ಮಾದಕ ವಸ್ತು ಮಾರಾಟ: ಎಂಬಿಎ ಪದವೀಧರ ಸೇರಿ ಇಬ್ಬರ ಬಂಧನ
ಬೆಂಗಳೂರು, ನ.3: ಮಾದಕ ವಸ್ತು ಮಾರಾಟ ಆರೋಪದಡಿ ಎಂಬಿಎ ಪದವೀಧರ ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಮೈಕೋ ಲೇಔಟ್ ಠಾಣಾ ಪೊಲೀಸರು, 9 ಕೆಜಿ 650 ಗ್ರಾಂ ಗಾಂಜಾ ಜಪ್ತಿ ಮಾಡಿ ತನಿಖೆ ಮುಂದುವರೆಸಿದ್ದಾರೆ.
ತೆಲಂಗಾಣದ ಕಮ್ಮಂ ಜಿಲ್ಲೆಯ ಕಮ್ಮಂ ನಗರ ನಿವಾಸಿ ಭಾನುತೇಜ ರೆಡ್ಡಿ(19) ಹಾಗೂ ಮತ್ತಿಕೆರೆಯಲ್ಲಿ ವಾಸವಾಗಿರುವ ಶಿವಮೊಗ್ಗದ ಸೊರಬ ತಾಲೂಕಿನ ಹರೀಶಿ ಅಂಚೆ, ಹೊರಬೈಲು ನಿವಾಸಿ ಸಂಜಯ್ ಕುಮಾರ್(25) ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಬಾನುತೇಜ ರೆಡ್ಡಿ, ಆಂಧ್ರಪ್ರದೇಶದ ವೈಜಾಕ್‌ನಿಂದ ಗಾಂಜಾವನ್ನು ಕಡಿಮೆ ಬೆಲೆಗೆ ಖರೀದಿಸಿ ಅದನ್ನು ಸಂಜಯ್ ಕುಮಾರ್‌ನೊಂದಿಗೆ ಸೇರಿ ಬಿಟಿಎಂ ಲೇಔಟ್ ಸೇರಿದಂತೆ ಹಲವು ಕಡೆ ವಿದ್ಯಾರ್ಥಿಗಳು ಮತ್ತು ಸಾಫ್ಟ್ ವೇರ್ ಇಂಜಿನಿಯರ್‌ಗಳನ್ನು ಗುರಿಯಾಗಿಸಿಕೊಂಡು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
ನಗರದ ಮಡಿವಾಳ ಕೆರೆಯ ಬಳಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ವೇಳೆ ಆರೋಪಿಗಳನ್ನು ಬಂಧಿಸಲಾಗಿದೆ ಎನ್ನಲಾಗಿದ್ದು, ಆರೋಪಿ ಬಾನುತೇಜ ಡಿಪ್ಲೋಮಾ ಹಾಗೂ ಸಂಜಯ್ ಕುಮಾರ್ ಎಂಬಿಎ ಪದವೀಧರರಾಗಿದ್ದು, ಹೆಚ್ಚಿನ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಅವರು ಗಾಂಜಾ ಮಾರಾಟದಲ್ಲಿ ತೊಡಗಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.