×
Ad

ಮೀ ಟೂ ಪ್ರಕರಣ: ನಟ ಅರ್ಜುನ್ ಸರ್ಜಾರನ್ನು ಬಂಧಿಸದಂತೆ ಹೈಕೋರ್ಟ್ ಆದೇಶ

Update: 2018-11-02 21:32 IST

ಬೆಂಗಳೂರು, ನ.2: ಬಂಧನದ ಭೀತಿಯಲ್ಲಿದ್ದ ಬಹುಭಾಷಾ ನಟ ಅರ್ಜುನ್ ಸರ್ಜಾಗೆ ಹೈಕೋರ್ಟ್ ರಿಲೀಫ್ ನೀಡಿದೆ.  

ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ನಟಿ ಶ್ರುತಿ ಹರಿಹರನ್ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿದ್ದರಿಂದ ನಟ ಅರ್ಜುನ್ ಸರ್ಜಾಗೆ ಬಂಧನದ ಭೀತಿ ಎದುರಾಗಿತ್ತು. ಆದರೆ, ಶುಕ್ರವಾರ ಎಫ್‌ಐಆರ್ ರದ್ದು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜುನ್ ಸರ್ಜಾರನ್ನ ತನಿಖೆ ಮಾಡಬಹುದು. ಆದರೆ, ಬಂಧಿಸುವಂತಿಲ್ಲ ಎಂದು ಹೇಳಿದೆ.

ಈ ಹಿನ್ನೆಲೆಯಲ್ಲಿ ಅರ್ಜುನ್ ಸರ್ಜಾ ನಿರಾಳರಾಗಿದ್ದಾರೆ. ತನ್ನ ಮೇಲೆ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ನಟ ಅರ್ಜುನ್ ಸರ್ಜಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಿದ ಏಕಸದಸ್ಯ ನ್ಯಾಯಪೀಠ ವಿಚಾರಣೆಯನ್ನು ನವೆಂಬರ್ 14ಕ್ಕೆ ಮುಂದೂಡಿತು.

ಅರ್ಜಿ ವಿಚಾರಣೆ ವೇಳೆ ಹಿರಿಯ ವಕೀಲ ಬಿ.ವಿ. ಆಚಾರ್ಯ ಅವರು ವಾದಿಸಿ, ಮೀ ಟೂ ಅಭಿಯಾನದಲ್ಲಿ ಭಾಗಿಯಾಗಿ ಹೆಸರು ಮಾಡಬೇಕೆಂಬ ಆಸೆಯಿಂದ ಶ್ರುತಿ ಹರಿಹರನ್ ಅವರು ಅರ್ಜುನ್ ಸರ್ಜಾ ಅವರ ಹೆಸರನ್ನು ಬಳಸಿಕೊಂಡಿದ್ದಾರೆ. ಅಲ್ಲದೆ ಅವರು ಮೊದಲಿಗೆ ಫೇಸ್‌ಬುಕ್‌ನಲ್ಲಿ ಹಾಕಿದ್ದ ಪೋಸ್ಟ್‌ಗೂ ಆ ನಂತರ ಪೊಲೀಸರಿಗೆ ನೀಡಿದ ದೂರಿಗೂ ಅಜಗಜಾಂತರ ವ್ಯತ್ಯಾಸವಿದೆ ಹಾಗೂ ಶ್ರುತಿ ಅವರು ಐಪಿಸಿ ಸೆಕ್ಷನ್ ಓದಿ, ವಕೀಲರ ಸಹಾಯ ತೆಗೆದುಕೊಂಡು ದೂರು ನೀಡಿದ್ದಾರೆ ಎಂದು ಇದನ್ನು ಅವರೇ ಹೇಳಿಕೆಯಲ್ಲಿ ನೀಡಿದ್ದಾರೆ. ಶ್ರುತಿ ಅವರು ಸರ್ಜಾ ಅವರನ್ನು ಕೇಸಿನಲ್ಲಿ ಸಿಕ್ಕಿ ಹಾಕಿಸಬೇಕೆಂದೇ ಈ ಆರೋಪ ಹೊರಿಸಿರುವುದು ಇದರಿಂದ ಖಾತ್ರಿ ಆಗುತ್ತದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಈ ಘಟನೆಯು ಏಕಾಂತದಲ್ಲಿ ನಡೆದಿರುವುದಿಲ್ಲ ನಿರ್ಮಾಪಕ ನಿರ್ದೇಶಕರ ಮುಂದೆ ಸಿನಿಮಾದ ತಾಲೀಮು ನಡೆಸುವ ಸಂದರ್ಭದಲ್ಲಿ ನಡೆದ ಘಟನೆಯಾಗಿದ್ದು ಇದು ಉದ್ದೇಶಪೂರ್ವಕವಾಗಿ ಅರ್ಜುನ್ ಸರ್ಜಾರ ಮೇಲೆ ಆರೋಪ ಮಾಡಲಾಗಿದ್ದು, ಇದರಿಂದ ಅರ್ಜುನ್ ಸರ್ಜಾ ಕುಟುಂಬ ಮುಜುಗರಕ್ಕೆ ಈಡಾಗಿದೆ ಎಂದು ನ್ಯಾಯ ಪೀಠಕ್ಕೆ ತಿಳಿಸಿದರು.

ಅರ್ಜುನ್ ಸರ್ಜಾ 37 ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ಅವರು ಹನುಮಾನ್ ಭಕ್ತರಾಗಿದ್ದು, ಚೈನ್ನೈನಲ್ಲಿ 32 ಅಡಿ ಉದ್ದ ಹಾಗೂ 17 ಅಡಿ ಅಗಲದ ಆಂಜನೇಯ ಮೂರ್ತಿ ನಿರ್ಮಿಸುತ್ತಿದ್ದಾರೆ. ಹಿರಿಯರಿಂದ ಹಿಡಿದು ಕಿರಿಯರಿಗೂ ಗೌರವ ನೀಡುವ ವ್ಯಕ್ತಿತ್ವ ಹೊಂದಿದ್ದಾರೆ. ಇಂತಹ ವ್ಯಕ್ತಿತ್ವ ಹೊಂದಿದ್ದ ನಟನ ಮೇಲೆ ಉದ್ದೇಶಪೂರ್ವಕವಾಗಿ ಆರೋಪ ಹೋರಿಸಲಾಗುತ್ತಿದೆ ಎಂದು ಪೀಠಕ್ಕೆ ತಿಳಿಸಿದರು.

ಹಿರಿಯ ವಕೀಲರಾದ ಬಿ.ವಿ.ಆಚಾರ್ಯರ ವಾದವನ್ನು ಆಲಿಸಿದ ನ್ಯಾಯ ಪೀಠ ಮೂರು ವರ್ಷ ಹಳೆಯ ಕೇಸು ಇದಾಗಿರುವ ಕಾರಣ ಪ್ರಕರಣದಲ್ಲಿ ಯಾವುದೇ ತರಾತುರಿ ಬೇಡ, ನ.14ರವರಗೆ ಅರ್ಜುನ್ ಸರ್ಜಾರನ್ನು ಬಂಧಿಸಬಾರದು ಎಂದು ಹೈಕೋರ್ಟ್ ಆದೇಶ ನೀಡಿ. ಪೋಲಿಸರಿಗೆ ತನಿಖೆಯನ್ನು ಮುಂದುವರೆಸುವಂತೆ ಸೂಚಿಸಿ ವಿಚಾರಣೆಯನ್ನು ನ.14ಕ್ಕೆ ಮುಂದೂಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News