×
Ad

ನ.10 ರಂದು ಟಿಪ್ಪು ಜಯಂತಿ ಆಚರಣೆ ಮಾಡೇ ಮಾಡುತ್ತೇವೆ: ಸಚಿವೆ ಜಯಮಾಲಾ

Update: 2018-11-03 19:32 IST

ಬೆಂಗಳೂರು, ನ.3: ‘ಮೈಸೂರು ಹುಲಿ’ ಟಿಪ್ಪು ಸುಲ್ತಾನ್ ಜಯಂತಿಯನ್ನು ನವೆಂಬರ್ 10ರಂದು ಆಚರಣೆ ಮಾಡೇ ಮಾಡುತ್ತೇವೆ. ಈ ಸಂಬಂಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಿರ್ಧಾರ ಕೈಗೊಂಡಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಡಾ.ಜಯಮಾಲಾ ತಿಳಿಸಿದರು.

ಶನಿವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಜಯಂತಿ ಆಚರಿಸುವುದು ನಮ್ಮ ಕರ್ತವ್ಯ. ಅದನ್ನು ಮಾಡೇ ಮಾಡುತ್ತೇವೆ. ಟಿಪ್ಪು ಜಯಂತಿ ವಿರೋಧಿಸಿ ಒಂದು ವೇಳೆ ಯಾವುದಾದರೂ ಅಹಿತಕರ ಘಟನೆಗಳು ಜರುಗಿದರೆ ಅದಕ್ಕೆ ಬಿಜೆಪಿಯವರೇ ನೇರ ಹೊಣೆಯಾಗುತ್ತಾರೆ ಎಂದರು.

ಬಿಜೆಪಿ ನಾಯಕರು ತಮ್ಮ ಅಧಿಕಾರವಧಿಯಲ್ಲಿ ಟಿಪ್ಪುಜಯಂತಿ ಆಚರಣೆ ಮಾಡಿರುವುದು ಎಲ್ಲರಿಗೂ ಗೊತ್ತಿದೆ. ಒಂದು ದಿನದ ಆಚರಣೆಯಿಂದ ಜನರಿಗೆ ತೊಂದರೆ ಕೊಡುವುದಾದರೆ, ಅದಕ್ಕೆ ಅವರೇ ಹೊಣೆಗಾರರಾಗುತ್ತಾರೆ. ಜನರಿಗೆ ರಕ್ಷಣೆ ಕೊಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ಬಿಜೆಪಿನೇ ಕಾರಣವಾಗಲಿದೆ ಎಂದು ಜಯಮಾಲಾ ಎಚ್ಚರಿಕೆ ನೀಡಿದರು.

ಟಿಪ್ಪು ಸುಲ್ತಾನ್ ಜಯಂತಿಯಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಎಲ್ಲ ಸಚಿವರು ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದ ಅವರು, ಇಂದು ಟಿಪ್ಪು ಜಯಂತಿ ಸಂಬಂಧ ಯಾವುದೇ ಸಭೆ ನಡೆಸಿಲ್ಲ. ಮಕ್ಕಳ ದಿನಾಚರಣೆ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.

ಮಕ್ಕಳ ಹಬ್ಬ: ರಾಜ್ಯ ಸರಕಾರದ ವತಿಯಿಂದ ಈ ವರ್ಷವೂ ಮಕ್ಕಳ ಹಬ್ಬವನ್ನು ಆಚರಿಸಲಾಗುವುದು. ಪ್ರಥಮ ಪ್ರಧಾನಿ ಜವಾಹರ್‌ಲಾಲ್ ನೆಹರು ಜನ್ಮದಿನದ ಅಂಗವಾಗಿ ನವೆಂಬರ್ 14ರಂದು ಮಕ್ಕಳ ದಿನಾಚರಣೆ ಆಚರಿಸಲಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ರಾಜ್ಯ ಸರಕಾರ ಮಕ್ಕಳ ಹಬ್ಬ ಆಚರಿಸುತ್ತಿದೆ ಎಂದು ಅವರು ಹೇಳಿದರು.

ಈ ಬಾರಿಯೂ ಮಕ್ಕಳ ಹಬ್ಬ ಆಚರಿಸಲಾಗುವುದು. ದೇಶದ ಯಾವುದೇ ರಾಜ್ಯಗಳಲ್ಲಿ ಇಂತಹ ಅಪರೂಪದ ಆಚರಣೆ ಮಾಡುತ್ತಿಲ್ಲ. ಈ ಕಾರ್ಯಕ್ರಮಕ್ಕೆ ಸರಕಾರದ 47 ಇಲಾಖೆಗಳು ಸಹಕಾರ ನೀಡುತ್ತಿವೆ. 30 ಜಿಲ್ಲೆಯ ಬಾಲಮಂದಿರದ ಮೂಲಕ ಮಕ್ಕಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ಜಯಮಾಲಾ ತಿಳಿಸಿದರು.

650 ಮಕ್ಕಳು ಈ ಮಕ್ಕಳ ಹಬ್ಬದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲಿದ್ದು, ಒಟ್ಟಾರೆ ಸುಮಾರು 3 ಸಾವಿರಕ್ಕೂ ಹೆಚ್ಚು ಮಕ್ಕಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಗ್ರಾಮೀಣ ಭಾಗದ ಆಟಗಳಾದ ರಾಗಿ ಬೀಸೋದು, ಬುಟ್ಟಿ ಹೆಣೆಯುವುದು ಸೇರಿದಂತೆ ಅನೇಕ ವಿಚಾರಗಳನ್ನು ಮಕ್ಕಳಿಗೆ ಪರಿಚಯಿಸುವುದು ಇದರ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ಸಂಕಲ್ಪ: ಮಕ್ಕಳ ಕವಿತೆ, ಕವನಗಳನ್ನು ‘ಸಂಕಲ್ಪ’ ಎಂಬ ಪುಸ್ತಕದ ರೂಪದಲ್ಲಿ ನ.10ರಂದು ಬಿಡುಗಡೆ ಮಾಡಲಾಗುವುದು. ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ. ಸಾಧಕ ಮಕ್ಕಳಿಗೆ ಶೌರ್ಯ, ಕೆಳದಿ ಚೆನ್ನಮ್ಮ ಪ್ರಶಸ್ತಿಗಳನ್ನು ರಾಜ್ಯಪಾಲರು ವಿತರಣೆ ಮಾಡಲಿದ್ದಾರೆ. ಈ ಕಾರ್ಯಕ್ರಮ ಬಾಲಭವನದಲ್ಲಿ ನಡೆಯಲಿದೆ ಎಂದು ಅವರು ಹೇಳಿದರು.

ಯಾವ ಮಕ್ಕಳಿಗೆ ಪ್ರಶಸ್ತಿಗಳನ್ನು ನೀಡುತ್ತೇವೆ ಎಂಬುದನ್ನು ನವೆಂಬರ್ 5ರಂದು ಘೋಷಣೆ ಮಾಡುತ್ತೇವೆ. ಮಕ್ಕಳ ಸುರಕ್ಷತೆಗಾಗಿ ಕೈಗೆ ಕಟ್ಟಿಕೊಳ್ಳುವ ಬ್ಯಾಂಡ್ ವಿತರಣೆ ಮಾಡಲಾಗುವುದು ಎಂದು ಜಯಮಾಲಾ ತಿಳಿಸಿದರು.

ರಾಜ್ಯೋತ್ಸವ ಪ್ರಶಸ್ತಿ ವಿಳಂಬ: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಹಾಗೂ ಪ್ರದಾನ ಮಾಡುವುದನ್ನು ಮುಂದೂಡಲಾಯಿತು. ಅಧಿಕಾರಿಗಳು ಹಾಗೂ ನಮ್ಮ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಮುಖ್ಯ ಕಾರ್ಯದರ್ಶಿ ಜೊತೆ ಚರ್ಚೆ ಮಾಡಿ ಈ ತೀರ್ಮಾನ ಕೈಗೊಂಡಿದ್ದಾರೆ ಎಂದು ಅವರು ಹೇಳಿದರು.

ಸಭೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಬಿ.ಝೆಡ್.ಝಮೀರ್‌ ಅಹ್ಮದ್‌ ಖಾನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಸಂಬಂಧ ಸಚಿವೆ ಜಯಮಾಲಾ ಅಧ್ಯಕ್ಷತೆಯಲ್ಲಿ ಚರ್ಚೆ ನಡೆದಿದೆ. ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಸಚಿವ ಝಮೀರ್‌ ಅಹ್ಮದ್‌ ಖಾನ್, ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಮತ್ತೊಂದು ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News