ಕಡ್ಡಾಯ ಕನ್ನಡ ಭಾಷೆ ಕಲಿಕೆ ಕಾಯ್ದೆ ಜಾರಿಗೆ ತಿಂಗಳ ಗಡುವು

Update: 2018-11-02 13:29 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ನ.2 : ರಾಜ್ಯದ ಎಲ್ಲ ಶಾಲೆಗಳಲ್ಲಿಯೂ 2015 ರ ಕಡ್ಡಾಯ ಕನ್ನಡ ಭಾಷೆ ಕಲಿಕೆ ಕಾಯ್ದೆ ಕಡ್ಡಾಯವಾಗಿ ಪಾಲಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಒಂದು ತಿಂಗಳ ಕಾಲಾವಕಾಶ ನೀಡಿದೆ.

ಈ ಸಂಬಂಧ ಮಾತನಾಡಿರುವ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ, ರಾಜ್ಯಾದ್ಯಂತ ನವೆಂಬರ್ ಅಂತ್ಯದೊಳಗೆ ಎಲ್ಲ ಶಾಲೆಗಳೂ ಕಡ್ಡಾಯವಾಗಿ ಪಾಲಿಸಬೇಕು. ಒಂದು ವೇಳೆ ಕಾಯ್ದೆಯನ್ನು ಉಲ್ಲಂಘಿಸಿದ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಟೀಸ್ ಕಳುಹಿಸಿದ ನಂತರವೂ ತಿದ್ದಿಕೊಂಡು ನಡೆಯದ ಶಾಲೆಗಳನ್ನು ಕೈಬಿಡುವಂತೆ ಕಾಯ್ದೆಯಲ್ಲಿ ಸಾಧ್ಯತೆಯಿದೆ. ಈ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದು ಎರಡನೇ ಅವಕಾಶ ನೀಡಿ ಆದೇಶ ಅನುಸರಿಸದ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿರುವುದಾಗಿ ಹೇಳಿದ್ದಾರೆ.

ಕಾಯ್ದೆಯನ್ನು ಬೆಂಗಳೂರಿನ 50ಕ್ಕೂ ಅಧಿಕ ಶಾಲೆಗಳು ಉಲ್ಲಂಘನೆ ಮಾಡುತ್ತಿವೆ ಎಂದು ಇತ್ತೀಚಿಗೆ ವರದಿಗಳು ಬಂದಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಖಾಸಗಿ ಆಡಳಿತ ಮಂಡಳಿ ಸರಕಾರದಿಂದ ಎಲ್ಲ ಸೌಲಭ್ಯಗಳನ್ನು ಪಡೆದು ಶಾಲೆ ನಡೆಸುತ್ತವೆ. ಆದರೆ, ಈ ರಾಜ್ಯದ ಕಾನೂನು ಏಕೆ ಪಾಲಿಸುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.

ನವೆಂಬರ್ ತಿಂಗಳ ಪೂರ್ತಿ ಕಾಯ್ದೆಯನ್ನು ಪಾಲನೆ ಮಾಡಲಾಗುತ್ತಿದೆಯಾ ಅಥವಾ ಇಲ್ಲವಾ ಎಂದು ಪರಿಶೀಲಿಸಲು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಶಾಲೆಗಳಿಗೆ ದಿಢೀರ್ ಭೇಟಿ ನೀಡಲಿದ್ದಾರೆ. ಪ್ರಾಥಮಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಜೊತೆ ಶಾಲೆಗಳಿಗೆ ಭೇಟಿ ನೀಡಲಿದ್ದು, ಅಲ್ಲಿ ಕಾಯ್ದೆಯನ್ನು ಉಲ್ಲಂಘಿಸುವ, ತಪ್ಪು ವರದಿ ಸಲ್ಲಿಸುವುದು ಕಂಡುಬಂದರೆ ಸ್ಥಳದಲ್ಲಿಯೇ ಕ್ರಮ ಕೈಗೊಳ್ಳಲು ಪ್ರಧಾನ ಕಾರ್ಯದರ್ಶಿಗೆ ಸೂಚಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ರಾಜ್ಯದಲ್ಲಿ ಎನ್‌ಒಸಿ(ಆಕ್ಷೇಪಣೆ ಇಲ್ಲ ಎಂದು ಪ್ರಮಾಣಪತ್ರ) ಅನುಮತಿ ನೀಡುವ ಪ್ರಾಧಿಕಾರ ಕಾಯ್ದೆ ಉಲ್ಲಂಘಿಸುತ್ತಿರುವುದು ಕಂಡುಬಂದರೆ ಎನ್‌ಒಸಿಯನ್ನು ಹಿಂತೆಗೆದುಕೊಳ್ಳಬಹುದು ಮತ್ತು ಶಾಲೆಗೆ ನೀಡಿದ ಅನುಮತಿಯನ್ನು ಹಿಂತೆಗೆದುಕೊಳ್ಳಬಹುದಾಗಿದೆ.

ಕಡ್ಡಾಯ ಕನ್ನಡ: 2018-19ನೇ ಶೈಕ್ಷಣಿಕ ವರ್ಷದಿಂದ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಮೊದಲ ಅಥವಾ ಎರಡನೇ ಭಾಷೆಯಾಗಿ ಜಾರಿಗೆ ತರಬೇಕೆಂದು ರಾಜ್ಯ ಸರಕಾರ ಕಡ್ಡಾಯ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News