ಕಳವು ಪ್ರಕರಣ: 9 ಜನರ ಬಂಧನ, 2.4 ಕೋಟಿ ರೂ. ಮೌಲ್ಯದ ಮಾಲು ಜಪ್ತಿ

Update: 2018-11-03 13:46 GMT

ಬೆಂಗಳೂರು, ನ.3: ಕಳವು ಇನ್ನಿತರೆ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಕಾರ್ಯಾಚರಣೆ ನಡೆಸಿರುವ ಪಶ್ಚಿಮ ವಿಭಾಗದ ಪೊಲೀಸರು 9 ಜನರನ್ನು ಬಂಧಿಸಿ, 2.4 ಕೋಟಿ ರೂ. ಮೌಲ್ಯದ ಮಾಲು ಜಪ್ತಿ ಮಾಡಿದ್ದಾರೆ.

ಆರೋಪಿಗಳಿಂದ, 801 ಗ್ರಾಂ. ಚಿನ್ನಾಭರಣ, 31 ಕಾರುಗಳು, ಒಂದು ಟೆಂಪೋ ಟ್ರಾವಲರ್, 3 ಬೈಕ್ ಹಾಗೂ 2 ಎಲ್‌ಇಡಿ ಟಿವಿಗಳನ್ನು ಜಪ್ತಿ ಮಾಡಿ, 21 ಪ್ರಕರಣಗಳನ್ನು ಭೇದಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಿನ್ನಾಭರಣ ಜಪ್ತಿ: ಕಳವು ಪ್ರಕರಣ ಸಂಬಂಧ ಐವರನ್ನು ಬಂಧಿಸಿರುವ ಚಂದ್ರಾ ಲೇಔಟ್ ಠಾಣಾ ಪೊಲೀಸರು, ಚಿನ್ನಾಭರಣ ಸೇರಿ 40 ಲಕ್ಷ ರೂ. ಮೌಲ್ಯದ ಮಾಲು ಜಪ್ತಿ ಮಾಡಿದ್ದಾರೆ.

ಕೋಲಾರದ ಮಾಲೂರಿನ ವಾಟರ್ ಟ್ಯಾಂಕ್ ಹತ್ತಿರದ ಮಾರಮ್ಮ ದೇವಸ್ಥಾನ ರಸ್ತೆ 2ನೆ ಕ್ರಾಸ್ ನಿವಾಸಿ ಸುಬ್ರಮಣಿ(32), ಮಂಡ್ಯ ತಾಲೂಕಿನ ದುದ್ದ ಹೋಬಳಿಯ ಹೊಳಲು ಗ್ರಾಮ ನಿವಾಸಿ ರಾಜ(31), ಮಂಡ್ಯ ಜಿಲ್ಲೆಯ ದೇವಲಾಪುರ ಹೋಬಳಿಯ ಕೋಟೆಬೆಟ್ಟ ಗ್ರಾಮದ ನಿವಾಸಿ ಶ್ರೀಕಾಂತ್(26), ಲಗ್ಗೆರೆಯ ಪೊಲೀಸ್ ಚೌಕಿ ಹತ್ತಿರದ ಚೌಡೇಶ್ವರಿನಗರ 3ನೆ ಕ್ರಾಸ್ ನಿವಾಸಿ ಅಜಯ್(32), ಆನೇಕಲ್ ನಿವಾಸಿ ಗಿರೀಶ್(34) ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಚಂದ್ರಾ ಲೇಔಟ್, ತ್ಯಾಗರಾಜನಗರ, ಅತ್ತಿಬೆಲೆ, ಸೂರ್ಯನಗರ, ಜ್ಞಾನಭಾರತಿ, ರಾಜಾಜಿನಗರ, ಮಾದನಾಯಕನಹಳ್ಳಿ, ಯಶವಂತಪುರ, ಪುಟ್ಟೇನಹಳ್ಳಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಇವರೆಲ್ಲಾ ಜೈಲು ಶಿಕ್ಷೆ ಅನುಭವಿಸಿ ಇತ್ತೀಚಿಗೆ ಬಿಡುಗಡೆಯಾಗಿದ್ದರು. ಪುನಃ ಇದೇ ಪ್ರವೃತ್ತಿಯನ್ನು ಮುಂದುವರಿಸಿರುವುದು ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಕುಣಿಗಲ್ ಪೊಲೀಸ್ ಠಾಣೆಯ ಒಂದು ದರೋಡೆ, ಚಂದ್ರಾ ಲೇಔಟ್‌ನ 11 ಕನ್ನಗಳವು, ಒಂದು ಮನೆಗಳವು, ಹುಳಿಮಾವು ಠಾಣೆಯ ಒಂದು ಕನ್ನಗಳವು, ಸೇರಿ ಒಟ್ಟು 20 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

23 ಕಾರು ವಶಕ್ಕೆ: ಬಾಡಿಗೆ ನೀಡುವುದಾಗಿ ವಿವಿಧ ನಮೂನೆಯ 23 ಕಾರುಗಳು ಹಾಗೂ ಒಂದು ಟೆಂಪೋ ಟ್ರಾವಲರ್ ವಾಹನ ಪಡೆದು, ಬಾಡಿಗೆಯನ್ನೂ ನೀಡದೆ, ವಾಹನಗಳನ್ನೂ ಹಿಂದಿರುಗಿಸದೆ ವಂಚಿಸಿದ್ದ ಆರೋಪದಡಿ ಇಲ್ಲಿನ ಜ್ಞಾನಭಾರತಿ ಠಾಣಾ ಪೊಲಿಸರು ವ್ಯಕ್ತಿಯೋರ್ವನನ್ನು ಬಂಧಿಸಿ 1.50 ಕೋಟಿ ರೂ.ಬೆಲೆಬಾಳುವ 23 ಕಾರುಗಳು ಹಾಗೂ ಒಂದು ಟೆಂಪೋ ಟ್ರಾವಲರ್ ವಾಹನವನ್ನು ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ.

ಮಂಡ್ಯ ತಾಲೂಕಿನ ದುದ್ದ ಹೋಬಳಿಯ ಗಾಣದಾಳು ಗ್ರಾಮದ ನಿವಾಸಿ ಚೇತನ್ ಕುಮಾರ್(25) ಬಂಧಿತ ಆರೋಪಿ ಎಂದು ತಿಳಿದುಬಂದಿದೆ.

ಕಾರುಗಳು ಮತ್ತು ಟೆಂಪೋ ಪಡೆದು ವಂಚಿಸಿದ್ದ ಬಗ್ಗೆ ಸುನೀಲ್ ಕುಮಾರ್ ನೀಡಿದ ದೂರಿನ ಆಧಾರದಲ್ಲಿ ಆರೋಪಿಯನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಚೇತನ್ ಕುಮಾರ್, ಕಲಾಸಿಪಾಳ್ಯದ ರುಕ್ಕಮ್ಮ ಟೂರ್ಸ್‌ ಆಂಡ್ ಟ್ರಾವೆಲ್ಸ್‌ನಲ್ಲಿ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಮೂವರ ಸೆರೆ: ಓಎಲ್‌ಎಕ್ಸ್‌ನಲ್ಲಿ ಜಾಹೀರಾತು ನೀಡಿ ಕಾರುಗಳನ್ನು ಬಾಡಿಗೆ ಪಡೆದು ವಂಚಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಕೆ.ಪಿ.ಅಗ್ರಹಾರ ಪೊಲೀಸರು, 50 ಲಕ್ಷ ರೂ. ಬೆಲೆ ಬಾಳುವ 6 ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಿದ್ದಾರೆ.

ಕೆ.ಜಿ.ಹಳ್ಳಿಯ ವೆಂಕಟೇಶ್‌ಪುರ ಬಳಿಯ ಕುಶಾಲನಗರದ ನಿವಾಸಿ ನಾಸಿರ್ ಅಹ್ಮದ್ (30), ದಾವಣಗೆರೆಯ ದೇವರಾಜನಗರ ಕ್ವಾಟ್ರಸ್ ನಿವಾಸಿ ಇಮ್ತಿಯಾಝ್ (38) ಹಾಗೂ ಆರ್.ಟಿ.ನಗರ ಕಾವಲ್‌ಭೈರಸಂದ್ರದ ಇಮ್ಮಾಮ್ ಖಾನ್ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಓಎಲ್‌ಎಕ್ಸ್‌ನಲ್ಲಿ ಜಾಹೀರಾತು ನೀಡಿ ಕಾರುಗಳನ್ನು ಬಾಡಿಗೆಗೆ ಪಡೆದುಕೊಂಡು ಬಾಡಿಗೆ ನೀಡದೆ, ವಾಹನಗಳನ್ನೂ ಹಿಂದಿರುಗಿಸದೆ ತಲೆಮರೆಸಿಕೊಂಡಿದ್ದರು. ಈ ಬಗ್ಗೆ ಕೆ.ಪಿ.ಅಗ್ರಹಾರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇವರ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ ಎನ್ನಲಾಗಿದೆ.

ಆರೋಪಿಗಳು ಕಾರುಗಳನ್ನು ಶಿವಮೊಗ್ಗದ ಆದಿಲ್ ಅಹ್ಮದ್ ಮತ್ತು ಚೆನ್ನೈನ ಸುಧಾಕರ್ ಎಂಬವರಿಗೆ ಮಾರಾಟ ಮಾಡಿದ್ದರು. ಆರೋಪಿಗಳು ನೀಡಿದ್ದ ಮಾಹಿತಿ ಮೇರೆಗೆ ಸುಮಾರು 50 ಲಕ್ಷ ರೂ. ಮೌಲ್ಯದ 6 ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News