನ್ಯಾಯಪೀಠ, 2017ರಲ್ಲಿ ಸಲ್ಲಿಕೆಯಾಗಿರುವ ಅರ್ಜಿಗೆ ಒಂದು ವರ್ಷ ಕಳೆದರೂ ಏಕೆ ಆಕ್ಷೇಪಣೆ ಸಲ್ಲಿಸಿಲ್ಲ ಎಂದು ಸರಕಾರಿ ವಕೀಲರನ್ನು ಪ್ರಶ್ನಿಸಿ, ಮೂರು ವಾರಗಳಲ್ಲಿ ಅರ್ಜಿಗೆ ಸರಕಾರ ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿತ್ತು.