ಪದಾಧಿಕಾರಿಗಳಿಂದ ಶಾಲಾ ಶಿಕ್ಷಕರ ಸಂಘದ ಹಣ ದುರ್ಬಳಕೆ: ಆರೋಪ
ಬೆಂಗಳೂರು, ನ. 3: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಗುರಿಕಾರ, ಕಾರ್ಯದರ್ಶಿ, ಖಜಾಂಚಿಗಳು ಶಿಕ್ಷಕರಿಂದ ಕೋಟಿಗಟ್ಟಲೆ ಹಣ ಸಂಗ್ರಹಿಸಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕ ಪುರಸ್ಕೃತ ಶಂಕರಗೌಡ ಬಿ ಪಾಟೀಲ ಆರೋಪಿಸಿದ್ದಾರೆ.
ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದಸ್ಯತ್ವ ಶುಲ್ಕ ದುರ್ಬಳಕೆ, ಸಮ್ಮೇಳನಗಳ ಹೆಸರಲ್ಲಿ ಅಕ್ರಮ, ಶಿಕ್ಷಕರಿಗೆ ಸ್ಮಾರ್ಟ್‌ಕಾರ್ಡ್ ವಿತರಿಸುವಲ್ಲಿ ಮಾಡಿದ ಮೋಸ, ಸುಳ್ಳು ದಾಖಲೆ, ಶಿಕ್ಷಕರ ಸೊಸೈಟಿ ಸ್ಥಾಪಿಸಿ ನಿವೇಶನ ಮಂಜೂರಾತಿಗಾಗಿ ಕೋಟಿಗಟ್ಟಲೆ ಹಣ ಸಂಗ್ರಹಿಸಿ ನಿವೇಶನ ನೀಡಿಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ 1.80ಲಕ್ಷ ಪ್ರಾಥಮಿಕ ಶಾಲಾ ಶಿಕ್ಷಕರಿದ್ದು, ಶಿಕ್ಷಣ ಇಲಾಖೆಯ ಆಯುಕ್ತರ ನಿರ್ದೇಶನದಂತೆ ಪ್ರತಿ ಶಿಕ್ಷಕರಿಂದ 210ರೂ. (ಒಟ್ಟು 3.78 ಕೋಟಿ) ಪಡೆದು ಸಂಘದ ಪರವಾಗಿ ಸ್ಮಾರ್ಟ್‌ಕಾರ್ಡ್ ವಿತರಿಸಬೇಕಿತ್ತು. ಅಲ್ಲದೆ, 2017ರಲ್ಲಿ ರಾಜ್ಯ ಮಟ್ಟದ ಸಮ್ಮೇಳನಕ್ಕೆ 1.80 ಶಿಕ್ಷಕರಿಂದ 300ರೂ. ವಸೂಲಿ ಮಾಡಲಾಗಿದೆ. ಹಾಗೂ ಶಿಕ್ಷಕರ ಕಲ್ಯಾಣ ನಿಧಿಯಿಂದ 25ಲಕ್ಷವನ್ನು ಸಮ್ಮೇಳನಕ್ಕಾಗಿ ಪಡೆದಿದ್ದು, ಇದುವರೆಗೂ ಯಾವುದೇ ಸಮ್ಮೇಳನ ಮಾಡಿಲ್ಲ ಎಂದು ಮಾಹಿತಿ ನೀಡಿದರು.
ಶಾಲಾ ಕರ್ತವ್ಯವನ್ನು ಮಾಡದೆ ಬಿಟ್ಟಿ ಸಂಬಳವನ್ನು ಪಡೆದು, ಶಿಕ್ಷಕರ ಹಣವನ್ನು ನುಂಗಿ ಐಷಾರಾಮಿ ಜೀವನ ನಡೆಸುತ್ತಿರುವ ಇವರ ಬಗ್ಗೆ ಇಲಾಖೆ ಏಕೆ ಮೌನವಹಿಸಿದೆ? ಇಷ್ಟೆಲ್ಲ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿದ್ದರು ಇನ್ನು ಏಕೆ ಇಲಾಖೆಯವರು ಇವರನ್ನು ಅಮಾನತ್ತುಗೊಳಿಸಿಲ್ಲ ಎಂದು ಶಂಕರಗೌಡ ಬಿ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.