×
Ad

ಚಿನ್ನದ ಸರ ಕಳವು ಪ್ರಕರಣ: ಮಹಿಳೆ ಸೆರೆ

Update: 2018-11-02 21:59 IST

ಬೆಂಗಳೂರು, ನ.2: ನಕಲಿ ಚಿನ್ನದ ಸರ ತೋರಿಸಿ, ಅಸಲಿ ಚಿನ್ನದ ಸರ ಕಳವು ಮಾಡಿದ್ದ ಆರೋಪದಡಿ ಮಹಿಳೆಯೊಬ್ಬಳನ್ನು ಬಂಧಿಸಿರುವ ಕೋರಮಂಗಳ ಠಾಣಾ ಪೊಲೀಸರು, 5 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ಶಿವಾಜಿನಗರದ ತಿಮ್ಮಯ್ಯ ರಸ್ತೆಯ ನಿವಾಸಿ ಶಾಂತಿ (38) ಬಂಧಿತ ಆರೋಪಿ ಮಹಿಳೆ ಎಂದು ಪೊಲೀಸರು ಗುರುತಿಸಿದ್ದಾರೆ.

ಶ್ರೀಮಂತರ ಮನೆಗಳಲ್ಲಿ ಮನೆಕೆಲಸಕ್ಕೆ ಸೇರಿಕೊಂಡು ನಂಬಿಕೆ ಗಳಿಸಿ, ಕಳವು ಮಾಡಿದ ಆರೋಪದಡಿ ಆರೋಪಿ ಶಾಂತಿ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಮೊದಲ ಪತಿ ಮೃತಪಟ್ಟ ನಂತರ, ವಿಲಾಸಿ ಜೀವನಕ್ಕೆ ಮಾರುಹೋಗಿದ್ದ ಆರೋಪಿಯು ಮನೆಕಳವು ಮಾಡುತ್ತಿದ್ದು, ಇತ್ತೀಚೆಗೆ ಆಂಧ್ರಪ್ರದೇಶ ಮೂಲದ ರವಿ ಎಂಬಾತನ ಪರಿಚಯ ಮಾಡಿಕೊಂಡು ಪ್ರೀತಿಸಿ ವಿವಾಹವಾಗಿದ್ದಳು ಎಂದು ತಿಳಿದುಬಂದಿದೆ.

ಕೋರಮಂಗಲದಲ್ಲಿ ಮನೆ ಮಾಡಿಕೊಂಡಿದ್ದ ಆರೋಪಿಯು ಜಿಮ್‌ಗಳಲ್ಲಿ, ಅಪಾರ್ಟ್‌ಮೆಂಟ್‌ಗಳಲ್ಲಿ ಮನೆಕೆಲಸ ಕೇಳುವ ನೆಪದಲ್ಲಿ ಹೋಗುತ್ತಿದ್ದಳು. ಈ ವೇಳೆ ಮನೆಗಳ ಬಾಗಿಲು ತೆಗೆದಿದ್ದರೆ, ಕ್ಷಣಾರ್ಧದಲ್ಲಿ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಿ ನಾಪತ್ತೆಯಾಗುತ್ತಿದ್ದಳು. ಕೋರಮಂಗಲದ ಅಪಾರ್ಟ್‌ಮೆಂಟ್ ಒಂದರಲ್ಲಿ ಮನೆಗೆಲಸಕ್ಕೆ ಸೇರಿಕೊಂಡು ಮಾಲಕರ ನಂಬಿಕೆ ಗಳಿಸಿ, ಅವರು ಇಟ್ಟಿರುವ ಚಿನ್ನಾಭರಣಗಳನ್ನು ಗಮನಿಸಿ, ಅವುಗಳಲ್ಲಿ ದುಬಾರಿ ಚಿನ್ನದ ಸರ ಕಳಗೆ ಸಂಚು ರೂಪಿಸಿದ್ದಳು ಎನ್ನಲಾಗಿದೆ.

ನಕಲಿ ಸರ ಬೆಲೆ ಬಾಳುವ ಚಿನ್ನದ ಸರವನ್ನು ಹೋಲುವಂತೆ ನಕಲಿ ಚಿನ್ನದ ಸರವನ್ನು ಶಿವಾಜಿನಗರದಲ್ಲಿ ಮಾಡಿಸಿಕೊಂಡು ಮನೆಯ ಮಾಲಕರಿಗೆ ತಿಳಿಯದಂತೆ, ನಕಲಿ ಸರವನ್ನಿಟ್ಟು, ಅಸಲಿ ಸರವನ್ನು ಕಳವು ಮಾಡಿ, ಅದನ್ನು ಗಿರವಿ ಅಂಗಡಿಯಲ್ಲಿ ಮಾರಾಟ ಮಾಡಿ ಅದರಿಂದ ಬಂದ ಹಣದಿಂದ ವಿಲಾಸಿ ಜೀವನ ನಡೆಸುತ್ತಿದ್ದ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಡಾ. ಬೋರಲಿಂಗಯ್ಯ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News