ಆನ್‌ಲೈನ್ ಮದ್ಯ ಮಾರಾಟಕ್ಕೆ ತಡೆ: ಸಿಎಂ ಕುಮಾರಸ್ವಾಮಿ

Update: 2018-11-02 12:54 GMT

ಬೆಂಗಳೂರು, ನ.2: ಆನ್‌ಲೈನ್ ಮದ್ಯಮಾರಾಟಕ್ಕೆ ತಾತ್ಕಾಲಿಕವಾಗಿ ತಡೆ ನೀಡಲಾಗಿದ್ದು, ಇದಕ್ಕೆ ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಶುಕ್ರವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ‘ಬೆಂಗಳೂರು ಟ್ರಾಮಾ ಕೋರ್ಸ್-2018 ಕಾರ್ಯಕ್ರಮ’ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಸರಕಾರದ ಅವಧಿಯಲ್ಲಿ ಆಲ್‌ಲೈನ್ ಮದ್ಯ ಮಾರಾಟವನ್ನು ಗುತ್ತಿಗೆಗೆ ನೀಡಲಾಗಿತ್ತು. ಈಗ ಅದರಲ್ಲಿ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಹೀಗಾಗಿ ತಾತ್ಕಾಲಿಕವಾಗಿ ತಡೆ ನೀಡಲಾಗುತ್ತಿದೆ ಎಂದು ಸ್ಪಷ್ಟ ಪಡಿಸಿದರು.

ಶಿವಮೊಗ್ಗದಲ್ಲಿ ನಾನು ಬಂದು ಹೋದ ಮೇಲೆ ಮದ್ಯ ಮಾರಾಟ ಹೆಚ್ಚಳವಾಗಿದೆ ಎಂದು ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಆರೋಪ ಮಾಡಿದ್ದಾರೆ. ನಾನು ಶಿವಮೊಗ್ಗಕ್ಕೆ ಬಂದಿದ್ದರಿಂದ ಬಿಜೆಪಿ ನಾಯಕರಿಗೆ ಭಯವಾಗಿದೆ. ಹೀಗಾಗಿ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.

ರಾಮನಗರದ ಬಿಜೆಪಿ ಅಭ್ಯರ್ಥಿ ಕಣದಿಂದ ಹಿಂದಕ್ಕೆ ಸರಿದಿರುವ ಬಗ್ಗೆ ಬಿಜೆಪಿ ನಾಯಕರು ಸಮ್ಮಿಶ್ರ ಸರಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ನಾನು ರಾಮನಗರಕ್ಕೆ ಹೋಗದಿದ್ದರೂ, ಅಲ್ಲಿನ ಜನತೆ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲಿದ್ದಾರೆ. ಹೀಗಿರುವಾಗ ಬಿಜೆಪಿ ಅಭ್ಯರ್ಥಿಯನ್ನು ಹಣ ಕೊಟ್ಟು ಖರೀದಿಸುವ ಅಗತ್ಯವೇನಿದೆ ಎಂದು ಅವರು ಪ್ರಶ್ನಿಸಿದರು.

ರೈತರ ಸಮಾವೇಶ: ಚುನಾವಣೆ ಬಳಿಕ ಮುಂದಿನ ತಿಂಗಳಲ್ಲಿ ರೈತರ ಬೃಹತ್ ಸಮಾವೇಶ ಏರ್ಪಡಿಸಿ ಋಣಮುಕ್ತ ಪ್ರಮಾಣಪತ್ರ ವಿತರಿಸಲಾಗುತ್ತದೆ. ಅಲ್ಲದೆ ನಾಡಿನ ಜನತೆಗೂ ದೀಪಾವಳಿ ಮಾತ್ರವಲ್ಲ ಪ್ರತಿ ತಿಂಗಳೂ ಒಂದೊಂದು ಸಿಹಿ ಸುದ್ದಿ ಕೊಡುತ್ತೇನೆ. ಅದಕ್ಕೆ ಪೂರಕವಾದ ಸಾಕಷ್ಟು ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದ್ದೇನೆ. ವಿಧಾನಪರಿಷತ್ ಸದಸ್ಯತ್ವದ ಎರಡು ಸ್ಥಾನಗಳನ್ನು ಕಾಂಗ್ರೆಸ್‌ಗೆ ನೀಡಲಾಗಿದೆ. ಒಂದನ್ನು ನಮ್ಮ ಪಕ್ಷಕ್ಕೆ ಉಳಿಸಿಕೊಂಡಿದ್ದೇವೆ. ಶೀಘ್ರದಲ್ಲೇ ನೇಮಕ ಮಾಡುತ್ತೇವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News