ರಾಜ್ಯೋತ್ಸವ ಸಂಸ್ಕೃತಿಯನ್ನು ಬಿಂಬಿಸುವ ಹಬ್ಬವಾಗಲಿ: ಆಹಾರ ಸಚಿವ ಝಮೀರ್ ಅಹ್ಮದ್ ಖಾನ್

Update: 2018-11-01 16:40 GMT

ಬೆಂಗಳೂರು, ನ.1: ಕನ್ನಡ ರಾಜ್ಯೋತ್ಸವವು ನಾಡು, ನುಡಿ, ಸಂಸ್ಕೃತಿಯನ್ನು ಸಾರುವಂತಹವಂತಹ ಹಬ್ಬವಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಬಿ.ಝಡ್. ಝಮೀರ್ ಅಹ್ಮದ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.

ಗುರುವಾರ ರಾಜ್ಯೋತ್ಸವ ಅಂಗವಾಗಿ ಚಾಮರಾಜಪೇಟೆಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕನ್ನಡ ನಾಡು ಅಪಾರವಾದ ಹೆಮ್ಮೆಯ ಸಂಸ್ಕೃತಿಯನ್ನು ಒಳಗೊಂಡಿದೆ. ಅಲ್ಲದೆ, ನಮ್ಮ ನಾಡು ದೇಶ-ವಿದೇಶಗಳಲ್ಲಿ ಪ್ರಸಿದ್ಧಿಯಾಗಿದೆ. ಕರುನಾಡಿನ ಹೆಮ್ಮೆಯಾದ ಬೆಂಗಳೂರು ನಗರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿದೆ ಎಂದು ಹೇಳಿದರು.

ಈ ನಿಟ್ಟಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಎಲ್ಲ ಕಡೆಗಳಲ್ಲಿಯೂ ಆಚರಣೆ ಮಾಡುವ ಮೂಲಕ ಎಲ್ಲ ಕಡೆಗಳಲ್ಲಿ ಕನ್ನಡದ ಕಂಪನ್ನು ಹರಡುವಂತೆ ಮಾಡಬೇಕು. ಕನ್ನಡಕ್ಕೆ ತನ್ನದೇ ಆದ ವಿಶೇಷ ಗೌರವ, ಸ್ಥಾನಮಾನವಿದೆ. ಅದನ್ನು ಮತ್ತಷ್ಟು ವೃದ್ಧಿಸಿಕೊಳ್ಳುವ ಕಡೆಗೆ ಎಲ್ಲರೂ ಕೆಲಸ ಮಾಡಬೇಕು ಎಂದು ಜಮೀರ್ ತಿಳಿಸಿದರು.

ಕರ್ನಾಟಕದಲ್ಲಿರುವ ಪ್ರತಿಯೊಬ್ಬರಿಗೂ ಕನ್ನಡ ಮೊದಲ ಆದ್ಯತೆಯ ಭಾಷೆಯಾಗಬೇಕು. ಅಲ್ಲದೆ, ಇಲ್ಲಿ ಎಲ್ಲ ಭಾಷೆಗಳಿಗೂ ಪ್ರಾಮುಖ್ಯತೆ ನೀಡಬೇಕು. ಆದರೆ, ಹೊರ ಭಾಷಿಕರು ಕನ್ನಡವನ್ನು ಕಲಿತು ಮಾತನಾಡುವಂತಾಗಬೇಕು ಎಂದ ಅವರು ಎಲ್ಲಿದ್ದರೂ ಕನ್ನಡತನ ಉಳಿಸಿಕೊಂಡು ಹೋಗುವುದು ಎಲ್ಲರ ಕರ್ತವ್ಯವಾಗಬೇಕು ಎಂದು ಅವರು ನುಡಿದರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ರಿಜ್ವಾನ್ ಅರ್ಷದ್, ಸಮಿತಿ ಅಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಚನ್ನಕೇಶವ, ಎಂ.ಮುದ್ದಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News