ಖಾಸಗಿ ಆಸ್ಪತ್ರೆಗಳು ಬಡ ರೋಗಿಗಳಿಗೆ ಪೂರಕವಾಗಿರಲಿ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-11-02 13:24 GMT

ಬೆಂಗಳೂರು, ನ.2: ಕಿಡ್ನಿ ವೈಫಲ್ಯ, ಹೃದಯ ಸಂಬಂಧಿ ಸೇರಿದಂತೆ ಹಲವು ಗಂಭೀರ ಕಾಯಿಲೆಗಳಿಗೆ ದುಬಾರಿ ವೆಚ್ಚವಾಗುತ್ತಿದ್ದು, ಬಡ ರೋಗಿಗಳು ದೊಡ್ಡ ಮಟ್ಟದ ಹಣವನ್ನು ಕೊಟ್ಟು ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ. ಹೀಗಾಗಿ ಖಾಸಗಿ ಆಸ್ಪತ್ರೆಯ ವೈದ್ಯರು ಬಡ ರೋಗಿಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸಲಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಶಿಸಿದರು.

ಶುಕ್ರವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ‘ಬೆಂಗಳೂರು ಟ್ರಾಮಾ ಕೋರ್ಸ್-2018 ಕಾರ್ಯಕ್ರಮ’ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರಿ ಆಸ್ಪತ್ರೆಗಳಿಂದ ಮಾತ್ರವೆ ಎಲ್ಲ ಬಡರೋಗಿಗಳಿಗೂ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ನಮ್ಮ ಜತೆ ಖಾಸಗಿ ಆಸ್ಪತ್ರೆಗಳೂ ಕೈ ಜೋಡಿಸಬೇಕಿದೆ ಎಂದು ತಿಳಿಸಿದರು.

ಹೆದ್ದಾರಿಗಳಲ್ಲಿ 10ಕ್ಕೂ ಹೆಚ್ಚು ಟ್ರಾಮಾ ಸೆಂಟರ್‌ಗಳನ್ನು ತೆರೆಯಲಾಗಿದೆ. ಆದರೂ ಸಾಲುತ್ತಿಲ್ಲ. ಜನತಾ ದರ್ಶನದಲ್ಲಿ ವೈದ್ಯಕೀಯ ಸಹಾಯಕ್ಕಾಗಿ ಸಾವಿರಾರು ಮಂದಿ ಬರುತ್ತಿದ್ದಾರೆ. ಖಾಸಗಿ ವೈದ್ಯಕೀಯ ಸಂಸ್ಥೆಗಳ ಸಹಕಾರವೂ ಬೇಕಾಗಿದೆ. ಖಾಸಗಿ ವೈದ್ಯರು ಬಡ ರೋಗಿಗಳ ಬಗ್ಗೆ ಸಹಾನುಭೂತಿ ತೋರಿಸಬೇಕು, ನೆರವು ನೀಡಬೇಕು ಎಂದು ಅವರು ತಿಳಿಸಿದರು.

ಜಯದೇವ, ಕಿದ್ವಾಯಿ, ವಿಕ್ಟೋರಿಯಾ ಆಸ್ಪತ್ರೆಗಳಿಗೆ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಒದಗಿಸಲಾಗಿದೆ. ಜಿಲ್ಲಾಮಟ್ಟದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ತೆರೆಯಲಾಗುವುದು. ಆರೋಗ್ಯ ಕ್ಷೇತ್ರದಲ್ಲಿ ರಾಜ್ಯ ಮುಂಚೂಣಿ ಸಾಧಿಸಬೇಕಿದೆ. ಆ ಮೂಲಕ ಬಡವರಿಗೂ ಉತ್ತಮ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News