ಖಾಸಗಿ ಶಾಲಾ ವಾಹನಗಳ ಬಳಕೆ ಆರೋಪ: ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು
Update: 2018-11-03 19:33 IST
ಬೆಂಗಳೂರು, ನ. 3: ವಿದ್ಯುನ್ಮಾನ ಮತಯಂತ್ರಗಳ ಸಾಗಾಟಕ್ಕೆ ಬಬಲೇಶ್ವರ ಕ್ಷೇತ್ರದ ಶಾಸಕ ಎಂ.ಬಿ.ಪಾಟೀಲ್ ಮಾಲಕತ್ವದ ಬಿಎಲ್‌ಡಿಇಎ ಶಾಲಾ ವಾಹನ ಬಳಕೆಗೆ ನಿರ್ಬಂಧ ಹೇರಬೇಕೆಂದು ಕೋರಿ ಬಿಜೆಪಿ, ಚುನಾವಣಾ ಆಯೋಗಕ್ಕೆ ಶನಿವಾರ ದೂರು ನೀಡಿದೆ.
ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯಕ್ಕೆ ತೆರಳುವ ಸಿಬ್ಬಂದಿ ಹಾಗೂ ಇವಿಎಂಗಳ ಸಾಗಾಟಕ್ಕೆ ಮೇಲ್ಕಂಡ ಶಿಕ್ಷಣ ಸಂಸ್ಥೆಗೆ ಸೇರಿದ ವಾಹನಗಳನ್ನು ಬಳಕೆ ಮಾಡಲಾಗುತ್ತಿದೆ. ಆದರೆ, ಶಿಕ್ಷಣ ಸಂಸ್ಥೆ ಮಾಲಕರು ಒಂದು ಪಕ್ಷದ ಪ್ರಭಾವಿ ಮುಖಂಡರಾಗಿದ್ದಾರೆ.
ಆದುದರಿಂದ ಕೂಡಲೇ ಖಾಸಗಿ ಶಾಲಾ ವಾಹನಗಳಲ್ಲಿ ಇವಿಎಂ ಸಾಗಾಟಕ್ಕೆ ನಿರ್ಬಂಧ ಹೇರಬೇಕು. ಅಲ್ಲದೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ) ಗೆ ಸೇರಿದ ವಾಹನಗಳನ್ನು ಚುನಾವಣಾ ಕರ್ತವ್ಯಕ್ಕೆ ಬಳಕೆ ಮಾಡಿಕೊಳ್ಳಬೇಕು. ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿ ಬಿಜೆಪಿ ವಕ್ತಾರ ಗೋ.ಮಧುಸೂದನ್ ಆಯೋಗಕ್ಕೆ ದೂರು ನೀಡಿದ್ದಾರೆ.