ಯು.ಬಿ.ವೆಂಕಟೇಶ್-ಪ್ರಕಾಶ್ ರಾಥೋಡ್‌ಗೆ ಸಿದ್ದರಾಮಯ್ಯ ಅಭಿನಂದನೆ

Update: 2018-11-03 14:06 GMT

ಬೆಂಗಳೂರು, ನ.3: ರಾಜ್ಯ ಸರಕಾರದ ವತಿಯಿಂದ ವಿಧಾನಪರಿಷತ್ತಿಗೆ ನೂತನವಾಗಿ ನಾಮ ನಿರ್ದೇಶಿತಗೊಂಡ ಕಾಂಗ್ರೆಸ್‌ನ ಯು.ಬಿ.ವೆಂಕಟೇಶ್ ಹಾಗೂ ಪ್ರಕಾಶ್ ರಾಥೋಡ್‌ರನ್ನು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಶನಿವಾರ ತಮ್ಮ ನಿವಾಸದಲ್ಲಿ ಅಭಿನಂದಿಸಿದರು.

ಪ್ರಕಾಶ್ ರಾಥೋಡ್: ಎಸ್.ಎಂ.ಕೃಷ್ಣ ಸರಕಾರದ ಅವಧಿಯಲ್ಲಿ ಒಮ್ಮೆ ವಿಧಾನಪರಿಷತ್ತಿನ ಸದಸ್ಯರಾಗಿದ್ದರು. 2014ರಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಆದರೆ, ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿ ವಿರುದ್ಧ ಸೋಲು ಅನುಭವಿಸಿದ್ದರು. ಮೂಲತಃ ಕ್ರಿಕೆಟಿಗರಾಗಿರುವ ಪ್ರಕಾಶ್ ರಾಥೋಡ್, ಪಕ್ಷದ ಸಂಘಟನೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇವರನ್ನು ಕ್ರೀಡಾ ಕೋಟಾದಡಿಯಲ್ಲಿ ಪರಿಷತ್‌ಗೆ ನಾಮ ನಿರ್ದೇಶನಗೊಳಿಸಲಾಗಿದೆ.

ಯು.ಬಿ.ವೆಂಕಟೇಶ್: ಕೋಲಾರ ಮೂಲದ ಉದ್ಯಮಿಯಾಗಿರುವ ಯು.ಬಿ.ವೆಂಕಟೇಶ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. 2013ರಲ್ಲಿ ಬೆಂಗಳೂರು ದಕ್ಷಿಣ ಹಾಗೂ 2018ರಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಾಕಷ್ಟು ಪ್ರಯತ್ನ ಪಟ್ಟಿದ್ದರು.

ಆದರೆ, ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯಾ ರೆಡ್ಡಿ ಸ್ಪರ್ಧೆ ಅಂತಿಮಗೊಳ್ಳುತ್ತಿದ್ದಂತೆ, ಇವರಿಗೆ ವಿಧಾನಪರಿಷತ್ತಿಗೆ ನಾಮ ನಿರ್ದೇಶನ ಗೊಳಿಸುವುದಾಗಿ ಪಕ್ಷದ ವರಿಷ್ಠರು ಭರವಸೆ ನೀಡಿದ್ದರು. ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಯು.ಬಿ.ವೆಂಕಟೇಶ್‌ರನ್ನು ಪತ್ರಿಕೋದ್ಯಮ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿರುವ ಕೊಡುಗೆ ಹಿನ್ನೆಲೆಯಲ್ಲಿ ವಿಧಾನಪರಿಷತ್ತಿಗೆ ನಾಮ ನಿರ್ದೇಶನಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News