ಕನ್ನಡ ಬದುಕದೆಂಬ ಭಯ

Update: 2018-11-01 07:08 GMT

ಯಾವುದೇ ಒಂದು ಭಾಷೆಯನ್ನು ಕೇವಲ ಭಾವನಾತ್ಮಕವಾಗಿ, ಭಾವಾವೇಶದಿಂದ ಸ್ವೀಕರಿಸಿದ ಕೂಡಲೇ ಆ ಭಾಷೆ ಜ್ಞಾನದ ವಿಜ್ಞಾನದ ಭಾಷೆಯಾಗಿ ಅಥವಾ ಸಾಹಿತ್ಯ ಭಾಷೆಯಾಗಿ ಬೆಳೆಯುವುದಿಲ್ಲ. ಅದು ಶಿಕ್ಷಣದ ಮಾಧ್ಯಮವಾಗಿಯೂ ಉಳಿಯುವುದಿಲ್ಲ. ಒಂದು ಭಾಷೆಯನ್ನಾಡುವ ಜನರ ಎದುರಲ್ಲೇ ಇನ್ನೊಂದು ಭಾಷೆ, ಭಾಷಾ ಮಾಧ್ಯಮ ಅನ್ನಕೊಡುವ ಅಂದರೆ ಹೊಟ್ಟೆಪಾಡಿಗೆ ಬೇಕಾದ ಉದ್ಯೋಗಗಳನ್ನು ಕೊಡಿಸುವ ಮತ್ತು ಜನತೆ ತಮ್ಮ ತಾಯಿ ಮಾತು ತರುವುದಕ್ಕಿಂತಲೂ ಹೆಚ್ಚಿನ ಸಾಮಾಜಿಕ ಪ್ರತಿಷ್ಠೆ ತಂದು ಕೊಡುವ ಭಾಷೆಯಾದಾಗ ಜನ ತಮ್ಮ ಭಾಷೆಯನ್ನು ಮನೆಗೆ, ಅಡುಗೆ ಮನೆಗೆ ಮೀಸಲಿಟ್ಟು ಹೊಟ್ಟೆ ಪಾಡಿಗೆ ಹಾದಿ ಮಾಡಿಕೊಡುವ ಭಾಷೆಗೆ, ಆ ಭಾಷಾಮಾಧ್ಯಮಕ್ಕೆ ಜೋತು ಬೀಳುತ್ತಾರೆ.

ಕನ್ನಡದ ಭವಿಷ್ಯದ ಬಗ್ಗೆ, ಕನ್ನಡ ಭಾಷೆಯ ಉಳಿವಿನ ಬಗ್ಗೆ ಹಲವು ವಿದ್ವಾಂಸರು, ಭಾಷಾಶಾಸ್ತ್ರಜ್ಞರು ಆಗಿಂದಾಗ್ಗೆ ಆತಂಕ ವ್ಯಕ್ತ ಪಡಿಸುತ್ತ ಬಂದಿದ್ದಾರೆ. ಈ ಆತಂಕಕ್ಕೆ, ಇನ್ನು ನೂರು-ಇನ್ನೂರು ವರ್ಷಗಳಲ್ಲಿ ಕನ್ನಡ ಬದುಕಿ ಉಳಿಯುತ್ತದೋ ಇಲ್ಲವೋ ಎಂಬ ಭಯಕ್ಕೆ ಕಾರಣಗಳಿವೆ; ಭಯವನ್ನು ಹೆಚ್ಚಿಸುವ ಸಾಮಾಜಿಕ ಹಾಗೂ ಆರ್ಥಿಕ ಬೆಳವಣಿಗೆಗಳಾಗುತ್ತಿವೆ.

 ಭಾಷಾ ಗಣತಿಯ ಪ್ರಕಾರ ಭಾರತದ 191 ಭಾಷೆಗಳು ಅಳಿವಿನ ಅಂಚಿನಲ್ಲಿವೆ, ಅಂದರೆ ಅವು Endangered ಭಾಷೆಗಳಾಗಿವೆ. ಒಂದು ಭಾಷೆಯನ್ನಾಡುವ ಜನರ ಸಂಖ್ಯೆ ಕಡಿಮೆಯಾಗುತ್ತ ಹೋದಂತೆ ಅದು ಬಳಕೆಯಿಂದ ಹೊರಬೀಳುವ ಅಪಾಯ ಎದುರಿಸುತ್ತದೆ. ಆಗ ಅದನ್ನು ‘ಎನ್‌ಡೇಂಜರ್ಡ್‌’ ಭಾಷೆಯ ಸಾಲಿಗೆ ಸೇರಿಸಲಾಗುತ್ತದೆ. ಮುಂದಿನ ಹಂತ ಅಳೆದು ಕಾಲಿಡುವ ಅಂದರೆ ನಾಶವಾದ ಭಾಷೆ (extinet)ಭಾರತದ 42 ಭಾಷೆಗಳು ವಿನಾಶದತ್ತ ಸಾಗುತ್ತಿವೆ. ಇವುಗಳು ಹತ್ತು ಸಾವಿರಕ್ಕಿಂತಲು ಕಡಿಮೆ ಮಂದಿ ಮಾತನಾಡುವ ಭಾಷೆಗಳು ಆದರೂ ಭಾರತದಲ್ಲಿ ಒಂದು ಲಕ್ಷ ಜನರಿಗಿಂತಲೂ ಹೆಚ್ಚು ಜನರು ಮಾತಾಡುವ 122 ಭಾಷೆಗಳಿವೆ. ‘ಎನ್‌ಡೇಂಜರ್ಡ್‌’ ಭಾಷೆಗಳ ಯಾದಿಯಲ್ಲಿ ಕರ್ನಾಟದ ಕೊರಗ ಮತ್ತು ಕುರುಬ ಭಾಷೆಗಳೂ ಸೇರಿವೆ. ಈ ಯಾದಿಯಲ್ಲಿರುವ ಇತರ ಎಂಟು ಭಾಷೆಗಳೆಂದರೆ ಇರುಳ, ಸೋಲಿಗ, ಬಡಗ, ಯೆರವ, ಗೌಳಿ, ಬೆಟ್ಟ ಕುರುಬ ಮತ್ತು ಜೇನು ಕುರುಬ, ಸಿದ್ದಿ ಮತ್ತು ಹಕ್ಕಿಪಿಕ್ಕಿ ಭಾಷೆಗಳು ತೀರ ಅಂದರೆ ಕ್ರಿಟಿಕಲಿ ಎನ್‌ಡೇಂಜರ್ಡ್‌ ಭಾಷೆಗಳಾಗಿವೆ ಯಾಕೆಂದರೆ ಈ ಸಮುದಾಯಗಳ ಯುವ ತಲೆಮಾರು ಈ ಭಾಷೆಗಳಲ್ಲಿ ಮಾತಾಡುತ್ತಿಲ್ಲ.

ಇದೇ ಸ್ಥಿತಿ, ಕರ್ನಾಟಕದ ಜನರು, ಕನ್ನಡ ಭಾಷೆಯಲ್ಲಿ ಮಾತಾಡದ ಸ್ಥಿತಿ ಬಂದೀತೇ? ಬಂದಲ್ಲಿ ಆಗ ಕನ್ನಡ ಬದುಕಿರುತ್ತದೆಯೋ ಬದುಕಿದ್ದರೆ ಎಲ್ಲಿ ಬದುಕಿರುತ್ತದೆ? ವಿಶ್ವವಿದ್ಯಾನಿಲಯಗಳ ಕನ್ನಡ/ಸಂಶೋಧನೆ ವಿಭಾಗಗಳಲ್ಲಿ, ಕನ್ನಡ ವಸ್ತು ಸಂಗ್ರಹಾಲಯಗಳಲ್ಲಿ ಮಾತ್ರವೇ? ಇತ್ಯಾದಿ ಭಯಮಿಶ್ರಿತ ಪ್ರಶ್ನೆಗಳು ಈಗ ಕೆಲವರನ್ನಾದರೂ ಕಾಡುತ್ತಿವೆ. ಆದರೆ ಇಂತಹ ಪ್ರಶ್ನೆಗಳು ಹುಟ್ಟಿಕೊಳ್ಳಲು ಏನು ಕಾರಣ? ಯಾವ ರೀತಿಯ ಸಾಮಾಜಿಕ, ಔದ್ಯೋಗಿಕ, ಶೈಕ್ಷಣಿಕ ಬೆಳವಣಿಗೆಗಳು ಕಾರಣ?

ಯಾವುದೇ ಒಂದು ಭಾಷೆಯನ್ನು ಕೇವಲ ಭಾವನಾತ್ಮಕವಾಗಿ, ಭಾವಾವೇಶದಿಂದ ಸ್ವೀಕರಿಸಿದ ಕೂಡಲೇ ಆ ಭಾಷೆ ಜ್ಞಾನದ ವಿಜ್ಞಾನದ ಭಾಷೆಯಾಗಿ ಅಥವಾ ಸಾಹಿತ್ಯ ಭಾಷೆಯಾಗಿ ಬೆಳೆಯುವುದಿಲ್ಲ. ಅದು ಶಿಕ್ಷಣದ ಮಾಧ್ಯಮವಾಗಿಯೂ ಉಳಿಯುವಿಲ್ಲ. ಒಂದು ಭಾಷೆಯನ್ನಾಡುವ ಜನರ ಎದುರಲ್ಲೇ ಇನ್ನೊಂದು ಭಾಷೆ, ಭಾಷಾ ಮಾಧ್ಯಮ ಅನ್ನಕೊಡುವ ಅಂದರೆ ಹೊಟ್ಟೆಪಾಡಿಗೆ ಬೇಕಾದ ಉದ್ಯೋಗಗಳನ್ನು ಕೊಡಿ ಸುವ ಮತ್ತು ಜನತೆ ತಮ್ಮ ತಾಯಿ ಮಾತು ತರುವುದಕ್ಕಿಂತಲೂ ಹೆಚ್ಚಿನ ಸಾಮಾಜಿಕ ಪ್ರತಿಷ್ಠೆ ತಂದು ಕೊಡುವ ಭಾಷೆಯಾದಾಗ ಜನ ತಮ್ಮ ಭಾಷೆಯನ್ನು ಮನೆಗೆ, ಅಡುಗೆ ಮನೆಗೆ ಮೀಸಲಿಟ್ಟು ಹೊಟ್ಟೆ ಪಾಡಿಗೆ ಹಾದಿ ಮಾಡಿಕೊಡುವ ಭಾಷೆಗೆ, ಆ ಭಾಷಾಮಾಧ್ಯಮಕ್ಕೆ ಜೋತು ಬೀಳುತ್ತಾರೆ. ‘‘ನಮ್ಮ ಮನೆ ಮಾತಿನಲ್ಲೇ ಶಿಕ್ಷಣ ಪಡೆದರೆ ನಮ್ಮ ಹೊಟ್ಟೆಗೆ ಹಿಟ್ಟು ಸಿಗಲಾರದು’’ ಎಂಬ ಭಯ ಅವರನ್ನು ಕಾಡತೊಡಗುತ್ತದೆ. ಕರ್ನಾಟಕದಲ್ಲಿ ಈ ಭಯ ಸುಮಾರು ನಾಲ್ಕು-ಐದು ದಶಕಗಳ ಲಾಗಾಯ್ತು ಜನರನ್ನು ಕಾಡುತ್ತಿದೆ. ಕಳೆದ ಎರಡು-ಮೂರು ದಶಕಗಳಲ್ಲಿ ಈ ಭಯ ತೀವ್ರಗತಿಯಲ್ಲಿ ಏರಿದ ಪರಿಣಾಮವಾಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳು ಕರ್ನಾಟಕದ ಮೂಲೆ ಮೂಲೆಗಳಿಗೂ ಒಂದು ಸಾಂಕ್ರಾಮಿಕದಂತೆ ವ್ಯಾಪಿಸಿ ಕನ್ನಡ ಮಾಧ್ಯಮ ಶಾಲೆಗಳು ಅಷ್ಟೇ ತೀವ್ರಗತಿಯಲ್ಲಿ ಮುಚ್ಚುತ್ತಬಂದವು. ನಮ್ಮ ಕರ್ನಾಟಕ ಸಂಸ್ಕೃತಿಯ ಗಣ್ಯರು, ಹೀರೋಗಳೆನ್ನಿಸಿಕೊಂಡವರು, ಮಹಾನ್ ಸಾಹಿತಿಗಳೆನ್ನೆಸಿಕೊಂಡವರೆಲ್ಲ (ಅಥವಾ ಇವರಲ್ಲಿ ಬಹುಪಾಲು ಜನ) ತಮ್ಮ ಮಕ್ಕಳನ್ನು ಆಂಗ್ಲಮಾಧ್ಯಮ ಶಾಲೆಗಳಿಗೆ ಯಾಕೆ ಕಳುಹಿಸಿದರು? ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತ ಹೊರಟರೆ ಯಾಕೆ ಕನ್ನಡ ಇಂದು ಇಂಗ್ಲಿಷ್‌ನ ಮುಂದೆ ‘ಸೆಕೆಂಡ್ ಕ್ಲಾಸ್ ಸಿಟಿಜನ್’ ಆಗಿ ನಿಂತಿದೆ? ಎಂಬುದು ಸ್ಪಷ್ಟವಾದೀತು.

 ಅವರು ಕನ್ನಡದ ಒಬ್ಬ ಶ್ರೇಷ್ಠ ಸಾಹಿತಿ. ಈ ದೇಶದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿ ಪಡೆದವರು. ಕನ್ನಡ ಮಾಧ್ಯಮದಲ್ಲೇ ಓದಿ ಇಂಗ್ಲಿಷ್ ಸಾಹಿತ್ಯದಲ್ಲಿ ಪ್ರಥಮ ಶ್ರೇಣಿಯಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರತಿಷ್ಠಿತ ಕಾಮನ್‌ವೆಲ್ತ್ ಶಿಷ್ಯವೇತನ ಪಡೆದು ವಿದೇಶಕ್ಕೆ ಹೋಗಿ ಪಿಎಚ್‌ಡಿ ಪದವಿ ಪಡೆದರು. ಇಂಗ್ಲಿಷ್ ಪ್ರಾಧ್ಯಾಪಕವಾಗಿ ಕನ್ನಡ ಲೇಖಕರಾಗಿ ದಶಕಗಳ ಕಾಲ ಕರ್ನಾಟಕದ ‘ಸಾಂಸ್ಕೃತಿಕ ಹೀರೋ’ ಆಗಿ ಮೆರೆದವರು. ತನ್ನ ಬದುಕಿನುದ್ದಕ್ಕೂ, ವಿಶೇಷವಾಗಿ ತನ್ನ ಜೀವಿತದ ಕೊನೆಯ ಎರಡು ದಶಕಗಳಲ್ಲಿ, ಕನ್ನಡ ಮಾಧ್ಯಮದ ಪರವಾಗಿ ಹತ್ತಾರು ವೇದಿಕೆಗಳಲ್ಲಿ ಮಾತಾಡಿದವರು. ಕನಿಷ್ಠ ಪ್ರಾಥಮಿಕ ಹಂತದ ಶಿಕ್ಷಣವನ್ನಾದರೂ ಕನ್ನಡ ಮಾಧ್ಯಮದಲ್ಲೇ ನೀಡಬೇಕೆಂದು ಸಕಾರಣವಾಗಿ ವಾದಿಸಿದವರು. ಊರಿನ ಶ್ರೀಮಂತ ಹಾಗೂ ಬಡವರ ಮಕ್ಕಳು ತರಗತಿಯಲ್ಲಿ ಜತೆಯಾಗಿ ಕುಳಿತು ‘ಸಾಮಾನ್ಯ ಶಾಲೆಗಳಲ್ಲಿ ಸಮಾನ ಮಟ್ಟದ ಶಿಕ್ಷಣ ಪಡೆಯಬೇಕೆಂದು ಪ್ರತಿವಾದಿಸಿದವರು. ಆದರೆ ಅವರು ತನ್ನ ಮಕ್ಕಳಿಗೆ ಮಾತ್ರ ಇಂಗ್ಲಿಷ್ ಮಾಧ್ಯಮದಲ್ಲೇ 1970ರ ದಶಕದಲ್ಲೇ ಶಿಕ್ಷಣ ಕೊಡಿಸಿದವರು. ಹೀಗೆ ಯಾಕೆ? ಎಂಬ ಪ್ರಶ್ನೆ ನನ್ನನ್ನೂ ಹಲವು ವರ್ಷಗಳ ಕಾಲ ಕಾಡಿತ್ತು. ಆದರೆ ಸಾಹಿತ್ಯವಾಗಿ ಆಕಾಶದೆತ್ತರಕ್ಕೆ ಬೆಳೆದು ನಿಂತಿದ್ದ ಅವರಲ್ಲಿ ಈ ಪ್ರಶ್ನೆ ಕೇಳುವ ಧೈರ್ಯ ನನಗಿರಲಿಲ್ಲ. ಕುತೂಹಲದ ವಿಷಯವೆಂದರೆ ನನ್ನ ತಲೆಮಾರಿನ ಯಾವ ಲೇಖಕನೂ, ಪತ್ರಕರ್ತನೂ, ಸಾರ್ವಜನಿಕವಾಗಿ,‘‘ನೀವ್ಯಾಕೆ ನಿಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗೆ ಶಾಲೆಗೆ ಕಳುಹಿಸಿದ್ದೀರಿ’’ ಎಂದು ಯಾವತ್ತೂ ಕೇಳಿದ್ದಿಲ್ಲ. ನಾನೊಮ್ಮೆ ಅವರಿಗೆ ತುಂಬ ಆಪ್ತನಾದ ವಿದ್ಯಾರ್ಥಿಯೋರ್ವನೊಡನೆ ಈ ಪ್ರಶ್ನೆ ಕೇಳಿದ್ದೆ. ಆತ ಈಗ ಕನ್ನಡದ ಓರ್ವ ಪ್ರಮುಖ ವಿಮರ್ಶಕನಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಿತನಾಗಿದ್ದಾನೆ. ಆತ ಹೇಳಿದ: ‘‘ನಾನು ಒಂದು ಸಲ ಧೈರ್ಯಮಾಡಿ ಅವರಿಗೆ ಈ ಪ್ರಶ್ನೆ ಕೇಳಿದ್ದೆ. ಆಗ ಅವರು ಹೇಳಿದರು, ‘‘ನಾನು ಕನ್ನಡ ಮಾಧ್ಯಮದಲ್ಲೇ ಕಲಿತು ನನ್ನ ಪರಿಸರವನ್ನು ಮೀರಿ ಇವತ್ತು ಏನು ಆಗಿದ್ದೇನೋ ಅದು ಆಗಿದ್ದೇನೆ. ಆದರೆ ನನ್ನ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಕಲಿತು ನನ್ನ ಹಾಗೆ ಆ ಪರಿಸರವನ್ನು ಮೀರಿ ಮುಂದೆ ಬರಬಲ್ಲರು ಎಂಬ ಧೈರ್ಯ ನನಗಿರಲಿಲ್ಲ.’’

ಇಂತಹ ಧೈರ್ಯದ ಕೊರತೆ ಅಥವಾ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದರೆ ಬದುಕಿನ ನಿರೀಕ್ಷೆಗಳನ್ನು ನಿಜವಾಗಿಸಲು ಸಾಧ್ಯವಾಗದೆ ಹೋಗಬಹುದೆಂಬ ಭಯ ಈ ನಾಡಿನ ಅತ್ಯಪರೂಪದ ಓರ್ವ ಮೇಧಾವಿಯನ್ನೇ ಕಾಡಿತ್ತು ಎಂಬುದು ನನಗೆ ಕನ್ನಡಿಗರ ಒಂದು ಸಾಂಕೇತಿಕ ಭಯವಾಗಿ ಕಂಡಿದೆ. ತನ್ನ ಮಗ ಅಥವಾ ಮಗಳು ಡಾಕ್ಟರೋ ಇಂಜಿನಿಯರೋ ಆಗಬೇಕೆಂಬ ಕನಸು ಕಾಣುವ ಲಕ್ಷಾಂತರ ಕನ್ನಡಿಗರು ಈ ಭಯದಿಂದ ಮುಕ್ತರಾಗುವವರೆಗೆ ಕರ್ನಾಟಕದ ಕನ್ನಡ ಮಾಧ್ಯಮ ಶಾಲೆಗಳು, ಸಾಲಾಗಿ ಇಟ್ಟ ಇಸ್ಪೀಟು ಎಲೆಗಳಲ್ಲಿ ಒಂದನ್ನು ದೂಡಿದಾಗ ಎಲ್ಲ ಎಲೆಗಳೂ ಕ್ಷಣಾರ್ಧದಲ್ಲಿ ಕೆಳಗುರುಳುವಂತೆ, ಮುಚ್ಚುತ್ತ ಹೋಗುವ ಸ್ಥಿತಿ ಬದಲಾಗುವುದಿಲ್ಲ. ಆದ್ದರಿಂದ ಇಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ತನ್ನ ಬದುಕಿನುದ್ದಕ್ಕೂ ಕನ್ನಡ ಸಾಹಿತ್ಯ ಪಾಠ ಮಾಡಿದವರು, ಎರಡೆರಡು ವಿಶ್ವವಿದ್ಯಾನಿಲಯಗಳಲ್ಲಿ ಕುಲಪತಿಗಳಾಗಿ ಸೇವೆ ಸಲ್ಲಿಸಿದವರು ಕೂಡ ತನ್ನ ಮಕ್ಕಳಿಗಾಗುವಾಗ ಆಂಗ್ಲ ಮಾಧ್ಯಮವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.

ಆಂಗ್ಲ ಮಾಧ್ಯಮದಲ್ಲಿ ಕಲಿತು ಪ್ರಥಮ ವರ್ಷದ ಪದವಿಪೂರ್ವ ಪರೀಕ್ಷೆಯಲ್ಲಿ ವಿಜ್ಞಾನ ವಿಷಯಗಳಲ್ಲಿ ‘ಸಿಂಗಲ್ ಡಿಜಿಟ್’ ಪಡೆದು ಫೇಲಾದ ವಿದ್ಯಾರ್ಥಿಯೊಬ್ಬ, ಇಂಜಿನಿಯರಿಂಗ್ ಡಿಪ್ಲೊಮಾ ಕೋರ್ಸಿಗೆ ಸೇರಿ, ಡಿಪ್ಲೊಮಾ ಮುಗಿಸಿದ ಬಳಿಕ, ಇಂಜಿನಿಯರಿಂಗ್ ಕೋರ್ಸ್ ಮಾಡಿ ಪದವಿ ಪಡೆದು ಒಂದು ನೌಕರಿ ಗಿಟ್ಟಿಸಿಕೊಳ್ಳುತ್ತಾನೆ. ಎರಡು ವರ್ಷಗಳೊಳಗಾಗಿ ತರಬೇತಿಗೆಂದು ಕೆನಡಾಕ್ಕೆ ತೆರಳಿ ಮರಳಿ ಬಂದು ತಿಂಗಳೊಂದರ 60,000 ರೂಪಾಯಿ ವೇತನ ಗಳಿಸುತ್ತಾನೆ. ಆತ ಕನ್ನಡ ಮಾಧ್ಯಮದಲ್ಲೇ ಕಲಿತಿದ್ದರೆ, ಕರಾವಳಿ ಕರ್ನಾಟಕದ ಕನ್ನಡದಲ್ಲಿ ಹೇಳುವಂತೆ, ‘ಜಿನಸಿ ಅಂಗಡಿಯಲ್ಲಿ ತೊಟ್ಟೆ ಕಟ್ಟುತ್ತ’ ಇರಬೇಕಾಗಿತ್ತು. ಇಂತಹ ಔದ್ಯೋಗಿಕ ಪವಾಡಗಳು ಇಂಗ್ಲಿಷ್ ಮಾಧ್ಯಮ ವಿದ್ಯಾರ್ಥಿಗಳ ಬದುಕಿನಲ್ಲಿ ಆಗಿರುವುದನ್ನು ಕಂಡವರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕಳುಹಿಸುವ ಧೈರ್ಯ ಮಾಡುತ್ತಾರೆಯೇ?

ಹಾಗಾದರೆ ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯ ಸಾಹಿತ್ಯ, ಕಾವ್ಯಗಳ ಗತಿ ಏನು? ನಮ್ಮ ಪಂಪ, ರನ್ನ, ಕುಮಾರ ವ್ಯಾಸ, ರಾಘವಾಂಕ, ಕುವೆಂಪು, ಬೇಂದ್ರೆ, ಅಡಿಗರನ್ನು ಭವಿಷ್ಯದಲ್ಲಿ ಓದುವವರು, ಓದಿ ಉಳಿಸಿಕೊಳ್ಳುವವರು ಯಾರು? ಕನ್ನಡ ಬದುಕದೆಂಬ ಭಯ ತೊಲಗಬೇಕಾದರೆ ಕನ್ನಡ ಜನತೆ, ಕರ್ನಾಟಕ ಸರಕಾರ ಏನು ಮಾಡಬೇಕು? ಏನು ಮಾಡಬಹುದು? ಇವು ಸುಲಭದ ಉತ್ತರವಿಲ್ಲದ ಪ್ರಶ್ನೆಗಳು. ತತ್ವಜ್ಞಾನದಿಂದ, ಉಪದೇಶದಿಂದ ಅಕ್ಕಿ ಬೇಯುವುದಿಲ್ಲ. ಅದಕ್ಕೆ ಉರುವಲು, ಇಂಧನ ಬೇಕು. ಕನ್ನಡಿಗರಿಗೆ ಕನ್ನಡ ಭಾಷೆಯಿಂದ ಅನ್ನ ಮತ್ತು ಇಂಧನ ಎರಡೂ ದೊರೆಯುತ್ತದೆಂದು ಖಾತರಿಯಾಗುವವರೆಗೆ, ಭವಿಷ್ಯದಲ್ಲಿ ಕನ್ನಡ ಉಳಿಯುತ್ತದೋ ಇಲ್ಲವೋ ಎಂಬ ಭಯ ಅಕಾರಣವಾದದ್ದು, ಅತಾರ್ಕಿಕವಾದದ್ದು ಎನ್ನಲಾದೀತೆ?

(bhaskarrao599@gmail.com)

Writer - ಡಾ. ಬಿ. ಭಾಸ್ಕರ ರಾವ್

contributor

Editor - ಡಾ. ಬಿ. ಭಾಸ್ಕರ ರಾವ್

contributor

Similar News