ಪಾದ ಮತ್ತು ಕಣಕಾಲಿನಲ್ಲಿ ಕಂಡುಬರುವ ಮೂಳೆ ಕ್ಯಾನ್ಸರ್‌ನ ಈ ಲಕ್ಷಣಗಳನ್ನು ಕಡೆಗಣಿಸಬೇಡಿ

Update: 2018-11-01 12:02 GMT

ಕ್ಯಾನ್ಸರ್‌ನಿಂದ ಸಂಭವಿಸುವ ಹೆಚ್ಚಿನ ಸಾವುಗಳಲ್ಲಿ ಮೂಳೆ ಕ್ಯಾನ್ಸರ್‌ನ ಪಾಲು ಬಹಳಷ್ಟಿದೆ. ಮೂಳೆ ಕ್ಯಾನ್ಸರ್‌ನಲ್ಲಿ ಪ್ರೈಮರಿ ಮತ್ತು ಸೆಕಂಡರಿ ಹೀಗೆ ಎರಡು ವಿಧಗಳಿವೆ. ಮೊದಲನೆಯ ವಿಧದಲ್ಲಿ ಕ್ಯಾನ್ಸರ್ ಕೋಶಗಳು ಮೂಳೆಯ ಒಳಗೇ ಸೃಷ್ಟಿಯಾದರೆ,ಎರಡನೇ ವಿಧದಲ್ಲಿ ಕ್ಯಾನ್ಸರ್ ಕೋಶಗಳು ರಕ್ತದ ಮೂಲಕ ಸ್ಥಾನಾಂತರಗೊಂಡು ಮೂಳೆಗಳ ಅಂಗಾಂಶಗಳು ಮತ್ತು ನರಗಳಿಗೆ ಹಾನಿಯನ್ನುಂಟು ಮಾಡುತ್ತವೆ. ಮೂಳೆ ಕ್ಯಾನ್ಸರ್‌ನ ಹೆಚ್ಚಿನ ಲಕ್ಷಣಗಳು ವಿಶೇಷವಾಗಿ ಪಾದ ಮತ್ತು ಕಣಕಾಲುಗಳಲ್ಲಿ ಕಾಣಿಸಿಕೊಳ್ಳುತ್ತವೆ.

► ಗಂಟು ಮತ್ತು ಊತಗಳು

ಇವು ಪಾದ ಮತ್ತು ಕಣಕಾಲುಗಳಲ್ಲಿ ಕಾಣಿಸಿಕೊಳ್ಳುವ ಮೂಳೆ ಕ್ಯಾನ್ಸರ್‌ನ ಅತ್ಯಂತ ಸಾಮಾನ್ಯ ಲಕ್ಷಣಗಳಾಗಿವೆ. ಪಾದ ಅಥವಾ ಕಣಕಾಲಿನಲ್ಲಿ ಉಂಟಾಗುವ ಊತವು ಕಾಲಕ್ರಮೇಣ ಹೆಚ್ಚುತ್ತಲೇ ಹೋಗುತ್ತದೆ. ಪ್ರೈಮರಿ ಅಥವಾ ಸೆಕಂಡರಿ ಕ್ಯಾನ್ಸರ್ ಕೋಶಗಳು ಮೂಳೆಯ ಕೋಶಗಳನ್ನು ಆಕ್ರಮಿಸಿ ಅಸ್ಥಿಮಜ್ಜೆಯನ್ನು ಪ್ರವೇಶಿಸಿ ಕೆಂಪು ರಕ್ತಕಣಗಳ ಉತ್ಪಾದನೆಗೆ ಅಥವಾ ಬಿಳಿಯ ರಕ್ತಕಣಗಳ ಪ್ರತಿರೋಧವನ್ನೊಡ್ಡುವ ಕಾರ್ಯಕ್ಕೆ ವ್ಯತ್ಯಯಗಳನ್ನುಂಟು ಮಾಡುವುದು ಇದಕ್ಕೆ ಕಾರಣವಾಗಿದೆ. ದೇಹದ ನಿರೋಧಕ ಶಕ್ತಿ ದುರ್ಬಲಗೊಂಡಾಗ ಕ್ಯಾನ್ಸರ್ ಕೋಶಗಳ ಶಕ್ತಿಯು ಹೆಚ್ಚುತ್ತದೆ ಮತ್ತು ಪಾದಗಳಲ್ಲಿ ಗಂಟು ಅಥವಾ ಊತವನ್ನು ಹೆಚ್ಚಿಸುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಈ ಗಂಟುಗಳು ಇತರ ಯಾವುದೋ ಕಾರಣದಿಂದ ಉಂಟಾಗಿರಬಹುದೆಂದು ತಪ್ಪಾಗಿ ಗ್ರಹಿಸಲಾಗುತ್ತದೆ. ಈ ಗಂಟುಗಳನ್ನೆಂದಿಗೂ ಕಡೆಗಣಿಸಬಾರದು ಮತ್ತು ತಕ್ಷಣ ವೈದ್ಯರನ್ನು ಭೇಟಿಯಾಗಿ ಅದಕ್ಕೆ ಕಾರಣಗಳನ್ನು ತಿಳಿದುಕೊಳ್ಳುವುದು ಅಗತ್ಯವಾಗುತ್ತದೆ.

► ಮೂಳೆ ಮುರಿತ ಮತ್ತು ಕೀಲುಗಳಲ್ಲಿ ಮೃದುತ್ವ

ಮೂಳೆ ಮುರಿತಗಳು ಸಹ ಮೂಳೆ ಕ್ಯಾನ್ಸರ್‌ನ್ನು ಸೂಚಿಸುವ ಮಹತ್ವದ ಲಕ್ಷಣವಾಗಬಹುದು. ಕ್ಯಾನ್ಸರ್ ಕೋಶಗಳು ಮೂಳೆಗಳನ್ನು ದುರ್ಬಲಗೊಳಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ ಮತ್ತು ಮೂಳೆ ಮುರಿತಕ್ಕೆ ಕಾರಣವಾಗುತ್ತವೆ. ಹೊರಗಿನ ಯಾವುದೇ ಒತ್ತಡವಿಲ್ಲದಿದ್ದರೂ ಅಥವಾ ಬಿದ್ದು ಪೆಟ್ಟಾಗಿರದಿದ್ದರೂ ಕ್ಯಾನ್ಸರ್ ಕೋಶಗಳು ಹೇರುವ ತೀವ್ರ ಒತ್ತಡದಿಂದಾಗಿ ಮೂಳೆಗಳಲ್ಲಿ ಮುರಿತವುಂಟಾಗಬಹುದು. ಅಲ್ಲದೆ ಮೂಳೆಗಳು,ವಿಶೇಷವಾಗಿ ಕೀಲುಗಳ ಸುತ್ತ ತಮ್ಮ ನಮ್ಯತೆಯನ್ನು ಕಳೆದುಕೊಳ್ಳುತ್ತವೆ. ಸ್ನಾಯುಗಳು ಮತ್ತು ಅಸ್ಥಿರಜ್ಜು ನಿಯಂತ್ರಣ ಮೀರಿ ಸೆಟೆದುಕೊಳ್ಳುತ್ತವೆ ಮತ್ತು ಮೂಳೆಗಳನ್ನು ಇನ್ನಷ್ಟು ದುರ್ಬಲಗೊಳಿಸುತ್ತವೆ.

► ನೋವು

ಮೂಳೆಗಳ ಮುರಿತ ಮತ್ತು ನಿಶ್ಶಕ್ತಿಯಿಂದಾಗಿ ರೋಗಿಯು ತೀವ್ರ ನೋವನ್ನು ಅನುಭವಿಸಬಹುದು. ರಾತ್ರಿಗಳಲ್ಲಿ ಅಥವಾ ವಿಶೇಷವಾಗಿ ದೈಹಿಕ ಶ್ರಮದ ಕೆಲಸಗಳಲ್ಲಿ ತೊಡಗಿಕೊಂಡಾಗ ಕಾಲುಗಳಲ್ಲಿ ನೋವುಂಟಾಗುವ ಹೆಚ್ಚಿನ ಸಾಧ್ಯತೆಗಳಿರುತ್ತವೆ. ಕಾಲವು ಸರಿದಂತೆ ಕಾಲುಗಳಲ್ಲಿ ನೋವು ಹೆಚ್ಚುತ್ತ ಹೋಗುತ್ತದೆ ಮತ್ತು ಕ್ಯಾನ್ಸರ್ ಬೆಳೆಯುತ್ತಲೇ ಹೋಗುತ್ತದೆ. ಹೀಗಾಗಿ,ನಿರಂತರವಾಗಿ ಹಲವಾರು ವಾರಗಳ ಕಾಲ ಕಾಲುಗಳು ನೋಯುತ್ತಿದ್ದರೆ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು. ದುರದೃಷ್ಟವಶಾತ್ ಹೆಚ್ಚಿನವರು ಬೇರೆ ಯಾವುದೋ ಕಾರಣದಿಂದ ಕಾಲುಗಳು ನೋಯುತ್ತಿರಬಹುದು ಎಂದು ತಪ್ಪಾಗಿ ಭಾವಿಸಿರುತ್ತಾರೆ. ಕ್ಯಾನ್ಸರ್ ಮೂರು ಅಥವಾ ನಾಲ್ಕನೇ ಹಂತವನ್ನು ತಲುಪಿದರೆ ಕ್ಯಾನ್ಸರ್ ಕೋಶಗಳು ಶ್ವಾಸಕೋಶಗಳು ಅಥವಾ ಎದೆಗೆ ವ್ಯಾಪಿಸತೊಡಗುವುದರಿಂದ ನೋವು ಇನ್ನಷ್ಟು ಹೆಚ್ಚುತ್ತದೆ ಮತ್ತು ಬದುಕುಳಿಯುವ ಸಾಧ್ಯತೆ ಕಡಿಮೆಯಾಗುತ್ತದೆ. ಹೀಗಾಗಿ ನೋವು ಹೆಚ್ಚುತ್ತಲೇ ಇದ್ದರೆ ಅದಕ್ಕೆ ಏನು ಕಾರಣ ಎನ್ನುವುದನ್ನು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News