ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ: ಎಂಟು ತಿಂಗಳಲ್ಲಿ 1,127 ಹೃದಯಾಘಾತ ಪ್ರಕರಣ

Update: 2018-11-02 12:52 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ನ.2: ದಿನದಿಂದ ದಿನಕ್ಕೆ ಬೆಂಗಳೂರು ನಗರ ಮಾಲಿನ್ಯದಿಂದ ತತ್ತರಿಸಿ ಹೋಗುತ್ತಿದ್ದು, ಕಳೆದ ಎಂಟು ತಿಂಗಳಲ್ಲಿ ನಗರದ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ 1,127 ಹೃದಯಾಘಾತ ಪ್ರಕರಣಗಳು ನೋಂದಣಿಯಾಗಿವೆ ಎಂಬ ಆತಂಕಕಾರಿ ಅಂಶ ತಿಳಿದುಬಂದಿದೆ.

ಚಿಕ್ಕ ದೇಶವಾದ ಕೆನಡಾದಲ್ಲಿ ಕಳೆದ ಎಂಟು ವರ್ಷಗಳಲ್ಲಿ ದಾಖಲಾದ ಹೃದಯಾಘಾತ ಪ್ರಕರಣಗಳು ನಗರದಲ್ಲಿ ಕೇವಲ ಎಂಟು ತಿಂಗಳಲ್ಲಿ ದಾಖಲಾಗಿವೆ. ಕೆನಡಾದಲ್ಲಿ ಎಂಟು ವರ್ಷಗಳಲ್ಲಿ 1,100 ಪ್ರಕರಣಗಳು ಕಂಡುಬಂದಿದ್ದರೆ, ಬೆಂಗಳೂರು ನಗರದಲ್ಲಿ 1,127 ಪ್ರಕರಣಗಳು ನೋಂದಣಿಯಾಗಿವೆ ಎಂದು ಆಸ್ಪತ್ರೆಯ ಮೂಲಗಳಿಂದ ಮಾಹಿತಿ ತಿಳಿದಿದೆ.

ನಗರದಲ್ಲಿ ವಾಹನಗಳು ಉಗುಳುತ್ತಿರುವ ಹೊಗೆಯಿಂದ ಉಂಟಾಗುತ್ತಿರುವ ಮಾಲಿನ್ಯ ಹೃದಯಾಘಾತ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ. ಈ ಮೊದಲು ಅಧಿಕ ರಕ್ತದೊತ್ತಡ ಅಥವಾ ಮಧುವೇಹದಿಂದ ಹೃದಯಾಘಾತವಾಗಿ ಸಾವನ್ನಪ್ಪುತ್ತಿದ್ದರು. ಆದರೆ, ವಾಯುಮಾಲಿನ್ಯದಿಂದಲೂ ಹೃದಯಾಘಾತವಾಗುತ್ತದೆ ಎಂಬ ಅಂಶ ಕಂಡುಬಂದಿದೆ.

ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರನ್ನು ಒಳಗೊಂಡ ಕ್ಲೈಮೇಟ್ ಟ್ರೆಂಡ್ಸ್ ಎಂಬ ತಂಡದ ಅಧ್ಯಯನ ವರದಿಯಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು, ವಾಯುಮಾಲಿನ್ಯವು ನಿರಂತರ ಕೆಮ್ಮು, ಅಸ್ತಮಾ, ಶ್ವಾಸ ಸಂಬಂಧಿತ ಸಮಸ್ಯೆಗಳಿಗೆ ಸೀಮಿತವಾಗಿತ್ತು. ಆದರೆ, ವಾಹನಗಳು ಉಗುಳುವ ದಟ್ಟ ಹೊಗೆಯಿಂದಾಗಿ ಜೀವ ಮಾರಕ ರೋಗಕ್ಕೂ ಕಾರಣವಾಗುತ್ತಿದೆ ಎಂಬ ಅಂಶ ವರದಿಯಲ್ಲಿ ಉಲ್ಲೇಖಿತಗೊಂಡಿದೆ.

ವಾಯುಮಾಲಿನ್ಯ ಕಾರಣ ಹೇಗೆ ?: ಹಿಂದಿನ ವರ್ಷ 1,200 ರೋಗಿಗಳನ್ನು ಪ್ರಾಯೋಗಿಕವಾಗಿ ತೆಗೆದುಕೊಂಡಿದ್ದೆವು. ಅದರಲ್ಲಿ ಶೇ.10 ರಷ್ಟು ಅಧಿಕ ರಕ್ತದೊತ್ತಡ, ಶೇ.10 ರಷ್ಟು ಮಧುಮೇಹದಿಂದ ಬಳಲಿದ್ದಾರೆ. ಇನ್ನುಳಿದ ಶೇ.80 ರಷ್ಟು ಜನರು ಯಾವುದೇ ಗಂಭೀರವಾದ ಕಾಯಿಲೆಗಳಿಗೆ ತುತ್ತಾಗಿಲ್ಲ. ಅದರಲ್ಲಿ ಶೇ.48 ರಷ್ಟು ಜನರು ಧೂಮಪಾನ ಮಾಡುತ್ತಿದ್ದು, ಉಳಿದವರು ಎಲ್ಲದರಿಂದ ಹೊರತಾಗಿದ್ದರೂ ಹೃದಯಾಘಾತಕ್ಕೀಡಾಗಿದ್ದಾರೆ. ಆದರೆ, ಇಷ್ಟೆಲ್ಲಕ್ಕೂ ಕಾರಣ ಹುಡುಕಿದ ಸಂದರ್ಭದಲ್ಲಿ ತಿಳಿದು ಬಂದಿರುವ ಸಂಗತಿ ಎಂದರೆ, ಯಾವುದೇ ಖಾಯಿಲೆಗಳಿಂದ ಬಳಲದೇ ಸಾವೀಗೀಡಾದವರು ಆಟೋ, ಟ್ಯಾಕ್ಸಿ ಚಾಲಕರಾಗಿದ್ದರು. ದಿನದ ಬಹುತೇಕ ಸಮಯ ಸಂಚಾರದಟ್ಟಣೆಯಲ್ಲೇ ಕಾಲ ಕಳೆಯುತ್ತಿದ್ದರು. ದಟ್ಟಣೆ ಪ್ರದೇಶದಲ್ಲಿ ಸ್ವಚ್ಛ ಗಾಳಿಗಾಗಿ ಎಸಿ ಆಫ್ ಮಾಡುತ್ತಾರೆ. ಇದರಿಂದಾಗಿ ವಾಹನಗಳು ಹೊರಸೂಸುವ ಹೊಗೆ ಶರೀರವನ್ನು ಪ್ರವೇಶ ಮಾಡುತ್ತದೆ. ಇದರಿಂದಾಗಿ ಹೃದಯಾಘಾತಗಳು ಸಂಭವಿಸುತ್ತವೆ ಎಂಬ ಅಂಶ ತಿಳಿದುಬಂದಿದೆ ಎಂದು ಡಾ.ರಾಹುಲ್ ಪಾಟೀಲ್ ತಜ್ಞರಿಗೆ ಹೇಳಿದ್ದಾರೆ.

ಮತ್ತಿತರೆ ಖಾಯಿಲೆಗಳೂ ಹೆಚ್ಚಿವೆ: ಹೃದಯಾಘಾತ ಮಾತ್ರವಲ್ಲ ಮಧುಮೇಹ, ಆಟಿಸಂ, ಬುದ್ಧಿಮಾಂದ್ಯತೆ ಸೇರಿದಂತೆ ಮತ್ತಿತರ ಕಾಯಿಲೆಗಳ ಪ್ರಮಾಣವೂ ಏರಿಕೆಯಾಗಿದೆ. ಆದರೆ, ಇಂತಿಷ್ಟೇ ಎಂದು ಹೇಳುವುದು ಕಷ್ಟ. ಇನ್ನು ಅದೇ ರೀತಿ, ಶೇ.25ರಷ್ಟು ಮಕ್ಕಳು ಅಸ್ತಮಾದಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News